







ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಪಣೆಜಾಲು ಸಮೀಪದ ಕರ್ನಂತೋಡಿ ನಿವಾಸಿ ಪುರುಷೋತ್ತಮ ಗೌಡ ಎಂಬವರ ಪುತ್ರ ಚೇತನ್(೨೨) ಎಂಬಾತ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಸಮೀಪದ ಕೊಡಂಗೆ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ(೨೧) ಎಂಬಾಕೆಯನ್ನು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜು.೧೬ರಂದು ಸಂಜೆ ನಡೆದಿದೆ. ತಾನು ಏಕಮುಖವಾಗಿ ಪ್ರೀತಿಸುತ್ತಿದ್ದ ದೂರದ ಸಂಬಂಧಿ ಲಾವಣ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ನಂತರ ತನ್ನ ಕಾರಿನಲ್ಲಿ ಪರಾರಿಯಾಗಿದ್ದ ಚೇತನ್ನನ್ನು ಜು.೧೭ರಂದು ಬೆಳಿಗ್ಗೆ ಪೊಲೀಸರು ಮಂಗಳೂರು ವಾಮಂಜೂರು ಸಮೀಪದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಬಳಿ ಬಂಧಿಸಿದ್ದಾರೆ. ಬಂಧನದ ವೇಳೆ ತಾನು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಚೇತನ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾನು ಲಾವಣ್ಯಳನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಆಕೆ ನನ್ನನ್ನು ಪ್ರೀತಿಸಲು ನಿರಾಕರಿಸಿದಳು. ನನಗೆ ಸಿಗದ ಅವಳು ಬೇರೆ ಯಾರಿಗೂ ಸಿಗಬಾರದು ಎಂಬ ಉzಶದಿಂದ ಕೊಲೆ ಮಾಡಿದೆ ಎಂದು ಚೇತನ್ ಪೊಲೀಸರಿಗೆ ತಿಳಿಸಿದ್ದಾನೆ. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪುತ್ತೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡಿದ್ದ ಲಾವಣ್ಯ ಅವರು ಕಳೆದ ಎಂಟು ತಿಂಗಳಿನಿಂದ ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿದ್ದ ಚೇತನ್ ಬೆಂಗಳೂರಿನಲ್ಲಿ ಒಂದು ತಿಂಗಳಿನಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಲಾವಣ್ಯ ಅವರನ್ನು ಚೇತನ್ ಪ್ರೀತಿಸುತ್ತಿರುವ ವಿಚಾರ ಎರಡೂ ಮನೆಯವರಿಗೆ ಗೊತ್ತಿತ್ತು. ಚೇತನ್ ಮನೆಯವರು ಪ್ರೀತಿಗೆ ವಿರೋಧ ಮಾಡಿರಲಿಲ್ಲ. ಲಾವಣ್ಯ ಅವರ ಮನೆಯವರು ಪ್ರೀತಿಗೆ ವಿರೋಧ ಮಾಡಿದ್ದರು. ಹಾಗಾಗಿ ಚೇತನ್ನನ್ನು ಲಾವಣ್ಯ ದೂರ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಚೇತನ್ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಚೇತನ್ ಮತ್ತು ಲಾವಣ್ಯ ಅವರ ಮನೆಯವರು ಕೃಷಿ ಕುಟುಂಬದವರಾಗಿದ್ದಾರೆ.
ಕೊಲೆಯ ವಿವರ: ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಲಾವಣ್ಯ ಅವರು ಜು.೧೬ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಮರಳುವ ಸಲುವಾಗಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಕಕ್ಯಪದವಿಗೆ ಹೋಗುವ ಬಸ್ ಹತ್ತಿದ್ದರು. ಚೇತನ್ ತನ್ನ ಕಾರಿನಲ್ಲಿ ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದ. ಆಕೆ ಬಸ್ಸಿನೊಳಗೆ ಸೀಟೊಂದರಲ್ಲಿ ಕುಳಿತಿದ್ದಾಗ ಚೇತನ್ ಬಸ್ ಹತ್ತಿದ್ದ. ಈ ವೇಳೆ ಲಾವಣ್ಯ ಅವರು ತನ್ನ ಅಕ್ಕ ಚೈತ್ರಾ ಅವರಿಗೆ ದೂರವಾಣಿ ಕರೆ ಮಾಡಿ ತನ್ನ ಪಕ್ಕದಲ್ಲಿ ಚೇತನ್ ಕುಳಿತಿದ್ದಾನೆ ಎಂದು ತಿಳಿಸಿದ್ದಾರೆ. ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ. ನಂತರ ಲಾವಣ್ಯ ಬಸ್ನಿಂದ ಕೆಳಗಿಳಿದಿದ್ದಾರೆ. ಅವರು ಇಳಿದ ತಕ್ಷಣ ಚೇತನ್ ಆಕೆಯನ್ನು ಬೆನ್ನಟ್ಟಿದ್ದಾನೆ. ಜತೆಗೆ ತನ್ನ ಬ್ಯಾಗ್ನಿಂದ ಹರಿತವಾದ ಆಯುಧವನ್ನು ಹೊರ ತೆಗೆದಿದ್ದಾನೆ. ಲಾವಣ್ಯ ಅವರು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯನ್ನ ಬೆನ್ನಟ್ಟಿದ ಚೇತನ್ ಬಸ್ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ತಲವಾರಿನಿಂದ ಕಡಿದಿದ್ದಾನೆ. ಸ್ವಲ್ಪ ದೂರ ಓಡುತ್ತಲೇ ಆಕೆ ಕುಸಿದು ಬಿದ್ದಿದ್ದಾರೆ. ಬಿದ್ದ ಲಾವಣ್ಯ ಅವರಿಗೆ ಮತ್ತೊಮ್ಮೆ ಕಡಿದ ಚೇತನ್ ಕತ್ತಿಯನ್ನು ಅಲ್ಲಿಯೇ ಬಿಟ್ಟು ಸ್ವಲ್ಪ ದೂರು ಓಡಿಕೊಂಡು ಹೋಗಿದ್ದಾನೆ. ನಂತರ ಅಲ್ಲಿಯೇ ತುಸು ದೂರದಲ್ಲಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯರನ್ನು ತಕ್ಷಣವೇ ಸಾರ್ವಜನಿಕರು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗಾಗಲೇ ಆಕೆ ಕೊನೆಯುಸಿರೆಳೆದಿದ್ದರು. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಪರಿಶೀಲನೆ ನಡೆಸಿದ ಬಳಿಕ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ಹಂತಕನ ಪತ್ತೆಗಾಗಿ ಪೊಲೀಸರ ತಂಡ ರಚಿಸಿದ್ದಾರೆ. ಮರು ದಿನ ಚೇತನ್ ಪಚ್ಚನಾಡಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಆತ ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲಾವಣ್ಯ ಚಲನವಲನ ಗಮನಿಸಿದ್ದ ಚೇತನ್: ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಸ್ಗಳು ಕಡಿಮೆ ಸಂಖ್ಯೆಯಲ್ಲಿ ಬರುತ್ತವೆ. ಹೀಗಾಗಿ ಇಲ್ಲಿ ಪ್ರಯಾಣಿಕರ ದಟ್ಟಣೆಯೂ ಇರುವುದಿಲ್ಲ. ಇದನ್ನು ನೋಡಿಕೊಂಡೇ ಚೇತನ್ ಈ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ. ಘಟನೆ ನಡೆದ ವೇಳೆ ಸ್ಥಳದಲ್ಲಿ ಹಾಗೂ ಬಸ್ನಲ್ಲಿ ಕೆಲವೇ ಸಂಖ್ಯೆಯಲ್ಲಿದ್ದ ಪ್ರಯಾಣಿಕರು, ಕೆಎಸ್ಸಾರ್ಟಿಸಿ ಸಿಬ್ಬಂದಿ ಆಘಾತಕ್ಕೊಳಗಾಗಿದ್ದು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಆಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ಕಳೆದ ಎಂಟು ತಿಂಗಳಿಂದ ಕೆಲಸ ಮಾಡುತ್ತಿದ್ದ ಲಾವಣ್ಯ ಪ್ರತಿದಿನ ಬೆಳಗ್ಗೆ ಬಿ.ಸಿ.ರೋಡಿಗೆ ಕಕ್ಯಪದವಿನಿಂದ ತೆರಳುವ ಬಸ್ನಲ್ಲಿ ಬಂದು ಅಲ್ಲಿಂದ ಕಲ್ಲಡ್ಕಕ್ಕೆ ಹೋಗುತ್ತಿದ್ದರು. ಸಂಜೆ ೬ ಗಂಟೆಗೆ ಹೊರಡುವ ಕಕ್ಯಪದವು ಬಸ್ನಲ್ಲಿ ಮರಳುತ್ತಿದ್ದರು. ಚೇತನ್ ಈಕೆಯ ಮೇಲೆ ದಾಳಿ ಮಾಡುವ ಉzಶದಿಂದಲೇ ಚಲನವಲನಗಳನ್ನು ಮೊದಲೇ ಅರಿತುಕೊಂಡು ಬಸ್ ನಿಲ್ದಾಣದ ಬಳಿ ಹೊಂಚು ಹಾಕಿ ಕುಳಿತಿದ್ದ. ಆಕೆ ಬಸ್ ಹತ್ತಿದ್ದನ್ನು ಗಮನಿಸಿ ಆತ ಕೂಡ ಬಸ್ ಒಳಗೆ ಆಗಮಿಸಿದ್ದಾನೆ. ಕೂಡಲೇ ಭಯಗೊಂಡ ಲಾವಣ್ಯ ಬಸ್ನಿಂದ ಇಳಿಯಲು ಯತ್ನಿಸಿದಾಗ ತನ್ನ ಬ್ಯಾಗಿನಿಂದ ತಲವಾರಿನಂಥ ಆಯುಧದಿಂದ ದಾಳಿ ನಡೆಸಿ ಓಡಿದ್ದಾನೆ. ಅಲ್ಲಿ ಇದ್ದ ಕಾರೊಂದರಲ್ಲಿ ಆತ ಪರಾರಿಯಾಗಿದ್ದಾನೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ೧೦ ದಿನದ ಅಂತರದಲ್ಲಿ ನಡೆದ ಎರಡನೇ ದುಷ್ಕೃತ್ಯ ಇದಾಗಿದೆ. ಈ ಘಟನೆಯಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಜು.೬ರಂದು ಕಾಲೇಜಿಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಬಂಟ್ವಾಳ ಮಂಚಿ ನಿವಾಸಿ ಮೊಹಮ್ಮದ್ (೨೮) ಎಂಬಾತ ಮೊಂತಿಮಾರು ಪಡು ಬಸ್ ನಿಲ್ದಾಣದಲ್ಲಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಬಳಿಕ ಆರೋಪಿ ಪೊಲೀಸ್ ಠಾಣೆಗೆ ಶರಣಾಗಿದ್ದ.
ಏಕಮುಖ ಪ್ರೀತಿಗೆ ಬಲಿಯಾದ ಲಾವಣ್ಯ-ಘಟನೆಗೆ ಸಾಕ್ಷಿಯಾದ ವೀಡಿಯೋ: ತನ್ನ ದೂರದ ಸಂಬಂಧಿಯಾಗಿರುವ ಲಾವಣ್ಯ ಅವರನ್ನು ಚೇತನ್ ಪ್ರೀತಿಸುತ್ತಿದ್ದ. ಆದರೆ ತನ್ನ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಲಾವಣ್ಯ ಪ್ರೀತಿಗೆ ನಿರಾಕರಿಸಿದ್ದರು. ಏಕಮುಖವಾಗಿ ಪ್ರೀತಿಸುತ್ತಿದ್ದ ಚೇತನ್ ತನ್ನ ಪ್ರೇಮ ವೈಫಲ್ಯ ಆಗಿರುವ ಹಿನ್ನೆಲೆಯಲ್ಲಿ ಕೋಪಗೊಂಡು ಕೊಚ್ಚಿ ಕೊಲೆ ಮಾಡಿದ್ದಾನೆ. ಲಾವಣ್ಯ ಅವರಿಗೆ ಚೇತನ್ ತಲವಾರಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ನಲ್ಲಿ ಸೆರೆಯಾಗಿದ್ದು ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರಕರಣದ ತನಿಖೆಗೆ ಇದು ಪ್ರಮುಖ ಸಾಕ್ಷಿಯಾಗಿದೆ.
ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಚೇತನ್-ಲಾವಣ್ಯ ಬಾವ ಗೌತಮ್ರಿಂದ ದೂರು ದಾಖಲು: ಲಾವಣ್ಯ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಬಾವ ಉಳಿ ಗ್ರಾಮದ ಕಕ್ಯಪದವು ನಿವಾಸಿಯಾಗಿರುವ ಗೌತಮ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಪತ್ನಿ ಚೈತ್ರಾ ಹಾಗೂ ಆಕೆಯ ತಂಗಿ ಲಾವಣ್ಯ ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು ಲಾವಣ್ಯಗೆ ಜು.೧೭ರಂದು ಹಗಲು ಪಾಳಿ ಕೆಲಸವಿದ್ದು ಆಕೆಯ ಅಕ್ಕ ಚೈತ್ರಾಗೆ ರಾತ್ರಿ ಪಾಳಿ ಕರ್ತವ್ಯ ಇತ್ತು. ಗುರುವಾರ ಸಂಜೆ ಸುಮಾರು ೫.೪೫ ಗಂಟೆಗೆ ಚೈತ್ರಾ ನನ್ನ ಮೊಬೈಲ್ ಕರೆ ಮಾಡಿ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಲಾವಣ್ಯ ಕಕ್ಯಪದವಿಗೆ ಬರಲು ಕುಳಿತುಕೊಂಡಿದ್ದು, ಆಕೆಗೆ ಚೇತನ್ ಎಂಬಾತ ಕಿರುಕುಳ ನೀಡುತ್ತಿದ್ದಾನೆ. ನೀವು ಲಾವಣ್ಯಳ ಮೊಬೈಲ್ಗೆ ಕರೆ ಮಾಡಿ ಎಂದು ತಿಳಿಸಿದ್ದಳು. ಅದರಂತೆ ನಾನು ಕರೆ ಮಾಡಿದಾಗ ಲಾವಣ್ಯ ಕರೆಯನ್ನು ಸ್ವೀಕರಿಸಿ ಚೇತನ್ ಎಂಬಾತನು ಕಿರುಕುಳ ನೀಡಿದ್ದು ಸತ್ಯ ಎಂದು ಹೇಳುವಷ್ಟರಲ್ಲಿ ಆಕೆ ಜೋರಾಗಿ ಕಿರುಚುವುದು ಕೇಳಿ ಬಂದಿದೆ. ನಾನು ಕೂಡಲೇ ಬಿ.ಸಿ.ರೋಡ್ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಅಜಯ್ ಎಂಬವರಿಗೆ ಕರೆ ಮಾಡಿ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚೇತನ್ ಎಂಬಾತನು ನನ್ನ ಪತ್ನಿಯ ತಂಗಿ ಲಾವಣ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ. ನೀನು ಕೂಡಲೇ ಅಲ್ಲಿಗೆ ಹೋಗು ಎಂದು ತಿಳಿಸಿದ್ದೆ. ಅಲ್ಲಿಗೆ ಹೋಗುತ್ತೇನೆಂದು ಹೇಳಿ ಅಜಯ್ ಕಾಲ್ ಕಟ್ ಮಾಡಿದ್ದಾರೆ.
ಸುಮಾರು ೧೦ ನಿಮಿಷದ ನಂತರ ನನಗೆ ಕರೆ ಮಾಡಿದ ಅಜಯ್ `ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಕೊಲೆಯಾಗಿದೆ. ನೀನು ಕೂಡಲೇ ಬಾ’ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಬೆಳ್ತಂಗಡಿ ಸರಳಿಕಟ್ಟೆಯಿಂದ ಊರವರಾದ ಸುರೇಶ್, ವಸಂತ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಿರುವಾಗ ಲಾವಣ್ಯಳ ಮೃತ ದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ನೇರವಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬಂದು ಲಾವಣ್ಯಳ ಮೃತದೇಹವನ್ನು ನೋಡಿದ್ದೆ. ಆಕೆಯ ತಲೆ ಹಿಂಬದಿ ಆಳವಾದ ಗಾಯವಾಗಿರುವುದನ್ನು ನೋಡಿದ್ದೆ. ಘಟನಾ ಸ್ಥಳದಲ್ಲಿ ಬ್ಯಾಗ್, ರಕ್ತದ ಕಲೆ ಹಾಗೂ ಲಾವಣ್ಯಳನ್ನು ಕಡಿದು ಕೊಲೆ ಮಾಡಲು ಉಪಯೋಗಿಸಿದ ತಲವಾರು ಬಿದ್ದಿರುವುದನ್ನು ಘಟನಾ ಸ್ಥಳಕ್ಕೆ ಹೋಗಿದ್ದ ಅಜಯ್ ಅವರಿಂದ ತಿಳಿದು ಬಂದಿರುತ್ತದೆ. ಚೇತನ್ ಎಂಬಾತನು ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದು ಆತ ಕೆಲವು ಸಮಯದಿಂದ ಪ್ರೀತಿಸುವಂತೆ ಲಾವಣ್ಯಳನ್ನು ಒತ್ತಾಯ ಮಾಡುತ್ತಿದ್ದ.
ಆದರೆ ಲಾವಣ್ಯ ಇದನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಚೇತನ್ ಗುರುವಾರ ಸಂಜೆ ೫:೩೦ ಗಂಟೆಗೆ ಲಾವಣ್ಯ ಕೆಲಸ ಮುಗಿಸಿ ಮನೆಗೆ ಬರಲು ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬರುವುದನ್ನು ತಿಳಿದು ಆಕೆಯನ್ನು ಕೊಲೆ ಮಾಡುವ ಉzಶದಿಂದ ತಲವಾರನ್ನು ತೆಗೆದುಕೊಂಡು ಬಂದು ಸಂಜೆ ೫:೩೦ ಗಂಟೆಯಿಂದ ಸಂಜೆ ೬:೦೦ ಗಂಟೆಯ ಮಧ್ಯದ ಅವಧಿಯಲ್ಲಿ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಆಕೆಯನ್ನು ಹಿಂಬಾಲಿಸಿ ತಡೆದು ನಿಲ್ಲಿಸಿ ಮಾರಕ ಆಯುಧವಾದ ತಲವಾರಿನಿಂದ ತಲೆಯ ಹಿಂಬದಿಗೆ ಕಡಿದು ಕೊಲೆ ಮಾಡಿ ತಲವಾರನ್ನು ಅಲ್ಲಿಯೇ ಬಿಸಾಕಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಗೌತಮ್ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ, ಕಲಂ ೭೮,೧೨೬,೧೦೩ ಬಿಎನ್ಎಸ್ ಮತ್ತು ಶಸ್ತ್ರಾಸ್ತ್ರ ಕಾಯ್ದೆ ೧೯೫೯ ಕಲಂ ೨೫ ಮತ್ತು ೨೭ರಡಿ ಪ್ರಕರಣ ದಾಖಲಾಗಿದೆ.
