ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ಕಿರುಕುಳ-ಅಫ್ರೀದ್‌ಗೆ ೨೦ ವರ್ಷ ಜೈಲು ಶಿಕ್ಷೆ; ೫೫ ಸಾವಿರ ರೂ. ದಂಡ

0

ಬೆಳ್ತಂಗಡಿ: ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿ ಜೀವ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್ ಸಿ-೨ ಪೋಕ್ಸೋ ನ್ಯಾಯಾಲಯ ೨೦ ವರ್ಷಗಳ ಕಠಿಣ ಶಿಕ್ಷೆ ಮತ್ತು ೫೫ ಸಾವಿರ ರೂ. ದಂಡ ವಿಧಿಸಿದೆ. ಗುರುಪುರ ಅಡ್ಡೂರು ಕೆಳಗಿನಕೆರೆ ನಿವಾಸಿ ಅಫ್ರೀದ್ ಅಲಿಯಾಸ್ ಅಪ್ಪಿ (೨೦) ಶಿಕ್ಷೆಗೊಳಗಾದಾತ.

ಪ್ರಕರಣದ ವಿವರ: ಬಂಟ್ವಾಳ ತಾಲೂಕಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಬಾಲಕಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಕಾರು ಚಾಲಕನಾಗಿದ್ದ ಅಫ್ರೀದ್‌ನ ಪರಿಚಯವಾಗಿತ್ತು.ಬಳಿಕ ಮೊಬೈಲ್ ಫೋನ್ ನಂಬರ್ ಹಂಚಿಕೊಂಡು ಪರಸ್ಪರ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಅಫ್ರೀದ್ ಆಕೆಯನ್ನು ಪ್ರೀತಿಸುವುದಾಗಿ ತಿಳಿಸಿ ಮದುವೆ ಆಗುವುದಾಗಿ ನಂಬಿಸಿದ್ದ. ೨೦೨೪ ಮೇ ೨೭ರಂದು ಬೆಳಗ್ಗೆ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ತಿಳಿದು ಅಫ್ರೀದ್ ಅಲ್ಲಿಗೆ ಬಂದಿದ್ದ. ಆಕೆಯನ್ನು ಪುಸಲಾಯಿಸಿ ಆಕೆ ಬೇಡವೆಂದು ಹೇಳಿದರೂ ಕೇಳದೆ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ್ದ. ಬಳಿಕ ಅದರ ವೀಡಿಯೋ ಮಾಡಿರುವುದಾಗಿ ತಿಳಿಸಿ ಮುಂದೆಯೂ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬಾಲಕಿಯನ್ನು ಹೆದರಿಸಿದ್ದ. ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಅನಂತರ ಹಲವು ಬಾರಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಮನೆಯವರು ೨೦೨೫ರ ಜೂ.೧ರಿಂದ ಮನೆ ಖಾಲಿ ಮಾಡಿ ಬೆಳ್ತಂಗಡಿ ತಾಲೂಕಿಗೆ ಬಂದಿದ್ದರು. ೨೦೨೫ರ ಆ.೬ರಂದು ಇಲ್ಲಿಗೂ ಬಂದ ಆಫ್ರೀದ್ ಆಕೆಯೊಂದಿಗೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ್ದ. ಅ.೩ರಂದು ಆಕೆ ಫೋನ್ ಮಾಡಿದಾಗ ಆತ ಜಗಳವಾಡಿ ನಿನ್ನನ್ನು ಮದುವೆ ಆಗುವುದಿಲ್ಲ ಎಂದಿದ್ದ.

ಇದರಿಂದ ನೊಂದ ಬಾಲಕಿ ಮನೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುಂಜಾಲಕಟ್ಟೆ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸಿಕಂದರ್ ಪಾಷ ನೇತೃತ್ವದಲ್ಲಿ ಆರೋಪಿ ಅಫ್ರೀದ್‌ನನ್ನು ಬಂಧಿಸಲಾಗಿತ್ತು. ೫-೭-೨೦೨೫ರಿಂದ ೨೩-೨-೨೦೨೬ವರೆಗೆ ನ್ಯಾಯಾಂಗ ಬಂಧನಲ್ಲಿದ್ದ ಅಫ್ರೀದ್ ಬಳಿಕ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದ. ಪ್ರಾಥಮಿಕ ತನಿಖೆಯನ್ನು ಬೆಳ್ತಂಗಡಿ ಇನ್ಸ್‌ಪೆಕ್ಟರ್ ಅಗಿದ್ದ ಬಿ.ಜಿ.ಸುಬ್ಬಾಪುರ ಮಠ ನಡೆಸಿದ್ದರು. ಬಳಿಕ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್. ಪ್ರಕರಣದ ತನಿಖೆ ನಡೆಸಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫ್.ಟಿ.ಎಸ್.ಸಿ-೨ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-೨ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಆಫ್ರೀದ್‌ಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಪೋಕ್ಸೋ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು. ತನಿಖಾ ಸಹಾಯಕರಾಗಿ ವಿಜಯ ಕುಮಾರ್ ರೈ, ಪ್ರಕಾಶ್ ಪೂಜಾರಿ ಮತ್ತು ರಮ್ಯ ಸಹಕರಿಸಿದ್ದರು.

ಶಿಕ್ಷೆ ಪ್ರಮಾಣ: ಪೋಕ್ಸೋ ಕಾಯ್ದೆ ಕಲಂ ೬ ಮತ್ತು ಐಪಿಸಿ ಕಲಂ ಸೆಕ್ಷನ್ ೩೭೬ (೨) (ಎನ್) ಅಡಿ ೨೦ ವರ್ಷಗಳ ಕಠಿಣ ಶಿಕ್ಷೆ ಮತ್ತು ೫೦ ಸಾವಿರ ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ ೪ ತಿಂಗಳ ಸಾದಾ ಶಿಕ್ಷೆ. ಐಪಿಸಿ ಕಲಂ ೫೦೬ (ಬೆದರಿಕೆ)ರಡಿ ೩ ತಿಂಗಳ ಸಾದಾ ಶಿಕ್ಷೆ ಮತ್ತು ೫ ಸಾವಿರ ರೂ. ದಂಡ. ದಂಡ ತೆರಲು ತಪ್ಪಿದಲ್ಲಿ ೧೫ ದಿನಗಳ ಸಾದಾ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬಹುದಾಗಿದೆ.

ಸಂತ್ರಸ್ತೆಗೆ ಪರಿಹಾರ: ದಂಡದ ಮೊತ್ತ ೫೫ ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರವಾಗಿ ಪಾವತಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಜತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ೫.೪೫ ಲಕ್ಷ ರೂ. ವನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here