







ಬೆಳ್ತಂಗಡಿ: ಪುತ್ತೂರು ತಾಲೂಕಿನ ಪಡೀಲ್ನಲ್ಲಿರುವ ಜಿಮ್ ಸಂಸ್ಥೆಯಲ್ಲಿ ತರಬೇತುದಾರನಾಗಿದ್ದ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿ ಸಚಿನ್ ರೈ(೩೫) ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರಿನ ಕಲ್ಲಿಮಾರ್ ಎಂಬಲ್ಲಿರುವ ವಿಶ್ವನಾಥ ಶೆಟ್ಟಿ ಎಂಬವರ ಮನೆಯಲ್ಲಿ ವಾಸ್ತವ್ಯ ಇದ್ದ ಸಚಿನ್ ರೈ ಅವರು ಜು.೫ರಂದು ಬೆಳಿಗ್ಗೆ ಅಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಕಲ್ಲಿಮಾರು ಮನೆಯಲ್ಲಿ ವಿಶ್ವನಾಥ ಶೆಟ್ಟಿ, ಅವರ ಪತ್ನಿ ಗೀತಾ ಶೆಟ್ಟಿ ಮತ್ತು ಮಗ ಅಜಯ್ ಶೆಟ್ಟಿ ಅವರೊಂದಿಗೆ ಕಳೆದ ಕೆಲವು ಸಮಯಗಳಿಂದ ಸಚಿನ್ ರೈ ವಾಸವಿದ್ದರು. ತನ್ನ ತವರು ಮನೆಯ ಸಂಪರ್ಕ ಬಹುತೇಕ ಕಡಿತಗೊಳಿಸಿದ್ದ ಸಚಿನ್ ರೈ ಅವರು ಜಿಮ್ ತರಬೇತುದಾರರಾಗಿದ್ದರೂ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬೀಳಲು ಕಾರಣ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ. ಸಚಿನ್ ರೈ ಅವರ ಸಾವಿನಲ್ಲಿ ಸಂಶಯ ಇರುವುದಾಗಿ ಸುದ್ದಿ ಬಿಡುಗಡೆಯೊಂದಿಗೆ ಮಾತನಾಡಿರುವ ತಾಯಿ ಗುಲಾಬಿ ರೈ ಮತ್ತು ಸಹೋದರಿ ಶಬರಿ ರೈ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾವಿನ ಕುರಿತು ಸಂಶಯ ಇರುವುದರಿಂದ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಗುಲಾಬಿ ರೈ ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ. ಸಚಿನ್ ರೈ ಅವರ ಮೃತದೇಹವನ್ನು ಮಡಂತ್ಯಾರ್ನಲ್ಲಿರುವ ತವರು ಮನೆಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಅಜಯ್ ತಾಯಿ ಗೀತಾ ಮೇಲೆ ಅನುಮಾನ-ಗುಲಾಬಿ ರೈ: ಸಚಿನ್ ರೈ ಅವರ ತಾಯಿ ಗುಲಾಬಿ ಅವರು ಸುದ್ದಿಯೊಂದಿಗೆ ಮಾತನಾಡಿ ೨೦೧೯ರಲ್ಲಿ ನಾವು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ಮನೆ ಮಾರಾಟ ಮಾಡಿ ಮಡಂತ್ಯಾರ್ನಲ್ಲಿ ಮನೆ ಮಾಡಿದೆವು. ಮಗ ಜಿಮ್ ಟ್ರೈನರ್ ಆಗಿ ಪುತ್ತೂರಿನ ಪಡೀಲ್ನಲ್ಲಿ ಕೆಲಸ ಮಾಡುತ್ತಿದ್ದ. ೨೦೨೧ರವರೆಗೆ ಇಲ್ಲೇ ಇದ್ದ. ನಂತರ ಪುತ್ತೂರಿನ ಆತನ ಸ್ನೇಹಿತ ಅಜೇಯ್ ಎಂಬವರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದ. ನಾನು ಆರಂಭದಲ್ಲಿ ಬೇಡ ಅಂದರೂ ನಂಬಿಕೆಯಿಂದ ಅಲ್ಲಿರಲು ಒಪ್ಪಿಕೊಂಡೆ. ೨೦೨೧-೨೨ರಲ್ಲಿ ಮನೆಗೆ ಆಗಾಗ ಬರುತ್ತಿದ್ದ. ನಂತರ ಬರುವುದು ಕಡಿಮೆ ಮಾಡಿದ್ದ ಅವನು ಕಾಲ್ ಮಾಡಿ ಬಾಯಿಗೆ ಬಂದಂತೆ ಬೈಯುತ್ತಿದ್ದ. ನಂತರ ಮನೆಗೆ ಬರುವುದು ಕಡಿಮೆ ಮಾಡಿದ. ಜು.೪ರಂದು ಅಜಯ್ ತಾಯಿ ಗೀತಾ ಕರೆ ಮಾಡಿ ಸಚಿನ್ ಬಿದ್ದಿದ್ದಾನೆ ಎಂದು ತಿಳಿಸಿದ್ದರು. ನಂತರ ಆಸ್ಪತ್ರೆಗೆ ಹೋಗಿ ನೋಡಿದಾಗ ಮಗ ಸಾವನ್ನಪ್ಪಿರುವ ವಿಷಯ ಗೊತ್ತಾಯಿತು. ನನಗೆ ಮಗನ ಸಾವಿನ ಬಗ್ಗೆ ಅನುಮಾನವಿದೆ.
ನನ್ನ ಮಗ ೨೦೨೨ರ ನಂತರ ನನಗೆ ಹಣ ಕೊಟ್ಟಿಲ್ಲ. ಸರಿಯಾಗಿ ಮಾತೂ ಆಡಿಲ್ಲ. ನಾನೊಂದು ಐ ೨೦ ಕಾರು ತೆಗೆದುಕೊಟ್ಟಿದ್ದೆ. ಅದನ್ನು ಫೋರ್ಜರಿ ಸಹಿ ಹಾಕಿ ಮಾರಿದ್ದಾರೆ. ಅವೇಂಜರ್ ಬೈಕ್ ತೆಗೆದುಕೊಟ್ಟಿದ್ದೆ. ಅದನ್ನು ಏನು ಮಾಡಿದ್ದಾರೆ ಗೊತ್ತಿಲ್ಲ. ಮಗನ ವಸ್ತು ಇಲ್ಲಿ ಯಾಕೆ ಇಲ್ಲ. ನನಗೆ ಅಜಯ್ ತಾಯಿ ಗೀತಾರವರ ಮೇಲೆ ಅನುಮಾನ. ನನ್ನ ಮತ್ತು ಮಗನನ್ನು ದೂರ ಮಾಡಿದ್ದಾರೆ ಅದಕ್ಕೆ ಅನುಮಾನ. ನನ್ನ ಗಂಡ ಮಕ್ಕಳು ಚಿಕ್ಕವರಿರುವಾಗಲೇ ತೀರಿಕೊಂಡಿದ್ದರು. ಕಷ್ಟದಲ್ಲಿ ಮಕ್ಕಳನ್ನು ಸಾಕಿzನೆ. ಈಗ ನನ್ನನ್ನು ಅವನು ನೋಡಿಕೊಳ್ಳಬೇಕಿತ್ತು. ಆದರೆ ಅವನು ನನಗಿಂತ ಮೊದಲು ಹೋಗಿಬಿಟ್ಟ. ಅವನು ದುಡಿದ ಒಂದು ರೂಪಾಯಿ ಹಣ ನನಗೆ ನೀಡಿಲ್ಲ. ಎಲ್ಲಾ ಅವರೇ ಇಟ್ಟುಕೊಂಡಿದ್ದಾರೆ. ಇನ್ನು ಯಾವ ಮಕ್ಕಳಿಗೂ ಇಂತಹ ಪರಿಸ್ಥಿತಿ ಬರಬಾರದು. ನನ್ನ ಮಗ ಪುತ್ತೂರಿನ ಅವರ ಮನೆಯಲ್ಲಿ ಇರುತ್ತೇನೆ ಅಂದಾಗ ಅಲ್ಲಿ ಹೆಣ್ಣು ಮಕ್ಕಳಿಲ್ಲ ಅಂತ ಅಂದುಕೊಂಡು ಒಪ್ಪಿಕೊಂಡೆ. ಆದರೆ ಅಲ್ಲಿ ಆ ಮಹಿಳೆಯ ಕಾರುಬಾರು ಹೆಚ್ಚಾಯಿತು. ಇಲ್ಲಿಗೆ ಬರದ ಹಾಗೇ ಮಾಡಿದರು. ಮಗ ಬಾತ್ ರೂಂನಲ್ಲಿ ಬಿದ್ದಿದ್ದನಂತೆ. ಹೃದಯಾಘಾತವಂತೆ ಅಂತ ಹೇಳುತ್ತಾರೆ. ಆದರೆ ನನಗೆ ಅನುಮಾನವಿದೆ. ಪೊಲೀಸ್ನವರು ತನಿಖೆ ಮಾಡುತ್ತೇನೆ ಅಂದಿದ್ದಾರೆ.


