ಬೆಳ್ತಂಗಡಿ ತಾಲೂಕು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ-ಜನರ ಜೀವನೋಪಾಯಕ್ಕೆ ತೊಂದರೆ ನೀಡುವ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳಬಾರದು : ರಕ್ಷಿತ್ ಶಿವರಾಂ

0

ನೆರಿಯ ಗ್ರಾಮ ಪಂಚಾಯತ್ ವಠಾರದಲ್ಲಿ ಆ.16ರಂದು ಮೊದಲ ಜನಜಾಗೃತಿ ಸಭೆ ನಡೆಸಲು ನಿರ್ಧಾರ ಬೆಳ್ತಂಗಡಿ : ಕಸ್ತೂರಿರಂಗನ್ ವರದಿಯನ್ನು ಬಲವಂತವಾಗಿ ಜಾರಿಗೊಳಿಸಬೇಡಿ-ಪಶ್ಚಿಮ ಘಟ್ಟ, ರೈತರು ಹಾಗೂ ಜನರ ರಕ್ಷಿಸಿ ಎಂದು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿಯು ಆ.14ರಂದು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ರಕ್ಷಿತ್ ಶಿವರಾಂ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದ್ದರೂ, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ತಲೆತಲಾಂತರಗಳಿಂದ ಬದುಕು ಕಟ್ಟಿಕೊಂಡಿರುವ ರೈತರು, ಕೃಷಿಕರು ಹಾಗೂ ಗ್ರಾಮೀಣ ಜನರ ಜೀವನೋಪಾಯಕ್ಕೆ ತೊಂದರೆ ಉಂಟಾಗುವ ಯಾವುದೇ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳಬಾರದು.

ಕೇಂದ್ರ ಸರ್ಕಾರವು ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿದು, ಕರ್ನಾಟಕ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು, ರೈತರು, ಗ್ರಾಮಸಭೆಗಳು ಹಾಗೂ ಪರಿಸರ ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಹೊಸ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿ ಈ ಬಗ್ಗೆ ನೆರಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಭಾನುವಾರದಂದು ಜನಜಾಗೃತಿ ಸಭೆ ನಡೆಸಲಿದ್ದೇವೆ ಎಂದರು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕಿನ ಗ್ರಾಮಗಳ ಬಗ್ಗೆ ಮಾಹಿತಿ ನೀಡಿ ಸಮಿತಿಯ ಬೇಡಿಕೆಗಳನ್ನು ತಿಳಿಸಿದರು.ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಬಿ. ಎಂ. ಭಟ್ ಮಾತನಾಡಿ ಕಸ್ತೂರಿ ರಂಗನ್ ವರದಿಯಲ್ಲಿ ಸೂಚಿಸಲಾಗಿರುವ ಶಿಫಾರಸ್ಸುಗಳು ಹಾಗೂ ಅಪಾಯಗಳ ಬಗ್ಗೆ ತಿಳಿಸಿ, ಈಗಿನ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕರಾದ ಬಿ.ಎಮ್ ಭಟ್, ಜಯಾನಂದ ಪಿಲಿಕಲ, ಅಶ್ರಫ್‌ ನೆರಿಯ, ಪಿ ಟಿ ಸಬಾಸ್ಟಿನ್ ಕಳೆಂಜ, ಗಣೇಶ್ ಕಣಾಲು, ಎಂ.ಕೆ. ಪ್ರಸಾದ್, ಪ್ರಶಾಂತ್ ವೇಗಸ್, ರಮಾನಂದ ಸಾಲಿಯಾನ್, ಲೋಕೇಶ್ವರಿ ವಿನಯಚಂದ್ರ, ಲಕ್ಷ್ಮಣ ಗೌಡ, ನೇಮಿರಾಜ್ ಕಿಲ್ಲೂರ್, ದೀಪಕ್ ಎಚ್ ಡಿ ನಾಲ್ಕೂರು, ಸುಕುಮಾರ್ ಹಾಗೂ ಲಕ್ಷ್ಮಣ ನೆರಿಯ ಉಪಸ್ಥಿತರಿದ್ದರು. ಸಹ ಸಂಚಾಲಕರಾದ ಎಂ.ಕೆ. ಪ್ರಸಾದ್ ಸ್ವಾಗತಿಸಿ, ಶೇಖರ್ ಲಾಯಿಲ ವಂದಿಸಿದರು.

LEAVE A REPLY

Please enter your comment!
Please enter your name here