ಪತ್ನಿ ಪದ್ಮಾವತಿಯನ್ನು ಕೊಂದು ಮಲವಂತಿಗೆಯ ಸುಮಂತ್ ಜೈನ್ ಆತ್ಮಹತ್ಯೆ-ಪ್ರೀತಿಸಿ ಮದುವೆಯಾಗಿದ್ದರು-ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಸಿದ್ಧತೆ ಮಾಡಿದ್ದರು

0

ಬೆಳ್ತಂಗಡಿ: ಬೆಂಗಳೂರಿನ ರಾಜೇಶ್ವರಿ ನಗರದ ಲಗ್ಗೆರೆ ಬಳಿಯ ಬ್ಯಾಂಕ್ ಲೇಔಟ್‌ನಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಮೂಲದ ಸುಮಂತ್ ಜೈನ್ (೩೨) ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೊಲೆಯಾದ ಪದ್ಮಾವತಿ(೨೯) ಅವರೂ ಮೂಲತಃ ಮಲವಂತಿಗೆ ಗ್ರಾಮದ ಎಳನೀರಿನವರಾಗಿದ್ದಾರೆ. ಬೆಂಗಳೂರು ವೈಟ್ ಫೀಲ್ಡ್ ಸಮೀಪದ ಕಂಪನಿಯಲ್ಲಿ ಪದ್ಮಾವತಿ ಉದ್ಯೋಗಿಯಾಗಿದ್ದರು. ಸುಮಂತ್ ಜೈನ್ ಸಂಸ್ಥೆಯೊಂದರಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರು. ಆ.೧೪ರಂದು ರಾತ್ರಿ ಇವರಿಬ್ಬರ ನಡುವೆ ಕಲಹ ನಡೆದಿತ್ತು.
ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಪದ್ಮಾವತಿಯನ್ನು ಸುಮಂತ್ ಕೊಲೆ ಮಾಡಿದ್ದಾರೆ. ನಂತರ ತನ್ನ ತಾಯಿಗೆ ನಾನು ಸಾಯುತ್ತಿzನೆ ಎಂದು ವಾಟ್ಸಾಪ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ತನ್ನ ಪಿಎಫ್ ಹಣ ಹಾಗೂ ಮನೆಯಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ವಾಯ್ಸ್ ಮೆಸೇಜ್‌ನಲ್ಲಿ ತಿಳಿಸಿ ಬಳಿಕ ಸುಮಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪದ್ಮಾವತಿ ಮತ್ತು ಸುಮಂತ್ ಜೈನ್ ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ದಂಪತಿ ನಡುವೆ ಪರಸ್ಪರ ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಸುಮಂತ್ ತನ್ನ ಪತ್ನಿ ಪದ್ಮಾವತಿ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಪದ್ಮಾವತಿ ಅವರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆಯೇ ಆತಂಕಗೊಂಡು ಮನೆಯ ಹಾಲ್‌ನಲ್ಲಿರುವ ಫ್ಯಾನ್‌ಗೆ ಸುಮಂತ್ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇವರು ಶ್ರೀಲಂಕಾ ಪ್ರವಾಸಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ವಿಚಾರವನ್ನು ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಎಳನೀರಿನಲ್ಲಿ ಇಬ್ಬರ ಅಂತ್ಯ ಸಂಸ್ಕಾರ: ಸುಮಂತ್ ಜೈನ್ ಮತ್ತು ಪದ್ಮಾವತಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಿದ ಬಳಿಕ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ಎಳನೀರಿನಲ್ಲಿ ನಡೆಸಲಾಗಿದೆ. ಎಳನೀರಿನ ರಾಜ್ ಕುಮಾರ್ ಅವರ ಪುತ್ರರಾದ ಸುಮಂತ್ ಜೈನ್ ಅವರ ಅಂತ್ಯ ಸಂಸ್ಕಾರ ಅವರ ಜಮೀನಿನಲ್ಲಿ ನಡೆದಿದೆ. ಪದ್ಮಾವತಿ ಅವರ ಅಂತ್ಯ ಸಂಸ್ಕಾರ ಅವರ ತಾಯಿ ರೋಹಿಣಿಯವರ ಮೂಲ ಮನೆಯಾದ ಎಳನೀರಿನಲ್ಲಿ ನಡೆದಿದೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುಮಂತ್ ಜೈನ್ ಮತ್ತು ಪದ್ಮಾವತಿ ಅವರ ನಡುವೆ ಪದೇ ಪದೇ ಮನಸ್ತಾಪ ಉಂಟಾಗುತ್ತಿತ್ತು. ಅದನ್ನು ಕುಟುಂಬದವರ ಸಮ್ಮುಖದಲ್ಲಿ ಸರಿ ಪಡಿಸುವ ಪ್ರಯತ್ನ ನಡೆದಿತ್ತು ಎಂದು ತಿಳಿದು ಬಂದಿದೆ. ಸುಮಂತ್ ಹಾಗೂ ಪದ್ಮಾವತಿ ಅವರ ಮುಂಗೋಪದ ಸ್ವಭಾವವೇ ಕೃತ್ಯಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪದ್ಮಾವತಿಯವರ ತಾಯಿ ಎಳನೀರಿನವರು: ಪತಿಯಿಂದ ಕೊಲೆಯಾದ ಪದ್ಮಾವತಿಯವರ ತಾಯಿ ರೋಹಿಣಿ ಮೂಲತ: ಮಲವಂತಿಗೆ ಗ್ರಾಮದ ಎಳನೀರಿನವರು. ರೋಹಿಣಿ ಅವರನ್ನು ಧಾರವಾಡ ನಿವಾಸಿಗೆ ಮದುವೆ ಮಾಡಿಕೊಡಲಾಗಿತ್ತು. ಸುಮಂತ್ ಜೈನ್ ಮತ್ತು ಪದ್ಮಾವತಿಯವರು ಮೂಲತಃ ಎಳನೀರಿನವರಾದ ಕಾರಣ ಹಲವು ವರ್ಷಗಳಿಂದ ಪರಸ್ಪರ ಪರಿಚಯ ಇತ್ತು. ಈ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಪ್ರೇಮ ವಿವಾಹವಾಗಿದ್ದರು.

LEAVE A REPLY

Please enter your comment!
Please enter your name here