ನಾನು ಜಿಮ್ ಬೇಡ ಅಂದಿದ್ದೆ. ಆದರೆ ಅವನು ನನ್ನನ್ನು ಅದಕ್ಕೊಂದು ವಿರೋಧ ಮಾಡಬೇಡ ಅಂತ ಹೇಳಿ ನನ್ನನ್ನು ಒಪ್ಪಿಸಿದ್ದ. ಜಿಮ್ನಲ್ಲಿ ಅಪಾರ ಸಾಧನೆ ಮಾಡಿದ್ದಾನೆ. ಪಿಯುಸಿ ಇರುವಾಗಲೇ ಜಿಮ್ಗೆ ಹೋಗುತ್ತಿದ್ದ. ಜಿಮ್ ಮಾಲಕರಿಗೆ ಆತನ ನಿಯತ್ತು ಇಷ್ಟವಾಗಿತ್ತು. ಮಗನ ಸಾಧನೆ ಬಗ್ಗೆ ಖುಷಿಯಿದೆ. ೨೦೨೨ರಲ್ಲಿ ಒಂದು ದಿನ ರಾತ್ರಿ ೧೦.೩೦ಕ್ಕೆ ಮಗ ಕರೆ ಮಾಡಿ ನನಗೆ ಚಿತ್ರಹಿಂಸೆ ಕೊಡ್ತಿದ್ದಾರೆ. ನಾನು ದೇವರೆದುರು ನೆಲಕ್ಕೆ ಕೈ ಕೊಟ್ಟು ಹೇಳಿzನೆ’ ಅಂತ ಹೇಳಿದ್ದ. ಆತನ ಕೆಲಸವನ್ನು ಅವರೇ ತೆಗೆಸಿದ್ದರು. ಜಿಮ್ನ ಕೆಲಸವನ್ನು ಅಜಯ್ ಮತ್ತು ಗೀತಾ ಹೇಳಿಕೊಟ್ಟು ತೆಗೆಸಿದ್ದರು. ಜಿಮ್ ಬಿಡಿಸಿ ಮನೆಯಲ್ಲಿ ಕೂರಿಸಿದ್ದರು. ಆತನಿಗೆ ವ್ಯಾಯಾಮವಿರಲಿಲ್ಲ. ಅಲ್ಲದೆ ಕುಡಿಸಿ ಹಾಳು ಮಾಡಿದ್ದರು. ನನ್ನ ಒಳ್ಳೆಯ ಮಗನನ್ನು ಹಾಳು ಮಾಡಿದರು ಎಂದು ಹೇಳಿದರು. ಆ ಮಹಿಳೆ ಮೇಲೆಯೇ ಅನುಮಾನ-ಅಮ್ಮನನ್ನು ಅಣ್ಣನಿಂದ ದೂರ ಮಾಡಿದರು-ಶಬರಿ ರೈ: ನನಗೂ ಆ ಮಹಿಳೆಯ ಮೇಲೆಯೇ ಅನುಮಾನ. ಅವರೂ ಒಬ್ಬರು ತಾಯಿ. ಅವರಿಗೂ ಒಬ್ಬ ಮಗನಿದ್ದಾನೆ. ನನ್ನಮ್ಮನೂ ಅವರ ಹಾಗೇ ತಾಯಿ. ನನ್ನ ಅಣ್ಣನನ್ನು ಅವರೊಂದಿಗೆ ಬಂಧನದಲ್ಲಿಟ್ಟಂತೆ ಇಟ್ಟುಕೊಂಡಿದ್ದರು. ನನ್ನ ತಾಯಿ ಮಗನಿಗಾಗಿ ಅದೆಷ್ಟೋ ದೇವಸ್ಥಾನಗಳಿಗೆ ತೆರಳಿ ಹರಕೆ ಕಟ್ಟಿಕೊಂಡಿದ್ದರು. ಅವರ ಮಗ ೨೦೨೨ರಲ್ಲಿ ನಮ್ಮ ಮನೆ ಕಿಟಿಕಿಯ ಗ್ಲಾಸ್ ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಗೆ ಅವರು ಬರುವಾಗಲೂ ಅಣ್ಣ ಜೊತೆಯಲ್ಲಿ ಬರುತ್ತಿದ್ದ.
