







ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ಇತ್ತೀಚೆಗೆ “ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆ” ವಿ-ಪ್ರೇರಣಾ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾರ್ಕಳದ ಪ್ರಸಿದ್ಧ ವಾಗ್ಮಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ಮುನಿರಾಜ ರೆಂಜಾಳ ರವರು ಮಾತನಾಡಿ, ವಿದ್ಯೆ ಎಂಬುದು ಒಂದು ಆಸ್ತಿ. ನಿಮ್ಮ ತಂದೆ ತಾಯಿ ಮಾಡಿಟ್ಟ ಆಸ್ತಿಗಿಂತ ನೀವು ಪಡೆಯುವ ವಿದ್ಯೆಯೇ ಬಹುದೊಡ್ಡ ಆಸ್ತಿಯಾಗಿರುತ್ತದೆ. ಪ್ರಾಥಮಿಕ ಆಸ್ತಿಯಾಗಿ ನೀವು ಪಡೆದ ವಿದ್ಯೆಯನ್ನು ನಿಮ್ಮ ಹೆಸರಿನ ಮುಂದೆ ಬರೆಯುತ್ತೇವೆಯೇ ಹೊರತು ನಿಮ್ಮ ಹೆಸರಿನಲ್ಲಿ ಪೋಷಕರು ಮಾಡಿಟ್ಟಿರುವ ಆಸ್ತಿ ಎಷ್ಟಿದೆ ಎಂದು ಯಾರು ಬರೆಯುವುದಿಲ್ಲ ಎಂದು ಹೇಳಿದರು.



ಶಿಕ್ಷಣ ಎಂದರೆ ಕೇವಲ ಒಂದು ಪ್ರಮಾಣ ಪತ್ರವಲ್ಲ ಅದೊಂದು ಸಂಸ್ಕಾರ. ಈ ಸಮಾಜದಲ್ಲಿ ನೀವು ಹೇಗೆ ಬದುಕಬೇಕೆಂಬುದನ್ನು ಕಲಿಸಿ, ಬದುಕಲು ಶಕ್ತಿ ನೀಡುವ ಕಲೆಯೇ ಶಿಕ್ಷಣ ಎಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ಧನಾತ್ಮಕವಾದ ಚಿಂತನೆಯನ್ನು ನೀವು ಮಾಡಬೇಕು ಅದು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡ್ಯೊಯುತ್ತದೆ. ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಕುಗ್ಗಬಾರದು. ಬೀಳುವುದು ಸೋಲಲ್ಲ ಬಿದ್ದಾಗ ಎದ್ದು ನಿಲ್ಲದೆ ಇರುವುದು ಸೋಲು.ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ಅದಕ್ಕೆ ಪರಿಹಾರವನ್ನು ಹುಡುಕಲು ಕಲಿಯಬೇಕು ಎಂದು ಹೇಳಿದರು. ಮನೆ, ಕಾಲೇಜು ಮತ್ತು ಸಮಾಜ ಇಲ್ಲೆಲ್ಲಿಯೂ ನಿಮಗೆ ಜೀವನ ಮೌಲ್ಯಗಳನ್ನು ಕಲಿಸುವುದಿಲ್ಲ ಮೌಲ್ಯಗಳನ್ನು ನೀವಾಗಿಯೇ ಕಲಿತುಕೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವೈಯುಕ್ತಿಕ ಮೌಲ್ಯಗಳು,ಸಾಮಾಜಿಕ ಮೌಲ್ಯಗಳು, ರಾಷ್ಟ್ರೀಯ ಮೌಲ್ಯಗಳು ಈ ಮೂರು ರೀತಿಯ ಮೌಲ್ಯವನ್ನು ನೀವೆಲ್ಲರೂ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿ ಬದುಕು ಕಟ್ಟಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಋಣಪ್ರಜ್ಞೆ ಬಹಳ ಮುಖ್ಯ: ಶಿಕ್ಷಣ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೆ ತಮ್ಮ ಈ ಸಾಧನೆಗೆ ಕಾರಣೀಭೂತರಾದ ಪೋಷಕರು,ಶಿಕ್ಷಕರು ಮತ್ತು ಈ ಸಮಾಜಕ್ಕೆ ಋಣಿಯಾಗಿರಬೇಕು ನಿಮಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಸಂಸ್ಕಾರ ಪಡೆಯುವಂತೆ ಮಾಡಿದ ತಂದ ತಾಯಿಯ ಮೇಲೆ ಋಣಪ್ರಜ್ಞೆ ಇರಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಟ್ರಸ್ಟಿಗಳಾದ ಯೋಗೇಶ್ ಬೆಡೆಕರ್, ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಡಾ. ಶರತ್ ಗೋರೆ,ಸುಭಾಷ್ ಝಾ,ಕಾಲೇಜು ಆಡಳಿತಾಧಿಕಾರಿ ಅರುಣ್ ಡಿಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಅಪರ್ಣಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು









