






ಬೆಳ್ತಂಗಡಿ: ಮಂಗಳೂರು ಸಿಸಿಬಿ ಪೊಲೀಸರಿಂದ ಪತ್ತೆಯಾಗಿರುವ ಬೃಹತ್ ಮಾದಕ ದ್ರವ್ಯ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಳ್ತಂಗಡಿಯ ಬಾಬಾ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾನ ಪತ್ತಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆತನ ಮೇಲೆ ಆರೋಪಗಳು ಕೇಳಿಬಂದು ೧೦ ದಿನ ಕಳೆದರೂ ಆತ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಜಲೀಲ್ ವಿದೇಶಕ್ಕೆ ಹಾರಿದ್ದಾನೆ ಎಂಬ ಮಾತುಗಳು ಹರಿದಾಡುತ್ತಿದ್ದರೂ ಪೊಲೀಸರು ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.


ಸಮಾಜಸೇವೆಯ ಮೂಲಕವೂ ಗುರುತಿಸಿಕೊಂಡಿದ್ದ ಜಲೀಲ್ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆಂಬ್ಯುಲೆನ್ಸ್ ವಾಹನವನ್ನು ಬಳಸಿಕೊಂಡು ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಎಂದು ಆರೋಪ ವ್ಯಕ್ತವಾಗಿದೆ. ಪ್ರಕರಣದಲ್ಲಿ ತನ್ನ ಹೆಸರು ದಾಖಲಾಗುತ್ತಿದ್ದಂತೆಯೇ ಜಲೀಲ್ ಬಾಬಾ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಸಿಸಿಬಿ ಹಾಗೂ ಮಂಗಳೂರು ಪೊಲೀಸರು ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ. ದೆಹಲಿಯಿಂದ ಮಾದಕ ವಸ್ತುಗಳನ್ನು ಕಾರುಗಳ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಬೆಂಗಳೂರನ್ನು ಮುಖ್ಯ ವಿತರಣಾ ಕೇಂದ್ರವಾಗಿ ಬಳಸಿಕೊಂಡು ಅಲ್ಲಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಡ್ರಗ್ಸ್ ಸಾಗಿಸಲಾಗುತ್ತಿತ್ತು.
ಈ ದಾರಿಯಲ್ಲಿ ಪೊಲೀಸರ ತಪಾಸಣೆಯಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಜಲೀಲ್ ಬಾಬಾ ತನ್ನ ಬಾಬಾ ಆಂಬ್ಯುಲೆನ್ಸ್ ಬಳಸುತ್ತಿದ್ದ. ಆಂಬ್ಯುಲೆನ್ಸ್ಗಳನ್ನು ಸಾಮಾನ್ಯವಾಗಿ ಪೊಲೀಸರು ತೀವ್ರವಾಗಿ ತಪಾಸಣೆ ಮಾಡುವುದಿಲ್ಲ ಎಂಬ ಅಂಶವನ್ನೇ ಬಂಡವಾಳ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಜಲೀಲ್ ಬಾಬಾನ ಆಪ್ತರ ಮೂಲಕ ಆತನನ್ನು ಪತ್ತೆ ಹಚ್ಚಲೂ ಪೊಲೀಸರು ಪ್ರಯತ್ನ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.