ಚೇತನ್ಗೆ ಗಲ್ಲು ಶಿಕ್ಷೆ ವಿಧಿಸಲು ಉಳಿ ಗ್ರಾಮಸ್ಥರ ಮನವಿ: ಲಾವಣ್ಯ ಅವರನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಚೇತನ್ಗೆ ನ್ಯಾಯಾಲಯ ಕಾನೂನಿನ ಪ್ರಕಾರ ಗಲ್ಲುಶಿಕ್ಷೆ ವಿಧಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾನುವಾರ ಕಕ್ಯಪದವಿನಿಂದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ನಮ್ಮ ಗ್ರಾಮದ ಅಮಾಯಕ ಹೆಣ್ಣು ಮಗಳು ಲಾವಣ್ಯ ಅವರ ಹತ್ಯೆ ನಡೆದಿರುವುದು ಇಡೀ ಸಮಾಜವನ್ನು ತೀವ್ರ ದುಃಖ, ಆಘಾತ ಮತ್ತು ಆತಂಕಕ್ಕೆ ಒಳಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಪ್ರಕರಣದ ತನಿಖೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳಿಸಿ ಎಲ್ಲ ಅಗತ್ಯ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಬಲವಾದ ದೋಷಾರೋಪಣಾ ಪತ್ರ ಸಲ್ಲಿಸುವಂತೆ ವಿನಂತಿಸಿದ ಗ್ರಾಮಸ್ಥರು ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಲಾವಣ್ಯ ಕುಟುಂಬಕ್ಕೆ ನ್ಯಾಯ ದೊರಕುವುದರ ಜೊತೆಗೆ ಸಮಾಜದಲ್ಲಿ ಇಂಥ ಭೀಕರ ಅಪರಾಧಗಳಿಗೆ ತಡೆ ಉಂಟಾಗುತ್ತದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಪೊಲೀಸ್ ಇಲಾಖೆ ಸಂತ್ರಸ್ತರ ಕುಟುಂಬದ ಜತೆಗಿದ್ದು ಆರೋಪಿಗೆ ಕಠಿಣ ಶಿಕ್ಷೆ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಸಹಿತ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಎದ್ದಿರುವ ಆತಂಕಗಳನ್ನು ಗ್ರಾಮಸ್ಥರು ಮಂಡಿಸಿದ ವೇಳೆ ಈ ಕುರಿತು ಪೊಲೀಸ್ ಇಲಾಖೆ ಗಮನಹರಿಸಲಿದ್ದು ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಿದೆ ಎಂದು ಅಡಿಷನಲ್ ಎಸ್ಪಿ ತಿಳಿಸಿದರು. ವಿವಿಧ ಗ್ರಾಮಸಭೆಗಳ ಸಂದರ್ಭ ಪೊಲೀಸ್ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ಹಾಗೂ ಧೈರ್ಯ ತುಂಬುವ ಕೆಲಸವಾಗಬೇಕು ಎಂದು ಗ್ರಾಮಸ್ಥರು ಇದೇ ವೇಳೆ ಮನವಿ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಮೈರ, ಮಾಜಿ ಉಪಾಧ್ಯಕ್ಷ ವಸಂತ ಸಾಲಿಯಾನ್, ಪ್ರಮುಖರಾದ ಮಂಜುನಾಥ ಸಾಲ್ಯಾನ್, ಗುರುಪ್ರಸಾದ್, ತಿಲಕ್ ಮತ್ತಿತರರು ಉಪಸ್ಥಿತರಿದ್ದರು.
ಲಾವಣ್ಯ ಹತ್ಯೆಗೆ ಉಳಿ ಗ್ರಾಮಸಭೆಯಲ್ಲಿ ಖಂಡನೆ: ಲಾವಣ್ಯ ಅವರ ಹತ್ಯೆಯನ್ನು ಅವರ ಊರಾದ ಉಳಿ ಗ್ರಾಮಸಭೆಯಲ್ಲಿ ಖಂಡಿಸಲಾಗಿದೆ. ಬಂಟ್ವಾಳ ತಾಲೂಕಿನ ಉಳಿ ಗ್ರಾಮ ಪಂಚಾಯತ್ನ ಪ್ರಥಮ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯತ್ ಸುವರ್ಣ ಸಭಾ ಭವನದಲ್ಲಿ ನಡೆಯಿತು. ಗ್ರಾಮದ ಹಿರಿಯರಾದ ರಾಮಪ್ಪ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ವ್ಯವಸ್ಥಾಪಕಪ್ರಕಾಶ್ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಬಿ.ಸಿ.ರೋಡ್ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಿ ಗ್ರಾಮದ ಕೊಡಂಗೆ ನಿವಾಸಿ ಲಾವಣ್ಯ ಗೌಡ ಅವರ ಹತ್ಯೆಯನ್ನು ಸಭೆಯಲ್ಲಿ ಖಂಡಿಸಲಾಯಿತಲ್ಲದೆ ಸಂತಾಪ ಸೂಚಿಸಲಾಯಿತು. ಪಿಡಿಒ ವಿದ್ಯಾಶ್ರೀ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ವಸಂತ ಸಾಲ್ಯಾನ್ ಮತ್ತಿತರರು ಭಾಗವಹಿಸಿದ್ದರು.
ಲಾವಣ್ಯ ಮನೆಗೆ ನಳಿನ್ ಕುಮಾರ್, ರಾಜೇಶ್ ನಾಕ್, ಉಮಾನಾಥ ಕೋಟ್ಯಾನ್, ಭಾಗೀರಥಿ, ಮಠಂದೂರು ಭೇಟಿ: ಲಾವಣ್ಯ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಬಿಜೆಪಿ ಮುಖಂಡರ ನಿಯೋಗ ಭಾನುವಾರ ಭೇಟಿ ನೀಡಿ ಹೆತ್ತವರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಯುವತಿ ಲಾವಣ್ಯಳ ಹತ್ಯೆಯನ್ನು ಖಂಡಿಸಿದ ನಿಯೋಗ ಈ ಕೃತ್ಯ ಅತ್ಯಂತ ನೋವು ಮತ್ತು ಆಘಾತಕಾರಿ ಘಟನೆಯಾಗಿದೆ. ಪ್ರಕರಣದ ಆರೋಪಿಗೆ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರಲ್ಲದೆ ಕುಟುಂಬಕ್ಕೆ ನ್ಯಾಯ ದೊರಕಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಜನಪ್ರತಿನಿಧಿಗಳು ಇಂತಹ ದುರ್ಘಟನೆಗಳು ಮರುಕಳಿಸದಂತೆ ಸರಕಾರ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ, ಸುರೇಶ್ ಮೈರ, ವಸಂತ ಉಳಿ, ರಂಜಿತ್ ಮೈರ, ಅಜಿತ್ ಶೆಟ್ಟಿ ಕಾರಿಂಜ, ಸತೀಶ್ ಶೆಟ್ಟಿ ಮಧ್ವ, ಯಶವಂತ ಕಜೆಕಾರು, ಶಶಿಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ: ಬಿ.ಸಿ. ರೋಡ್ನಲ್ಲಿ ನಡೆದ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ ಆತ ಕಡಿದು ಓಡುತ್ತಿರುವುದನ್ನು ಸಾರ್ವಜನಿಕರೊಬ್ಬರು ಶೂಟ್ ಮಾಡಿದ್ದು ವೈರಲ್ ಆಗಿದೆ. ಆ ದೃಶ್ಯಗಳೇ ಕೊಲೆಯ ಭೀಕರತೆಯನ್ನು ಸಾರುತ್ತಿವೆ. ಚೇತನ್ನನ್ನು ಎನ್ಕೌಂಟರ್ ಮಾಡಬೇಕು ಎಂದು ಸಾರ್ವಜನಿಕರು ಘಟನಾ ಸ್ಥಳದಲ್ಲಿ ಒತ್ತಾಯಿಸುತ್ತಿದ್ದರು. ಜೊತೆಗೆ ಆತನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಕೂಡ ಆಗ್ರಹಿಸುತ್ತಿದ್ದರು.
ಟಾರ್ಗೆಟ್ ಸ್ಪಾಟ್!: ಲಾವಣ್ಯ ಗೌಡ ಹತ್ಯೆ ಯಾದ ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಪರಿಸರ ಹತ್ಯೆ, ಹಲ್ಲೆಯಂತಹ ಘಟನೆಗಳಿಗೆ ಟಾರ್ಗೆಟ್ ಸ್ಪಾಟ್ ಆಗುತ್ತಿದೆ. ಇಲ್ಲಿ ಸರಿಯಾದ ಸುರಕ್ಷತಾ ವ್ಯವಸ್ಥೆಗಳು ಇಲ್ಲದೇ ಇರುವುದರಿಂದಲೇ ಸಾರ್ವಜನಿಕರೆದುರೇ ಈ ರೀತಿಯ ಪೈಶಾಚಿಕ ಕೃತ್ಯ ನಡೆದಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ೯ ವರ್ಷಗಳ ಹಿಂದೆ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆ ನಡೆದ ಉದಯ ಲಾಂಡ್ರಿ ಇರುವುದು ಇದೇ ಬಸ್ಸು ನಿಲ್ದಾಣದ ಪಕ್ಕ. ಕೆಲವು ಸಮಯದ ಹಿಂದೆ ಬುರ್ಖಾ ಧರಿಸಿಕೊಂಡು ಬಂದು ತನ್ನ ಪತಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಸೋಮಯಾಜಿ ಟೆಕ್ಸ್ಟೈಲ್ ಇರುವುದು ಈ ಬಸ್ಸು ನಿಲ್ದಾಣದ ಇನ್ನೊಂದು ಪಾರ್ಶ್ವದಲ್ಲಿ. ಇದೀಗ ಬಸ್ಸು ನಿಲ್ದಾಣದಲ್ಲಿಯೇ ಲಾವಣ್ಯ ಹಂತಕನಿಂದ ಹತರಾಗಿದ್ದಾರೆ.