ಈ ವೇಳೆ ಪೊಲೀಸರು ಅಮ್ಮನನ್ನು ನೋಡಿಕೊಳ್ಳುವಂತೆ ಬುದ್ಧಿ ಮಾತು ಹೇಳಿದರೂ ಆತ ಕೇಳಲೇ ಇಲ್ಲ. ಯಾಕೆಂದರೆ ಅವರು ಅಣ್ಣನನ್ನು ಬರಲು ಬಿಡುತ್ತಿರಲಿಲ್ಲ. ೨೦೨೨ರ ಒಂದು ತಡ ರಾತ್ರಿ ಅಣ್ಣ ಮನೆಗೆ ಕರೆ ಮಾಡಿನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ’ ಎಂದು ಅತ್ತಿದ್ದ. ಇದನ್ನೆಲ್ಲ ನೋಡಿರುವ ನಮಗೆ ಅವನ ಸಾವಿನ ಬಗ್ಗೆ ಅನುಮಾನವಿದೆ. ಈಗ ಕಡೆಯದಾಗಿ ಅಣ್ಣ ಸಾವನ್ನಪ್ಪಿದಾಗ ಅಮ್ಮನಿಗೆ ಕರೆ ಮಾಡಿದ್ದಾರೆ. ಈಗ ಅವರಿಗೆ ಅಮ್ಮ ಮಗನ ಸಂಬಂಧ ತಿಳಿಯಿತಾ? ಅವರು ನಮಗೆ ಸಂಬಂಧಿಯಲ್ಲ. ಅಜಯ್ಗೆ ಜಿಮ್ಗೆ ಬಂದು ಅಣ್ಣನಿಗೆ ಸ್ನೇಹಿತನಾದ. ನಮ್ಮ ಮನೆ ಮಡಂತ್ಯಾರ್ನಲ್ಲಿ ಇದ್ದಿದ್ರಿಂದ ಅಣ್ಣ ನನಗೆ ಕಷ್ಟ ಆಗುತ್ತದೆ. ಅಜಯ್ ಮನೆಯಲ್ಲಿ ಎದುರಿಗೆ ಬಾಡಿಗೆ ಮನೆ ಇದೆ ಅಂತ ಹೇಳಿದ್ದ. ಅದಕ್ಕೆ ಅಮ್ಮ ಒಪ್ಪಿಕೊಂಡರು. ಆದರೆ ಅವರು ಅವರz ಮನೆಯಲ್ಲಿ ಅಣ್ಣನನ್ನು ಇಟ್ಟುಕೊಂಡಿದ್ದರು. ಅವರು ಸದಾ ಜೊತೆಗೆ ಇರುತ್ತಾ ಇದ್ದು ನನ್ನನ್ನು ಮತ್ತು ತಾಯಿಯನ್ನು ನೋಡದಂತೆ ಮಾಡಿ ಹಾಕಿದರು. ನಾನು ಅಜಯ್ಗೆ ಕರೆ ಮಾಡಿ ಅಣ್ಣನನ್ನು ನಮಗೆ ಬಿಟ್ಟುಕೊಡಿ ಎಂದು ವಿನಂತಿಸಿಕೊಂಡೆ. ಅವರು ಕೊಡಲಿಲ್ಲ. ನಮಗೆ ಆ ಬಗ್ಗೆ ಅನುಮಾನವಿದೆ.
