ಕೊಕ್ಕಡದ ಜನಾರ್ದನ ಗೌಡರ ಕೊಲೆ ಯತ್ನ: ಪ್ರಕರಣ ನ್ಯಾಯಾಲಯಕ್ಕೆ ಹಾಜರಾಗದ ಕೆಂಪಕೋಡಿಯ ಆನಂದ ಬಂಧನ

0

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೬೪/೨೦೧೮ರಂತೆ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ವಿಚಾರಣೆಗಾಗಿ ಕಳೆದ ನಾಲ್ಕು ತಿಂಗಳಿನಿಂದ ಮಂಗಳೂರು ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗದ ಕೊಕ್ಕಡ ಗ್ರಾಮದ ಕೆಂಪಕೋಡಿಯ ಆನಂದ (೪೦) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನ ಮತ್ತು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ಹಾಗೂ ಸಿಬ್ಬಂದಿಗಳಾದ ವೃಷಭ ಮತ್ತು ಚರಣ್‌ರಾಜ್ ಅವರ ತಂಡ ಜು. ೪ರಂದು ಬೆಳಿಗ್ಗೆ ಕೊಕ್ಕಡದಲ್ಲಿ ಆನಂದನನ್ನು ಬಂಧಿಸಿದೆ. ಬಂಧಿತನನ್ನು ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ೫೦೦ ದಂಡ ವಿಧಿಸಿ ಷರತ್ತಿನೊಂದಿಗೆ ಆತನನ್ನು ಬಿಡುಗಡೆ ಮಾಡಿದ್ದಾರೆ.

ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು: ೨೦೧೮ರ ನವೆಂಬರ್ ೧ರಂದು ಕೊಕ್ಕಡ ಗ್ರಾಮದ ಕೆಂಪಕೋಡಿ ಎಂಬಲ್ಲಿಯ ಸಾರ್ವಜನಿಕ ರಸ್ತೆಯಲ್ಲಿ ಕೆಂಪಕೋಡಿಯ ಜನಾರ್ದನ ಗೌಡ ಎಂಬವರು ನಡೆದುಕೊಂಡು ಬರುತ್ತಿದ್ದ ವೇಳೆ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರನ್ನು ತಡೆದು ನಿಲ್ಲಿಸಿ ಕೊಲ್ಲುವ ಉzಶದಿಂದ ಕಾಟು ಮರದ ದೊಣ್ಣೆಯಿಂದ ತಲೆಗೆ ಜೋರಾಗಿ ಹೊಡೆದು ಕೊಲೆಗೆ ಯತ್ನಿಸಿದ ಆರೋಪದಡಿ ಪದ್ಮನಾಭ, ಆನಂದ ಮತ್ತು ಗಿರಿಜಾ ಎಂಬವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐಪಿಸಿ ೩೪೧, ೩೨೪, ೫೦೪, ೫೦೬, ೩೦೭ ಹಾಗೂ ೩೪ರಡಿ ಪ್ರಕರಣ ದಾಖಲಾಗಿತ್ತು.
ಈ ಹಿಂದೆ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ವಿಚಾರದಲ್ಲಿ ಪ್ರಕರಣ ದಾಖಲಾಗಲು ಜನಾರ್ದನ ಗೌಡ ಅವರೇ ಕಾರಣ ಎಂಬ ದ್ವೇಷದಿಂದ ಜನಾರ್ದನ ಗೌಡ ಅವರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಈ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆನಂದನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು.

LEAVE A REPLY

Please enter your comment!
Please enter your name here