ರಾಜಕೀಯ, ಕೋಮು ಪ್ರಚೋದಕ ಸಂದೇಶ: ಐದು ಪ್ರತ್ಯೇಕ ಪ್ರಕರಣ ದಾಖಲು: ಗುರುವಾರ ಸಂಜೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಲಾವಣ್ಯ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ರಾಜಕೀಯ ಹಾಗೂ ಕೋಮು ಪ್ರಚೋದಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿಸುವವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದುವರೆಗೆ ಒಟ್ಟು ೫ ಪ್ರಕರಣಗಳು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶ್ರೀರಾಮ ಸೇನೆ ಕಾರ್ಕಳ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ಹರ್ಷ ಕೆ. ಶೆಟ್ಟಿ ಎಂಬಾತನ ಮೊಬೈಲ್ ಸಂಖ್ಯೆಯಿಂದ ಯುವತಿಯ ಕೊಲೆ ಮಾಡಿದ ಆರೋಪಿ ಬಿಲ್ಲವ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕುರಿತು ಸುಳ್ಳು ಬರೆದು ವೀಡಿಯೊ ಮತ್ತು ಪೋಸ್ಟರ್ ಮೂಲಕ ಬಿಲ್ಲವ ಸಮಾಜವನ್ನು ನಿಂದಿಸಿ ಕೆಟ್ಟ ಸುದ್ದಿ ಹಬ್ಬಿಸಿರುವ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕಿರಣ್ ಆರಾಧ್ಯ ಎಂಬ ಟ್ವಿಟ್ಟರ್ ಖಾತೆಯಲ್ಲಿ ಯುವತಿಯನ್ನು ಚೇತನ್ ಕತ್ತಿಯಿಂದ ಕೊಚ್ಚಿ ಕೊಲ್ಲುತ್ತಿರುವ ವೀಡಿಯೊ ಚಿತ್ರಣವನ್ನು ಅಪ್ಲೋಡ್ ಮಾಡಿದ್ದಲ್ಲದೆ ಎಡಗೈಯಲ್ಲಿ ವಾಚ್ ಕಟ್ಟಿಕೊಂಡ ಪ್ಯಾಂಟ್ಗಳು ಪಾದಕ್ಕಿಂತ ಮೇಲಿರುವ ರಾಕ್ಷಸನೊಬ್ಬ ಹುಡುಗಿಯನ್ನು ಬಂಟ್ವಾಳ ಬಸ್ ನಿಲ್ದಾಣದಲ್ಲಿ ಕೊಂದಿದ್ದಾನೆ. ಆತನನ್ನು ಬಂಧಿಸಿದರೂ ಕಾಂಗ್ರೆಸ್ ಕೇಸನ್ನು ಹಿಂಪಡೆಯುತ್ತದೆ ಎಂಬ ವಿಶ್ವಾಸ ಹೊಂದಿದ್ದು ಕೂಡಲೇ ಕೇಸು ದಾಖಲಿಸಬೇಕು ಎಂಬ ಬರಹವಿರುವುದನ್ನು ಪೋಸ್ಟ್ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದಂತೆ ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈಗಾಗಲೇ ಟ್ರೋಲ್ ಮಾಸ್ಟರ್ ಇನ್ಸ್ಟಾಗ್ರಾಂ ಖಾತೆ, ಯುವ ಬೆಳ್ತಂಗಡಿ ವಾಟ್ಸ್ ಆಪ್ ಗ್ರೂಪ್, ಪದ್ಮರಾಜ್ ಪದ್ಮರಾಜ್ ವಾಟ್ಸಾಪ್ ಗ್ರೂಪ್, ಯುವ ಕಾಂಗ್ರೆಸ್ ಬೆಳ್ತಂಗಡಿ ವಾಟ್ಸ್ಆಪ್ ಗ್ರೂಪ್, ಫ್ಯಾಕ್ಟ್ ಆಂಡ್ ಜಸ್ಟೀಸ್ ವಾಟ್ಸಾಪ್ ಗ್ರೂಪ್, ಹಿಬ ಫಾತಿಮ, ರಫೀಕ್, ಅಲಿಝ ಅಲಿಫ, ಅನ್ವರ್, ರಶೀದ್ ಮತ್ತು ಉದೈಫ್ ಅನಕ್ಕಲ್ ಫೇಸ್ ಬುಕ್ ಖಾತೆ ವಿರುದ್ಧ ಪ್ರಕರಣ ದಾಖಲಾಗಿದೆ. ಶೈಲಜಾ ಅಮರನಾಥ್ ಫೇಸ್ಬುಕ್ ಖಾತೆ ಹಾಗೂ ಚೇತನ್ ಬೆಳ್ಚಡ ಫೇಸ್ಬುಕ್ ಖಾತೆ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಬಜರಂಗದಳದ ವಿರುದ್ಧ ಸುಳ್ಳು ಸುದ್ದಿ: ಪ್ರಕರಣ ದಾಖಲು: ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ ಭಜರಂಗ ದಳದ ಮುಖಂಡ ಚೇತನ ಹಾಗೂ ಭಜರಂಗ ದಳದ ಶಾಖೆಯಿಂದ ತರಬೇತಿ ಪಡೆದಿದ್ದ ಎಂಬ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ದತೆ ಕದಡುವ ಯತ್ನ ನಡೆಸಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಶ್ವಹಿಂದೂ ಪರಿಷದ್ ಮುಂದಾಳು ಕೇಶವರವರು ದೂರು ದಾಖಲಿಸಿದ್ದಾರೆ. ಆರೋಪಿಯ ತಿರುಚಿದ ಭಾವಚಿತ್ರ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸ್ಆಪ್ ಗುಂಪುಗಳು ಮತ್ತು ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ವ್ಯಾಪಕವಾಗಿ ಹಂಚಲಾಗಿದೆ. ಇದರಿಂದ ಸಮಾಜದಲ್ಲಿ ಕೋಮು ಉದ್ವಿಗ್ನತೆ ಮತ್ತು ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಪ್ರಕರಣ ದಾಖಲು ಮಾಡಲಾಗಿದೆ.


ಅಂತ್ಯ ಸಂಸ್ಕಾರ: ಮುಗಿಲು ಮುಟ್ಟಿದ ಆಕ್ರಂದನ: ಕೊಲೆಗೀಡಾದ ಲಾವಣ್ಯ ಅವರ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಮಹಿಳಾ ವೈದ್ಯೆ ಸಹಿತ ಪರಿಣಿತ ವೈದ್ಯರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುವ ಪೊಲೀಸ್ ಅಧಿಕಾರಿಗಳ ಸೂಚನೆಯ ಮೇರೆಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಬಿಟ್ಟು ಕೊಡಲಾಯಿತು. ಬಳಿಕ ಮೃತದೇಹವನ್ನು ಉಳಿ ಗ್ರಾಮದ ಕಕ್ಕೆಪದವಿನ ಕೊಡಂಗೆಗೆ ಆಂಬ್ಯಲೆನ್ಸ್ನಲ್ಲಿ ತಂದು ಮನೆ ಸಮೀಪದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ಸಂದರ್ಭ ಜನಸ್ತೋಮವೇ ಸೇರಿತ್ತು. ಮೃತದೇಹ ಮನೆ ತಲುಪುತ್ತಿದ್ದಂತೆಯೇ ಕುಟುಂಬ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ದ.ಕ.ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹಿಂದೂ ಸಂಘಟನೆ ಮುಖಂಡ ಶರಣ್ ಪಂಪ್ವೆಲ್, ಕೆಸಿಡಿಸಿ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಮುಖರಾದ ಬೇಬಿ ಕುಂದರ್, ಹರಿಕೃಷ್ಣ ಬಂಟ್ವಾಳ, ಪಿಯೂಸ್ ರೋಡ್ರಿಗಸ್, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಚೆನ್ನಪ್ಪ ಕೋಟ್ಯಾನ್ ಮತ್ತಿತರರು ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಎರಡು ಮನೆಯಲ್ಲೂ ಸ್ಮಶಾನ ಮೌನ: ಕಕ್ಯಪದವಿನ ಬಾಳಪ್ಪ ಗೌಡರ ಮೂರನೇ ಪುತ್ರಿ ಲಾವಣ್ಯ ಚುರುಕಿನ ಯುವತಿಯಾಗಿದ್ದರು. ಮನೆಯಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿದ್ದರು. ನಗು ನಗುತ್ತಾ ಎಲ್ಲರನ್ನೂ ಕೂಡ ಮಾತನಾಡಿಸುತ್ತಾ ಇದ್ದ ಲಾವಣ್ಯ ಎಲ್ಲೂ ಕೂಡ ತನ್ನ ಮನೆ ಮಂದಿಯನ್ನು ಬಿಟ್ಟು ಕೊಡುತ್ತಿರಲಿಲ್ಲ. ಅಪ್ಪ ಅಮ್ಮನ ಮುದ್ದಿನ ಮಗಳು ಲಾವಣ್ಯ ಅಕ್ಕಂದಿರ ಮುದ್ದಿನ ತಂಗಿಯೂ ಆಗಿದ್ದರು. ಲಾವಣ್ಯಳ ಹತ್ಯೆಯಿಂದ ಆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಇಡೀ ಮನೆ ಕಣ್ಣೀರ ಕೋಡಿ ಹರಿಸುತ್ತಿದೆ. ಮತ್ತೊಂದೆಡೆ ಪ್ರಕರಣದ ಆರೋಪಿಯಾಗಿರುವ ಓಡಿಲ್ನಾಳದ ಚೇತನ್ನ ತಂದೆ ತಾಯಿಯದ್ದೂ ಪರಿಸ್ಥಿತಿ ಅದೋಗತಿಯಾಗಿದೆ. ಮಗ ಇಂತಹ ಅಮಾನುಷ ಕೃತ್ಯ ಮಾಡಿದ ನಂತರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಚೇತನ್ ತಂದೆ ಪುರುಷೋತ್ತಮ ಗೌಡ, ತಾಯಿ ಗೀತಾ ಹಾಗೂ ಅಕ್ಕ ಘಟನೆ ನಡೆದ ದಿನದಿಂದ ಕಣ್ಣೀರಿಡುತ್ತಿದ್ದಾರೆ. ಇದರ ಜೊತೆಗೆ ಅಕ್ಕನ ನಿಶ್ಚಿತಾರ್ಥವಾಗಿದ್ದು ಡಿಸೆಂಬರ್ನಲ್ಲಿ ಆಕೆಯ ಮದುವೆಗೆ ದಿನಾಂಕ ನಿಗದಿಪಡಿಸಲಾಗಿದೆ. ಹೀಗಿರುವಾಗ ಚೇತನ್ ಇಂತಹ ಕೃತ್ಯವೆಸಗಿ ಮನೆಯವರನ್ನು ನಡುನೀರಲ್ಲಿ ಬಿಟ್ಟು ಹೋದ ಅಂತ ಕೊರಗುತ್ತಿದ್ದಾರೆ. ಹೊಸ ಮನೆ ಕಟ್ಟಿಸುತ್ತಿದ್ದು ಅದು ಕೂಡ ಅರ್ಧ ಕೆಲಸವಾಗಿ ಬಾಕಿಯುಳಿದಿದೆ.
