








ಬೆಳ್ತಂಗಡಿ: ತನ್ನ ಸ್ನೇಹಿತ ಫರ್ಹಾನ್ ಎಂಬವರೊಂದಿಗೆ ಮಂಗಳೂರಿನಿಂದ ಬೈಕ್‌ನಲ್ಲಿ ಮಲವಂತಿಗೆ ಗ್ರಾಮದ ದಿಡುಪೆ ಪಾಲ್ಸ್‌ಗೆ ಬಂದಿದ್ದ ಯುವತಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಐವರು ಯುವಕರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕೇಸ್‌ನ ವಿವರ: ಮಂಗಳೂರಿನ ಗೋಲ್ಡ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿರುವ ಯುವತಿ (೨೯) ಮಂಗಳೂರಿನ ವಾಸವಿದ್ದಾರೆ. ಇವರಿಗೆ ೨ ವರ್ಷದ ಹಿಂದೆ ಮಂಗಳೂರಿನ ಪಾಂಡೇಶ್ವರದ ಫರ್ಹಾನ್ ಎಂಬವರ ಪರಿಚಯವಾಗಿತ್ತು. ಬಳಿಕ ಅವರು ಸ್ನೇಹಿತರಾಗಿದ್ದರು. ಜು.೧೧ರಂದು ಯುವತಿ ಫರ್ಹಾನ್ ಅವರಲ್ಲಿ ನಾಳೆ ನನಗೆ ರಜೆ ಇದೆ. ನಾವು ಬೆಳ್ತಂಗಡಿಯ ದಿಡುಪೆ ಫಾಲ್ಸ್‌ಗೆ ಹೋಗುವ ಎಂದು ತಿಳಿಸಿದ್ದರು. ಅದಕ್ಕೆ ಫರ್ಹಾನ್ ಒಪ್ಪಿದ್ದರು. ಅದರಂತೆ ಜು. ೧೨ರಂದು ಬೆಳಿಗ್ಗೆ ಮಂಗಳೂರಿನಿಂದ ಬೈಕ್‌ನಲ್ಲಿ ಹೊರಟು ಮಧ್ಯಾಹ್ನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್ ಗೆ ತಲುಪಿದ್ದಾರೆ. ಫಾಲ್ಸ್‌ಗೆ ಹೋಗುವಾಗ ಫಾರೆಸ್ಟ್ ರಿಜಿಸ್ಟರ್ ಕಚೇರಿಯಲ್ಲಿ ಯುವತಿ ತನ್ನ ಐಡಿ ಹಾಗೂ ಹೆಸರು ನೀಡಿದ್ದಾರೆ. ಫಾಲ್ಸ್ ನೋಡಿಕೊಂಡು ಕೆಳಗೆ ಬರುವಾಗ ಫಾರೆಸ್ಟ್ ರಿಜಿಸ್ಟರ್ ಕಚೇರಿಯವರು ಇಬ್ಬರ ಐಡಿ ಕಾರ್ಡ್ ಕೇಳಿದ್ದಾರೆ. ಯುವತಿ ಐ.ಡಿ. ಕಾರ್ಡ್ ನೀಡಿದ್ದಾರೆ. ಬಳಿಕ ಫರ್ಹಾನ್ ಅವರ ಐಡಿ ಕಾರ್ಡ್ ಕೊಡುವಂತೆ ಕಚೇರಿಯವರು ತಿಳಿಸಿದಾಗ ಫರ್ಹಾನ್ ಅವರು ನನ್ನ ಬಳಿ ಯಾವುದೇ ಐಡಿ ಕಾರ್ಡ್ ಇಲ್ಲ ಎಂದು ಹೇಳಿದ್ದಾರೆ. ಆ ವೇಳೆ ಅವರ ಹೆಸರು ಕೇಳಿದಾಗ ಆತ ತನ್ನ ಹೆಸರು ಫರ್ಹಾನ್ ಎಂದು ತಿಳಿಸಿದ್ದಾರೆ. ಆ ವೇಳೆ ಫಾರೆಸ್ಟ್ ರಿಜಿಸ್ಟರ್ ಕಚೇರಿಯವರು ನಿಮ್ಮ ಬಗ್ಗೆ ಸ್ಥಳೀಯರಿಗೆ ಮಾಹಿತಿ ದೊರೆತಿದೆ ಎಂದು ಹೇಳಿದ್ದಾರೆ. ಈ ವೇಳೆ ಯುವತಿ ನೀನು ಮುಂದೆ ಹೋಗಿರು. ನಾನು ಹಿಂದುಗಡೆ ಬರುತ್ತೇನೆ' ಎಂದು ಫರ್ಹಾನ್ ಅವರಲ್ಲಿ ಹೇಳಿ ಆತನನ್ನು ಆತನ ಬೈಕ್‌ನಲ್ಲಿ ಮುಂದಕ್ಕೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಯುವತಿ ಅಲ್ಲಿಂದ ನಡೆದುಕೊಂಡು ಬಂದು ಪಾರ್ಕಿಂಗ್ ಬಳಿ ಬಂದಾಗ ಅಲ್ಲಿ ಸುಮಾರು ೫-೬ ಜನ ಸೇರಿದ್ದರು. ಅವರು ಯುವತಿಯನ್ನು ಅಡ್ಡಗಟ್ಟಿನೀನು ಮುಸ್ಲಿಂ ಹುಡುಗನ ಜೊತೆಗೆ ಯಾಕೆ ಬಂದಿದ್ದೀಯಾ. ನಿನಗೆ ಹಿಂದೂ ಹುಡುಗರು ಯಾರು ಸಿಕ್ಕಿಲ್ವಾ’ ಎಂದು ಕೇಳಿ ಅಸಭ್ಯವಾಗಿ ಬೈದು ಯುವತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ತೆಗೆದುಕೊಂಡು ಪರಿಶೀಲಿಸಿದ್ದಾರೆ. ನಂತರ `ನಿನ್ನ ಜೊತೆ ಬಂದಿರುವ ಹುಡುಗನನ್ನು ಇಲ್ಲಿಗೆ ಕರೆಸು. ಒಂದು ವೇಳೆ ಆತ ಇಲ್ಲಿಗೆ ಬಾರದೇ ಇದ್ದಲ್ಲಿ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅವರುಗಳು ಮಾತನಾಡಿಕೊಂಡಿದ್ದು ಅವರುಗಳ ಹೆಸರು ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್ ಮತ್ತು ದೀಕ್ಷಿತ್ ಎಂಬುದಾಗಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಕುರಿತು ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಮತ್ತು ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೭೫/೨೦೨೬ರಂತೆ ಕಲಂ ೧೨೬(೨), ೩೫೨, ೩೫೧(೨), ೩(೫) ಬಿಎನ್‌ಎಸ್ ೨೦೨೩ರಂತೆ ಪ್ರಕರಣ ದಾಖಲಾಗಿದೆ. ಎಸ್.ಐ. ಸಿಕಂದರ್ ಪಾಷಾ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.








