






ಬೆಳ್ತಂಗಡಿ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಜು.೧೬ರಂದು ಸಂಜೆ ೫.೩೦ರ ವೇಳೆಗೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯೆಪದವು ಸಮೀಪದ ಕೊಡಂಗೆ ನಿವಾಸಿ ಬಾಳಪ್ಪ ಗೌಡ ಅವರ ಪುತ್ರಿ ಲಾವಣ್ಯ(೨೧) ಅವರನ್ನು ಹತ್ಯೆ ಮಾಡಿದ ಆರೋಪಿಯಾಗಿರುವ ಬೆಳ್ತಂಗಡಿ ತಾಲೂಕಿನ ಓಡಿಳ್ನಾಲ ಗ್ರಾಮದ ಪಣೆಜಾಲು ಸಮೀಪದ ಕರ್ನಂತೋಡಿಯ ಪುರುಷೋತ್ತಮ ಗೌಡರ ಪುತ್ರ ಚೇತನ್(೨೨)ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ಕಳೆದ ಎಂಟು ತಿಂಗಳಿನಿಂದ ನರ್ಸ್ ಆಗಿದ್ದ ಲಾವಣ್ಯ ತನ್ನನ್ನು ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಆಕೆಯನ್ನು ತಲವಾರಿನಿಂದ ಕಡಿದು ಕೊಲೆ ಮಾಡಿ ತನ್ನ ಕಾರಿನಲ್ಲಿ ಪರಾರಿಯಾಗಿದ್ದ ಚೇತನ್ನನ್ನು ಮರು ದಿನ ಮಂಗಳೂರು ವಾಮಂಜೂರು ಸಮೀಪದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ಬಂಧಿಸಲಾಗಿತ್ತು. ಈ ವೇಳೆ ತಾನು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಚೇತನ್ ತಿಳಿಸಿದ ಹಿನ್ನೆಲೆಯಲ್ಲಿ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆತನನ್ನು ೧೧ ದಿನಗಳ ಬಳಿಕ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ನ್ಯಾಯಾಲಯ ಆತನ ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಬಳಿಕ ಚೇತನ್ ಗೌಡನ ವಿಚಾರಣೆ ನಡೆಸಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಉಪ್ಪಿನಂಗಡಿಯಲ್ಲಿ ಮಹಜರು: ಲಾವಣ್ಯ ಅವರ ಕೊಲೆಗೆ ಬಳಸಿದ್ದ ಮಾರಾಕಾಸ್ತ್ರವನ್ನು ಚೇತನ್ ಉಪ್ಪಿನಂಗಡಿಯ ಅಂಗಡಿಯಲ್ಲಿ ಖರೀದಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ಕರೆದುಕೊಂಡು ಬಂದು ಮಹಜರು ಪ್ರಕ್ರಿಯೆ ನಡೆಸಲಾಯಿತು. ಉಪ್ಪಿನಂಗಡಿಗೆ ಆಗಮಿಸಿ ಚೇತನ್ ಅಲ್ಲಿ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಅಲ್ಲಿ ಕೃಷಿಕರು ಬಳಕೆಗೆ ಬೇಕಾಗುವ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆಯನ್ನು ಕೇಳಿದ್ದ. ಬಳಿಕ ಅಲ್ಲಿಂದ ಹೋರ ಹೋಗಿ ಬೇರೆಲ್ಲೋ ವಿಚಾರಿಸಲು ಯತ್ನಿಸಿ ಮರಳಿ ಅದೇ ಮಳಿಗೆಗೆ ಬಂದು ಕತ್ತಿ ಖರೀದಿಸಿದ್ದ. ಕಾಗದದಿಂದ ಸುತ್ತುವರೆದು ಪ್ಯಾಕ್ ಮಾಡಲಾದ ಕತ್ತಿಯನ್ನು ಅಲ್ಲೇ ಸ್ವಲ್ಪ ಹೊತ್ತು ಇರಿಸಿ ಹೊರ ಹೋದಾತ ಬಳಿಕ ಬಂದು ಕತ್ತಿಯನ್ನು ಪಡೆದುಕೊಂಡು ಹೋಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಮಹಜರು ನಡೆಸಿದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.