ಪೊಲೀಸ್ ಭದ್ರತೆಯಲ್ಲೇ ಚೇತನ್ಗೆ ಮುಂದುವರಿದ ಚಿಕಿತ್ಸೆ: ಆರೋಪಿ ಚೇತನ್ಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತೀವ್ರ ನಿಗಾ ಘಟಕದಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಪೊಲೀಸರು ಬಂಧಿಸಿದ ವೇಳೆ ತಾನು ಇಲಿಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಚೇತನ್ನನ್ನು ಪೊಲೀಸರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಠಿಣ ಶಿಕ್ಷೆ ನೀಡಿದಾಗ ಇತರರಿಗೆ ಭಯವಾಗುತ್ತದೆ: ಲಾವಣ್ಯ ಎಂಬ ಸಹೋದರಿಯನ್ನು ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಆ ನೋವು ನಮಗೆ ಎಲ್ಲಾ ಇದೆ. ನಾವು ಸಂತಾಪ, ಪರಿಹಾರ ಏನೇ ಹೇಳಿದರೂ ಅವರ ಕುಟುಂಬಸ್ಥರಿಗೆ ಆ ನೋವು ಸರಿಪಡಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಈ ರೀತಿಯ ವಿಕೃತರಿಗೆ ಕಠಿಣ ಶಿಕ್ಷೆ ಕೊಟ್ಟಾಗ ಬೇರೆಯವರಿಗೆ ಭಯ ಬರುತ್ತದೆ. ಕುಟುಂಬಸ್ಥರ ನೋವಿನೊಂದಿಗೆ ನಾವು ಇರುತ್ತೇವೆ. ಬಿ.ಸಿ. ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಲವರ್ಸ್ ಪಾರ್ಕ್ ಆಗ್ತಿದೆ ಅನ್ನುವ ವಿಷಯ ಸುದ್ದಿಯಿಂದ ಗೊತ್ತಾಗಿದೆ. ಅದನ್ನು ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಸೂಚನೆ ನೀಡುತ್ತೇನೆ.
ಯು.ಟಿ. ಖಾದರ್.,ಸಚಿವರು
ಕುಟುಂಬದ ಜೊತೆ ನಾವು ನಿಲ್ಲಬೇಕಿದೆ: ಈ ಘಟನೆ ನಮ್ಮ ಜಿಲ್ಲೆಯಲ್ಲಿ ಆಗಬಾರದಿತ್ತು. ನಾವು ಈಗ ಅವರ ಕುಟುಂಬದ ಜೊತೆ ನಿಲ್ಲಬೇಕಾಗಿದೆ. ತಂದೆ ತಾಯಿ ಯಾವ ರೀತಿಯ ಪರಿಸ್ಥಿತಿಯಲ್ಲಿರುತ್ತಾರೆ ಅನ್ನುವುದನ್ನು ಅರಿತುಕೊಳ್ಳಬೇಕು. ಜನರು ಭಯ ಮುಕ್ತವಾಗಿ ಓಡಾಡುವಂತಿರಬೇಕು. ಈ ರೀತಿ ಘಟನೆಗಳು ಆಗದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಬ್ರಿಜೇಶ್ ಚೌಟ.,ಸಂಸದರು ದ.ಕ.
ಇಂತಹ ಘಟನೆ ನಡೆಯಬಾರದಿತ್ತು: ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನದಲ್ಲಿ ಇಂತಹ ಘಟನೆ ಆಗಿದೆ. ಇದು ಆಗಬಾರದಿತ್ತು. ಈಗಾಗಲೇ ಯಾರು ಮಾಡಿದ್ದಾರೆ ಅನ್ನುವುದು ಪೊಲೀಸ್ನವರು ಕಂಡು ಹುಡುಕಿದ್ದಾರೆ. ಆತನ ವಿರುದ್ಧ ಸೂಕ್ತ ಕ್ರಮ ಆಗಬೇಕು. ನಾವು ಎಲ್ಲಿಯದ್ದೋ ಘಟನೆ ಬಗ್ಗೆ ಮಾತಾಡುತ್ತೇವೆ. ಈಗ ನಮ್ಮಲ್ಲೇ ಆಗಿದೆ. ಕಕ್ಯಪದವಿನ ಲಾವಣ್ಯಳ ಕುಟುಂಬ ನಮ್ಮ ಆತ್ಮೀಯರು. ಸಾಮಾಜಿಕವಾಗಿ ನಮ್ಮೊಂದಿಗಿರುವ ಕುಟುಂಬ. ಇದು ನನಗೆ ತುಂಬಾ ನೋವಾಗಿದೆ. ಕುಟುಂಬಕ್ಕೆ ಧೈರ್ಯವನ್ನು ತುಂಬುವ ಕೆಲಸ ನಾವು ಮಾಡುತ್ತೇವೆ.
ಬಿ. ರಮಾನಾಥ ರೈ .,ಮಾಜಿ ಸಚಿವರು
ಗಂಭೀರವಾಗಿ ಪರಿಗಣಿಸಬೇಕು: ನಳಿನ್ ಕುಮಾರ್: ಪ್ರೇಮದ ಹೆಸರಿನಲ್ಲಿ ಅಮಾಯಕ ಯುವತಿಯನ್ನು ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯವಾಗಿದೆ. ನಾನು ಪ್ರವಾಸದಲ್ಲಿದ್ದ ಕಾರಣ ಘಟನೆಯ ವೇಳೆ ಬರಲು ಸಾಧ್ಯವಾಗಲಿಲ್ಲ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದು ನಾವು ಕೂಡ ಅದೇ ರೀತಿಯ ಕಠಿಣ ಶಿಕ್ಷೆಗೆ ಒತ್ತಾಯಿಸುತ್ತೇವೆ. ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಹುಡುಗಿಯನ್ನು ಚೇತನ್ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ: ಲಾವಣ್ಯಳ ಮರ್ಡರ್ ಮಾಡಿದ್ದು ದೂರದ ಸಂಬಂಧಿಯಾಗಿದ್ದ ಚೇತನ್. ಹುಡುಗಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದು ಆತ ತಲವಾರಿನಲ್ಲಿ ಕಡಿದು ಕೊಲೆಗೈದಿದ್ದಾನೆ. ಆರೋಪಿಯನ್ನು ಬಂಧಿಸಿದ ನಂತರ ಇಲಿಪಾಷಾಣ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದು ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮುಂದಿನ ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ.
ಡಾ. ಅರುಣ್ ಕೆ., ಎಸ್ಪಿ ದ.ಕ.ಜಿಲ್ಲೆ
ಕೊಲ್ಲುವವರನ್ನು ಕೊಲ್ಲುವ ಕಾನೂನು ಬರಬೇಕು: ಮೃತ ಲಾವಣ್ಯ ಅವರ ಮನೆಗೆ ಭೇಟಿ ನೀಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ತನ್ನ ವೈಯುಕ್ತಿಕ ನೆಲೆಯಲ್ಲಿ ಅವರು ಲಾವಣ್ಯ ಮನೆಯವರಿಗೆ ೨೫ ಸಾವಿರ ರೂ ನೆರವು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅಶೋಕ್ ರೈ ಅವರು ವಿದೇಶಗಳಲ್ಲಿ ಕೊಂದವರನ್ನು ಕೊಲ್ಲುವ ಕಾನೂನು ಜಾರಿಯಲ್ಲಿದೆ. ಹಾಗಾಗಿ ಅಲ್ಲಿ ಅಪರಾಧ ಕೃತ್ಯ ಕಡಿಮೆಯಾಗುತ್ತದೆ. ನಮ್ಮಲ್ಲಿಯೂ ಕೊಂದವರನ್ನು ಕೊಲ್ಲುವ ಕಾನೂನು ಜಾರಿಗೆ ಬರಬೇಕು ಎಂದು ಹೇಳಿದ್ದಾರೆ.
ಕಾರಿನಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್ಗೆ ಬಂದಿದ್ದ ಚೇತನ್: ಕೂಲಿ ಕಾರ್ಮಿಕ ಗಿರೀಶ್ ಸಮಯಪ್ರಜ್ಞೆ: ಲಾವಣ್ಯ ಅವರನ್ನು ಕೊಲೆ ಮಾಡಿದ ಬಳಿಕ ಚೇತನ್ ಮರುದಿನ ಬೆಳಿಗ್ಗೆ ವಾಮಂಜೂರಿನ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ಪತ್ತೆಯಾಗಿದ್ದಾನೆ. ತನ್ನ ಕಾರಿನ ಬಳಿ ಕುಳಿತುಕೊಂಡಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಚೇತನ್ನ್ನು ಬಂಧಿಸುವುದಕ್ಕೆ ಮುನ್ನ ಆತನನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಕೂಲಿ ಕಾರ್ಮಿಕ ಯುವಕ ಗಿರೀಶ್ ತೋರಿಸಿದ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆ ಪ್ರಶಂಸೆಗೆ ಪಾತ್ರವಾಗಿದೆ. ಚೇತನ್ ಲಾವಣ್ಯಳನ್ನು ಕೊಲೆಗೈದ ಬಳಿಕ ಘಟನಾಸ್ಥಳದಿಂದ ಪರಾರಿಯಾಗಿ ಮಂಗಳೂರಿನತ್ತ ಆಗಮಿಸಿ ವಾಮಂಜೂರು ತಲುಪಿದ್ದ. ಆತನ ಆಲ್ಟೋ ಕಾರು ರಾತ್ರಿ ವೇಳೆ ಪಚ್ಚನಾಡಿಯಲ್ಲಿ ತಿರುಗಾಡುತ್ತಿತ್ತು. ರಾತ್ರಿ ಪೂರ್ತಿ ಇಲ್ಲೇ ಎಲ್ಲೋ ಕಾರಿನಲ್ಲೇ ಮಲಗಿದ್ದಿರಬೇಕು ಎಂದು ಡಂಪಿಂಗ್ ಯಾರ್ಡ್ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಸುಮಾರು ೮.೩೦ರ ಸುಮಾರಿಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ಇರುವ ಅಂಗಡಿಯ ಎದುರು ಕಾರೊಂದು ಬಂದು ನಿಂತಿತು. ನಾನು ಅಂಗಡಿಯ ಸಿಮೆಂಟ್ ಹಾಸಿನ ಮೇಲೆ ಮೊಬೈಲ್ ನೋಡುತ್ತ ಕುಳಿತಿದ್ದೆ. ನಿಂತಿದ್ದ ಕಾರಿನತ್ತ ದೃಷ್ಟಿ ಹರಿಸಿದಾಗ ಅದಾಗಲೇ ಮೊಬೈಲ್ನಲ್ಲಿ ಕಂಡಿದ್ದ ಲಾವಣ್ಯಾಳನ್ನು ಕೊಚ್ಚಿ ಕೊಲೆಗೈದಿದ್ದ ಚೇತನ್ನಂತೆ ಕಾರಿನ ಚಾಲಕ ಕಂಡು ಬಂದ. ತಕ್ಷಣ ಜಾಗೃತನಾಗಿ ಕಾರಿನ ಬಳಿ ಹೋಗಿ ವಿಚಾರಿಸಲು ಪ್ರಯತ್ನಿಸಿದಾಗ ಅರ್ಧಕ್ಕೆ ಕಾರಿನ ಗ್ಲಾಸ್ ತೆರೆದ. ನಿನಗೆ ಏನಾಗಬೇಕು ಎಂದು ಪ್ರಶ್ನಿಸಿದಾಗ ಬಿ. ಸಿ. ರೋಡ್ನಲ್ಲಿ ಯುವತಿಯ ಕೊಲೆಗೈದ ಕೊಲೆಗಾರ ನೀನೇ ಅಲ್ಲವೇ ಎಂದು ನೇರವಾಗಿ ಪ್ರಶ್ನಿಸಿದೆ. ಆಗ ಆತ ಸಂಪೂರ್ಣ ಒತ್ತಡಕ್ಕೆ ಸಿಲುಕಿದವನಂತೆ ಕಂಡು ಬಂದ ಎಂದು ಚೇತನ್ನ್ನು ಪಚ್ಚನಾಡಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಸಹಕರಿಸಿದ ಗಿರೀಶ್ ಹೇಳಿದ್ದಾರೆ. ಗುರುಪುರ-ಕೈಕಂಬ ಮತ್ತಿತರ ಪ್ರದೇಶಗಳ ಕೋಳಿ ಮಾರಾಟದಂಗಡಿಗಳ ಕೋಳಿ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ಗೆ ಸಾಗಾಟ ಮಾಡುವ ಪಿಕಪ್ನಲ್ಲಿ ಕೆಲಸ ಮಾಡುತ್ತಿರುವ ಗಿರೀಶ್ ಅವರಿಗೆ ಕಾರಿನಲ್ಲಿರುವುದು ಚೇತನ್ ಎಂಬುದು ದೃಢಪಡುತ್ತಲೇ ಆತನ ಹಿಡಿದು ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಮೊದಲಿಗೆ ಹೊರಗೆ ಬಾರದ ಆತ ನಂತರ ಕಾರಿನಿಂದ ಹೊರಬಂದು ಮುಖ ವಾಶ್ ಮಾಡಲಿಕ್ಕಿದೆ ಎಂದು ಹೇಳಿ ಹತ್ತಿರದ ಜಾಗಕ್ಕೆ ಹೋದ. ಆಗ ಆತನ ಬೆನ್ನ ಹಿಂದೆಯೇ ಇದ್ದ ಗಿರೀಶ್ರನ್ನು ಗುರಾಯಿಸಿ ನೋಡುತ್ತಿದ್ದ. ಬಳಿಕ ಕಾರಿನತ್ತ ಬಂದು ಕಾರು ಚಲಾಯಿಸಲು ಚೇತನ್ ಪ್ರಯತ್ನಿಸಿದ. ಕಾರಿನ ಕೀ ಕಸಿದುಕೊಳ್ಳಲು ಗಿರೀಶ್ ಮುಂದಾದಾಗ ಆತ ತಡೆಯೊಡ್ಡಿದ. ಒಂದಷ್ಟು ಹೊತ್ತಿನಲ್ಲಿ ಆತನ ಕೈಯಿಂದ ಕಾರಿನ ಕೀಯನ್ನು ಗಿರೀಶ್ ಕಸಿದುಕೊಂಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಚೇತನ್ ಸಣ್ಣ ಬಾಟಲಿ ತೆಗೆದು ಏನೋ ಕುಡಿದಿದ್ದಾನೆ. ಘಟನೆ ನಡೆಯುತ್ತಲೇ ಚೇತನ್ನ್ನು ಹಿಡಿದು ಪೊಲೀಸರಿಗೊಪ್ಪಿಸಲು ಗಿರೀಶ್ ಸ್ಥಳೀಯರ ನೆರವು ಕೇಳಿದ್ದಾರೆ. ಅಲ್ಲದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಅರ್ಧ ತಾಸಿನೊಳಗೆ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಆರೋಪಿ ಚೇತನ್ನನ್ನು ಹಿಡಿದು ಕೊಂಡೊಯ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚೇತನ್ ಕಾರಿನಲ್ಲಿ ಚೂರಿಯೂ ಇತ್ತು: ಚೇತನ್ ಇದ್ದ ಕಾರಿನಲ್ಲಿ ೨ ಚೂರಿ ಇತ್ತು. ಕಾರಿನ ಕೀ ಪಡೆಯಲು ಪ್ರಯತ್ನಿಸಿದ ಒಂದು ಸಂದರ್ಭ ಆತ ನನ್ನನ್ನು ದೂಡಿ ಚೂರಿ ತೆಗೆಯಲು ಪ್ರಯತ್ನಿಸಿದ್ದ. ಆಗ ನಾನು ಕಾಲಿನಿಂದ ಚೂರಿಯನ್ನು ದೂರ ಸರಿಸಿದ್ದೆ. ಚೇತನ್ ಸೆರೆ ಹಿಡಿದ ಪೊಲೀಸರು ನನಗೆ ಧನ್ಯವಾದ ಹೇಳಿ ಕಳೆದ ರಾತ್ರಿಯಿಂದ ಆರೋಪಿ ಬಂಧನಕ್ಕೆ ತೀವ್ರ ಕಾರ್ಯಾಚರಣೆ ಮುಂದುವರಿಸಿzವೆ. ನಿನ್ನ ಜಾಗೃತ ಮನಸ್ಥಿತಿಯಿಂದ ಆರೋಪಿ ಸುಲಭವಾಗಿ ಸೆರೆ ಸಿಕ್ಕಿದ. ನಿನ್ನ ಧೈರ್ಯ ಮೆಚ್ಚುವಂತಹದ್ದು ಎಂದು ಪೊಲೀಸರು ಹೇಳಿದ್ದಾರೆ. ಲಾವಣ್ಯಳನ್ನು ಕೊಚ್ಚಿ ಕೊಲೆಗೈದಿದ್ದ ಆರೋಪಿ ಯನ್ನು ಪೊಲೀಸರಿಗೊಪ್ಪಿಸಬೇಕು ಎಂದು ಧೈರ್ಯ ಮಾಡಿದ್ದೆ. ಬಿ.ಸಿ.ರೋಡ್ನಲ್ಲಿ ನಡೆದ ಘಟನೆ ಅತಿ ಅಮಾನುಷವಾದದ್ದು. ಆ ದೃಶ್ಯ ಮೊಬೈಲ್ನಲ್ಲಿ ನೋಡಿzನೆ ಎಂದು ಗಿರೀಶ್ ತಿಳಿಸಿದ್ದಾರೆ.
ಆತನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ: ನನ್ನ ಮಗಳಿಗೆ ಆತನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ. ಬೇಕಾದಲ್ಲಿ ಆಕೆಯ ಮೊಬೈಲ್ ಕೂಡ ವೀಕ್ಷಣೆ ಮಾಡಬಹುದು. ಆಕೆಯ ಜೊತೆ ಲವ್ ಇರಲಿಲ್ಲ. ಇದು ಯಾಕೆ ಹೀಗಾಯಿತು ಗೊತ್ತಿಲ್ಲ. ಆಕೆ ನಮ್ಮ ಮನೆಯಲ್ಲಿ ಎಲ್ಲರೊಂದಿಗೂ ಕೂಡ ಚೆನ್ನಾಗಿ ಇರುತ್ತಿದ್ದಳು. ನಮಗೆ ಇದರಲ್ಲಿ ನ್ಯಾಯ ಬೇಕು. ತಪ್ಪಿತಸ್ಥನನ್ನು ಗಲ್ಲಿಗೇರಿಸಬೇಕು. ಆತನೂ ಕೂಡ ನಮ್ಮ ಸಂಬಂಧಿಯೇ ಆಗಿದ್ದಾನೆ. ಅವನಿಗೆ ಶಿಕ್ಷೆಯಾಗಬೇಕು. ಬಾಳಪ್ಪ ಗೌಡ, ಲಾವಣ್ಯಳ ತಂದೆ
ನನ್ನ ಮಗಳಂತೆ ಆತನಿಗೂ ಆಗಬೇಕು: ನನ್ನ ಮಗಳಿಗೆ ಆತ ಏನು ಮಾಡಿದ್ದಾನೋ ಹಾಗೇ ಆತನಿಗೂ ಮಾಡಿ. ಅವನು ಸಿಕ್ಕಿದ್ದಾನಂತೆ ನನ್ನಲ್ಲಿ ಕರೆದುಕೊಂಡು ಬನ್ನಿ. ನಾನೇ ಆತನನ್ನು ಮೂರು ತುಂಡು ಮಾಡುತ್ತೇನೆ. ಆತನಿಗೆ ಅಮ್ಮ, ಅಕ್ಕ ಇಲ್ವಾ ?, ಆತನಿಗೂ ಹೀಗೆ ಮಾಡಬೇಕು. ನನ್ನ ಮಗಳು ಎಷ್ಟು ನೋವು ತಡೆದುಕೊಂಡಿದ್ದಾಳೋ… ಯಾವಾಗ್ಲೂ ಅಮ್ಮ ಅಪ್ಪ ಅಂತ ಕರೆದುಕೊಂಡು ಇರುತ್ತಿದ್ದಳು. ಎಷ್ಟು ಹಸಿವು ಕಟ್ಟಿಕೊಂಡಿದ್ದಳೋ. ಬೆಳಗ್ಗೆ ಏಳು ಗಂಟೆಗೆ ಹೊರಟವಳು ೯ ಗಂಟೆಗೆ ತಲುಪಿzನೆ ಅಂತ ಕಾಲ್ ಮಾಡಿದ್ದಳು. ನನ್ನ ಮಗಳಿಗೆ ನೀರಿಲ್ಲ. ನನಗ್ಯಾಕೆ ನೀರು ? ರೂಪ.,ಲಾವಣ್ಯಳ ತಾಯಿ
ಬಿ.ಸಿ. ರೋಡಿಗೆ ಬಾ ಅಂತ ಕರೆ ಮಾಡಿದ್ದಳು: ನಾನು ಕೂಡ ಕಲ್ಲಡ್ಕದಲ್ಲೇ ಕೆಲಸ ಮಾಡುತ್ತಿzನೆ. ನನಗೆ ಕರೆ ಮಾಡಿ ಚೇತನ್ ಅಂತ ಇದ್ದಾರೆ. ಬಿ.ಸಿ. ರೋಡಿಗೆ ಇಲ್ಲಿಗೆ ಬಾ ಅಂತ ಕರೆದಳು. ನನಗೆ ಈ ಥರ ಆಗುತ್ತದೆ ಅಂತ ಗೊತ್ತಿರಲಿಲ್ಲ. ನಾನು ನನ್ನ ಗಂಡನಿಗೆ ಕಾಲ್ ಮಾಡಲು ಹೇಳಿzನೆ. ನಂತರ ನಾನು ಕಾಲ್ ಮಾಡಿದಾಗ ಅವಳು ರಿಸೀವ್ ಮಾಡಲಿಲ್ಲ.
ಚೈತ್ರ.,ಲಾವಣ್ಯಳ ಅಕ್ಕ
ಅವಳ ಮೇಲೆ ಅಟ್ಯಾಕ್ ಆಗುವಾಗ ನಾನು ಆಕೆಯೊಂದಿಗೆ ಮಾತನಾಡುತ್ತಿದ್ದೆ: ಲಾವಣ್ಯ ಕಲ್ಲಡ್ಕದಿಂದ ಕೆಲಸ ಮುಗಿಸಿಕೊಂಡು ಬಿ.ಸಿ. ರೋಡ್ ಬಸ್ಸ್ಟ್ಯಾಂಡ್ಗೆ ಬಂದಿದ್ದಳು. ಬಸ್ನಲ್ಲಿ ಕುಳಿತಿರುವಾಗ ಚೇತನ್ ಸಡನ್ ಆಗಿ ಬಂದಾಗ ಲಾವಣ್ಯ ಅಕ್ಕ ಚೈತ್ರಾಗೆ ಕರೆ ಮಾಡಿದ್ದಳು. ಚೈತ್ರಾ ನನಗೆ ಕಾಲ್ ಮಾಡಿ ಒಮ್ಮೆ ಲಾವಣ್ಯಗೆ ಕಾಲ್ ಮಾಡುವಂತೆ ತಿಳಿಸಿದಳು. ಇದಾದ ಬೆನ್ನಲ್ಲೇ ನಾನು ಲಾವಣ್ಯಳಿಗೆ ಕರೆ ಮಾಡಿದೆ. ಆವಾಗ ಅವನು ವಾಪಸ್ ಬಂದ' ಎಂದು ಹೇಳಿದಳು. ಆಗ ನಾನುಅವನಿಗೆ ಮೊಬೈಲ್ ಕೊಡು’ ಎಂದಾಗ ಆತ ಮೊಬೈಲ್ ತೆಗೆದುಕೊಂಡು ಹೋಗುತ್ತಾನೆ ಅಂತ ಹೇಳಿದಳು. ನಂತರ ಮಾತಾಡುತ್ತಿರುವಾಗಲೇ ಆತ ಕಡಿದಿದ್ದಾನೆ. ಒಂದು ವರ್ಷಕ್ಕೆ ಮೊದಲು ಅವನು ಟಾರ್ಚರ್ ಕೊಡುತ್ತಿದ್ದ ಅಂತ ಹೇಳಿದ್ದಳು. ಅದನ್ನು ಮಾತಾಡಿಸಿ ಸರಿ ಪಡಿಸಲಾಗಿತ್ತು. ಆದರೆ ಅದೆಲ್ಲ ಮುಗಿದಿದೆ ಅಂತಲೇ ನಾವು ಅಂದುಕೊಂಡಿದ್ದೆವು.
ಗೌತಮ್.,ಲಾವಣ್ಯಳ ಅಕ್ಕನ ಗಂಡ
ಮನೆಯಲ್ಲಿ ಸಾಯಿಸುತ್ತೇನೆಂದು ಹೇಳುತ್ತಿದ್ದ: ಯಾರದ್ದು ತಪ್ಪು ಯಾರದ್ದು ಸರಿ ಗೊತ್ತಾಗುತ್ತಿಲ್ಲ. ನನ್ನ ಮಗನನ್ನು ಚೆನ್ನಾಗಿ ಓದಿಸಿ ಇಬ್ಬರು ಮಕ್ಕಳನ್ನು ಉತ್ತಮ ಹಾದಿಗೆ ಹಾಕಬೇಕೆಂದು ಓದಿಸಿzವೆ. ಡಿಪ್ಲೋಮಾ ಕಲಿಸಿzನೆ. ಮಗಳು ಎಂಬಿಎ ಮಾಡಿದ್ದಾಳೆ. ಮಗಳಿಗೆ ಮದುವೆ ಫಿಕ್ಸ್ ಆಗಿದೆ. ಹೀಗಿರುವಾಗ ಇಂತಹ ಘಟನೆ ನಡೆದಿದೆ. ನಾವು ಮನೆ ಕೂಡ ಕಟ್ಟುತ್ತಿzವೆ. ಮಗ ಚೇತನ್ ಲೈಫ್ ಕೂಡ ಸೆಟ್ಲ್ ಆಗಬೇಕು ಅಂತ ಅಂದುಕೊಳ್ಳುವಾಗಲೇ ಹೀಗಾಗಿದೆ. ಎಲ್ಲಾ ಸಿಕ್ಕಿದಾಗ ನಮ್ಮಲ್ಲಿದ್ದ ನೆಮ್ಮದಿಯನ್ನು ದೇವರು ದೂರ ಮಾಡಿದರು. ಆತನದ್ದು ಒಳ್ಳೆಯ ಬುದ್ಧಿ. ಅಪ್ಪ ಅಮ್ಮನಿಗೆ ಏನೂ ಕೂಡ ತೊಂದರೆ ಮಾಡಿಲ್ಲ. ಕೆಲಸ ಮಾಡಿಕೊಂಡಿರುತ್ತಿದ್ದ. ಆತನ ಫೀಸ್, ಬೈಕ್, ಕಾರು ಎಲ್ಲವೂ ಆತನೇ ಮಾಡಿಕೊಂಡಿದ್ದು. ನಾವು ಕೊಡಿಸಿದ್ದಲ್ಲ. ಅವನ ಗ್ರಹಚಾರಕ್ಕೆ ಒಂದು ಲವ್ ಆಗಿ ಬ್ರೇಕಪ್ ಆಗಿ ಹೀಗಾಯಿತು. ಹತ್ತನೇ ತರಗತಿಯಲ್ಲಿರುವಾಗಲೇ ಲವ್ ಮಾಡುತ್ತಿದ್ದ. ಮಕ್ಕಳಾಟಿಕೆ ಅಂತ ಬೈದಿದ್ದೆವು. ನಂತರ ಮೂರು ವರ್ಷ ಲವ್ ಮಾಡಿದ್ದಾನೆ. ಲಾವಣ್ಯಳ ಮನೆಯವರು ಇವನು ಟಾರ್ಚರ್ ಕೊಡುತ್ತಿದ್ದಾನೆ' ಅಂತ ನನಗೆ ಕರೆ ಮಾಡಿ ತಿಳಿಸಿದ್ದರು. ಅದಕ್ಕೆಮದುವೆ ಮಾಡಿಕೊಡಬೇಕಷ್ಟೆ, ಬೇರೇನೂ ಮಾಡಲು ಸಾಧ್ಯವಿಲ್ಲ’ ಅಂತ ಹೇಳಿದ್ದೆ. ಅದಕ್ಕೆ ಅವರು ಇಷ್ಟು ಚಿಕ್ಕ ವಯಸ್ಸಲ್ಲಿ ಮದುವೆ ಎಂತ' ಎಂದು ಹೇಳಿದ್ದರು.ಅವಳು ಆಗಲ್ಲವಂತೆ’ ಅಂತ ಹೇಳಿದ್ದರು. ಮೊದಲು ಒಪ್ಪಿದ್ದರು. ನಂತರ ಆಕೆಯ ತಂದೆ ಲವ್ ಮಾಡಬೇಡ. ನನ್ನ ಮರ್ಯಾದೆ ತೆಗೆಯಬೇಡ ಅಂದಿದ್ದರಂತೆ. ಅದಕ್ಕೆ ಆಕೆ ಬಿಟ್ಟಿದ್ದಳು. ಆಕೆ ಒಳ್ಳೆಯ ಹೆಣ್ಣು. ನನ್ನ ಮಗ ಕೂಡ ಮಾಡಿದ್ದು ತಪ್ಪು. ಆಕೆಯದ್ದೂ ತಪ್ಪು ಇದೆ. ಹಿಂದೆ ಅವರೊಂದು ಬಾರಿ ಕಂಪ್ಲೆಂಟ್ ಕೊಡುತ್ತೇವೆ ಅಂದಾಗ ನಾನು ಕೊಡಿ, ಅವನಿಗೆ ಹೊಡೆಸಿ ಅಂತನೂ ಹೇಳಿದ್ದೆ. ನನಗೆ ನಿಮ್ಮನ್ನು ಅಕ್ಕ ನೋಡಿಕೊಳ್ತಾಳೆ. ನಮ್ಮಲ್ಲಿ ಸಾಯಿಸುತ್ತೇನೆ ಅಂತ ಹೇಳಿದ್ದ. ನಾವು ಅದನ್ನು ಸಸಾರ ಮಾಡಿದ್ದೆವು. ಮನೆಯಲ್ಲಿ ಬಂದು ಅಳುತ್ತಿದ್ದ. ಆತ ಸಾಯಿಸುತ್ತೇನೆ ಅಂತ ಹೇಳಿದಾಗ ಕೋಳಿ ಸಾಯಿಸುವುದಾ ? ಅಂತ ಹೇಳುತ್ತಿದ್ದೆವು. ಅವನು ಅಳುವಾಗ ಆಕೆಯ ಅಕ್ಕನ ಮದುವೆ ಆದ ನಂತರ ಮಾತನಾಡೋಣ ಅಂತ ಹೇಳಿದ್ದೆ. ನಾನು ಅವರ ಕೈಕಾಲು ಹಿಡಿದಾದರೂ ನಿನಗೆ ಮದುವೆ ಮಾಡುತ್ತೇನೆ. ನನ್ನ ಮಗಳು ಕೂಡ ಅವಳೊಂದಿಗೆ ಮಾತನಾಡುತ್ತೇನೆ ಅಂತ ತಿಳಿಸಿದ್ದಳು. ಅವಳು ಹೇಳಿದಾಗ ನಾವು ನಂಬಲೇ ಇಲ್ಲ. ನಾನು ಬೆಂಗಳೂರಿಗೆ ಹೋಗುತ್ತೇನೆಂದು ಹೋಗಿ ಲೋನ್ ತೆಗೆದು ಕಾರ್ ತೆಗೆದುಕೊಂಡಿದ್ದಾನೆ. ಅವನು ಮೆಕ್ಯಾನಿಕ್. ೧ ತಿಂಗಳು ಸರಿಯಾಗಿ ಕೆಲಸಕ್ಕೆ ಹೋಗಿದ್ದಾನೆ. ಅಕ್ಕನಿಗೆ ಮದುವೆ ಫಿಕ್ಸ್ ಆದ ನಂತರ ಆತ ಅಳಲು ಶುರು ಮಾಡಿಕೊಂಡಿದ್ದ. ಎರಡೂ ಮನೆಯವರು ಒಪ್ಪಿದ್ದರೆ ಹೀಗಾಗುತ್ತಿರಲಿಲ್ಲ. ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಬೇಕಿತ್ತು. ಗೀತಾ ಚೇತನ್ ತಾಯಿ
ಹತ್ಯೆ ಮಾಡಿ ನನಗೆ ಕಾಲ್ ಮಾಡಿ ಹೇಳಿದ: ಆತ ಆಕೆಯನ್ನು ಹತ್ಯೆ ಮಾಡಿ ನನಗೆ ಕಾಲ್ ಮಾಡಿ ಘಟನೆ ಹೀಗಾಯಿತು ಅಂತ ಹೇಳಿದ್ದ. ಬೇರೆ ನಂಬರ್ನಿಂದ ಕರೆ ಮಾಡಿದ್ದ. ನನ್ನ ಲವ್ ಫೇಲ್ಯೂರ್ ಆಗಿದೆ. ಎಷ್ಟೇ ನಾನು ಪ್ರಯತ್ನಿಸಿದರೂ ಅವರು ಒಪ್ಪಿಕೊಂಡಿಲ್ಲ. ಅದಕ್ಕೆ ಅವಳನ್ನು ಸಾಯಿಸಿ ನಾನು ವಿಷ ತೆಗೆದುಕೊಂಡಿzನೆ, ನಾನು ಸಾಯುವುದು, ಅವಳು ಸಾಯುವುದು ಎಂದು ಹೇಳಿದ. ನಾನು ಕುಳಿತು ಮಾತನಾಡುವ ಅಂತ ಹೇಳಿದೆ. ಈಗ ಎಲ್ಲರೂ ಕೂಡ ಅವರ ಕಡೆ ಇದ್ದಾರೆ. ಹುಟ್ಟಿನಿಂದಲೇ ಕಷ್ಟಪಟ್ಟು ಸಾಕಿzವೆ. ನನ್ನ ಮಗ ಹೇಗೆ ಹಾದಿಗೆ ಬಂದಾನು. ಆತ ಮೊಬೈಲ್ ನೋಡಿದಾಗ ಎಲ್ಲವೂ ಗೊತ್ತಾಗುತ್ತದೆ. ಆತನ ಪ್ರೀತಿಯ ಬಗ್ಗೆಯೂ ಗೊತ್ತಾಗುತ್ತದೆ. ಲವ್ ಬಗ್ಗೆ ತಾಯಿಯೊಂದಿಗೆ ಹೇಳುತ್ತಿದ್ದ. ನನಗೆ ಅವರು ಹೇಳುತ್ತಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ತೆರಳಿದ್ದಾನೆ. ಹತ್ಯೆ ಮಾಡಿದಾಗಲೇ ನಮಗೆ ಆತ ಬೆಂಗಳೂರಿನಿಂದ ಬಂದಿದ್ದಾನೆ ಎಂದು ಗೊತ್ತಾಗಿದ್ದು. ಗೊತ್ತಿರುತ್ತಿದ್ದರೆ ನಾನು ತಡೆಯುತ್ತಿದ್ದೆ. ಆತ ಬಂದ ವಿಷಯವೇ ಗೊತ್ತಾಗಲಿಲ್ಲ. ಹತ್ಯೆ ಮಾಡಿದ ನಂತರ ಬೆಳಗ್ಗೆ ಕರೆ ಮಾಡಿ ನನಗೆ ಪಶ್ಚಾತ್ತಾಪ ಆಗಿದೆ ಎಂದು ಹೇಳಿದ್ದ. ನನಗೆ ಹೊಟ್ಟೆನೋವು ಆಗುತ್ತೆ ಎಂದ. ಅದಕ್ಕೆ ಪೊಲೀಸ್ನವರಿಗೆ ಶರಣಾಗುವಂತೆ ತಿಳಿಸಿzನೆ. ನಾನು ವೀಡಿಯೋ ನೋಡಿzನೆ. ಅದು ತಪ್ಪು ತಪ್ಪೇ. ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾನೆ. ಮಗಳ ಮದುವೆ ಫಿಕ್ಸ್ ಆಗಿದೆ. ನಾವೆಲ್ಲರೂ ಕೂಡ ಬುದ್ಧಿವಾದ ಹೇಳಿದ್ದೆವು.
ಪುರುಷೋತ್ತಮ ಗೌಡ.,ಚೇತನ್ ನ ತಂದೆ
ನಾನು ಘಟನೆಯನ್ನು ನೋಡಿದೆ, ನನಗೂ ತಲವಾರು ಬೀಸಲು ಬಂದ: ಸಂಜೆ ೫.೪೦ರ ಸುಮಾರಿಗೆ ನಾನು ಗಾಡಿಯಿಟ್ಟು ಪಾರ್ಸಲ್ಗಾಗಿ ಕಾಯುತ್ತಿದ್ದೆ. ಆವಾಗ ಏಕಾಏಕಿ ಬೊಬ್ಬೆ ಹಾಕುವುದು ಕೇಳಿಸಿತು. ಯುವತಿ ಓಡಿದ್ಳು. ಅವನು ತಲವಾರು ಬೀಸಿದ. ನಾನು ಅಡ್ಡ ಹೋಗಲು ಮುಂದಾದಾಗ ಆತ ತಲವಾರು ಬೀಸಿದ. ನಾನು ಕಲ್ಲಿನಲ್ಲಿ ಬಿಸಾಡುವ ಅಂತ ಕಲ್ಲು ಹುಡುಕುವಾಗ ಆತ ಕೊಚ್ಚಿ ಕೊಲೆ ಮಾಡಿ ಓಡಿ ಹೋದ. ನನಗೆ ಕಾಲು ನೋವು ಇದೆ. ಓಡಲು ಆಗುವುದಿಲ್ಲ. ಆತನ ಕೈಯಲ್ಲಿ ತಲವಾರು ನೋಡಿದಾಗ ಭಯವಾಯಿತು. ನಾನು ಆರಂಭದಲ್ಲಿ ನೋಡಿದಾಗ ಓಡಿಕೊಂಡು ಬಂದು ಬೀಳುವುದನ್ನು ನೋಡಿzನೆ. ಬಿಸಿ ರೋಡ್ನಲ್ಲಿ ಇಂತಹ ಘಟನೆ ಆಗುವುದು ಬೇಸರ ತರಿಸಿದೆ. ಈ ಬಸ್ ನಿಲ್ದಾಣದಲ್ಲಿ ಯಾರನ್ನು ಯಾರೂ ಕೂಡ ಕೇಳುವವರಿಲ್ಲ. ಕುಡುಕರೆಲ್ಲ ಬಿದ್ದಿರುತ್ತಾರೆ. ಹುಡುಗ ಹುಡುಗಿಯರು ಬೇಕಾಬಿಟ್ಟಿ ಇರುತ್ತಾರೆ. ಈ ಬಸ್ ಸ್ಟ್ಯಾಂಡ್ನಲ್ಲಿ ಯಾವುದೇ ಸೇಫ್ಟಿ ಇಲ್ಲ.
ಗಣೇಶ್ ಶೆಟ್ಟಿ ., ಪ್ರತ್ಯಕ್ಷದರ್ಶಿ