ಅಮ್ಮ ಬಿದ್ದು ಕೈ ಪ್ರಾಕ್ಚರ್ ಆದಾಗಲೂ ಅಣ್ಣ ಸಿಗಲಿಲ್ಲ. ನಂತರ ಅವನ ಫ್ರೆಂಡ್ಗೆ ಫೋಟೋ ಕಳುಹಿಸಿ ಮನವಿ ಮಾಡಿದರೂ ಅವನನ್ನು ಬರಲು ಬಿಡಲಿಲ್ಲ. ಇಷ್ಟೆಲ್ಲ ಆದಾಗ್ಲೂ ಬರಲು ಬಿಡಲಿಲ್ಲ ಅಂದಾಗ ಅದು ಬಂಧನವೇ ಅಲ್ವೇ ?
ಐದು ವರ್ಷ ಅಮ್ಮನನ್ನು ನೋಡಲು ಬಿಡದವರಿಗೆ ಅಣ್ಙನ ಜೀವ ಹೋದಾಗ ಅಮ್ಮನಿಗೆ ಕರೆ ಮಾಡಿ ತಿಳಿಸಿದ್ಯಾಕೆ ? ಅವನ ಕಾರ್ಯನೂ ಅವರೇ ಮಾಡಬಹುದಿತ್ತಲ್ವೇ ? ಈ ಬಗ್ಗೆ ತನಿಖೆಯಾಗಬೇಕು. ನನ್ನ ಹೆಸರಿನಲ್ಲಿದ್ದ ಕಾರು ಫೋರ್ಜರಿ ಸಹಿ ಹಾಕಿ ಮಾರಾಟ ಮಾಡಿದರು. ನಾವು ನೋವುಗಳಿದ್ದರೂ ದೇವರು ಆತನನ್ನು ಕರೆಸಬಹುದು ಅಂತ ಮೌನವಾಗಿದ್ದೆವು. ಹಿಂದೆ ಕರೆ ಮಾಡಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಮ್ಮ ಬರುತ್ತಾರೆ ಬಾ ಅಂದರೂ ಬರುತ್ತಿರಲಿಲ್ಲ. ಬದಲಾಗಿ ಆ ಮಹಿಳೆ ಮತ್ತು ಮನೆಯವರನ್ನು ಮನೆಯೊಳಗೆ ಕರೆದರೆ ಬರುತ್ತೇನೆ ಅಂತ ಹೇಳುತ್ತಾ ಇದ್ದ. ಅಮ್ಮನನ್ನು ಎದುರೆದುರು ಸಿಗಲು ಬಿಡುತ್ತಿರಲಿಲ್ಲ. ಅಮ್ಮ ಮಗನ ಸಂಬಂಧವನ್ನೇ ದೂರ ಮಾಡಿದರು ಎಂದು ಹೇಳಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು: ಸಚಿನ್ ರೈ ಅವರ ಸಾವಿನ ಕುರಿತು ಸಂಶಯ ಇರುವುದಾಗಿ ಅವರ ತಾಯಿ ಗುಲಾಬಿ ರೈ ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: ೧೬/೨೦೨೬ರಂತೆ ಪ್ರಕರಣ ದಾಖಲಾಗಿದೆ. ಸಚಿನ್ ರೈ ಅವರು ಸುಮಾರು ೧೦ ವರ್ಷಗಳಿಂದ ಪುತ್ತೂರಿನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದವರು ಕಳೆದ ೫ ವರ್ಷಗಳಿಂದ ಇಲ್ಲಿನ ಕಲ್ಲಿಮಾರು ಎಂಬಲ್ಲಿ ಅಜಯ್ ನಾಥ್ ಶೆಟ್ಟಿ ಎಂಬವರ ಮನೆಯಲ್ಲಿ ವಾಸವಾಗಿದ್ದರು. ಜು.೫ರಂದು ಬೆಳಿಗ್ಗೆ ಅಜಯ್ನಾಥ್ ಅವರ ತಾಯಿ ಗೀತಾ ಶೆಟ್ಟಿಯವರು ನನಗೆ ಕರೆ ಮಾಡಿ ಮಗ ಸಚಿನ್ ಬಾತ್ರೂಮ್ನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿರುವುದಾಗಿ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಬಂದಾಗ ಸಚಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಗನ ಸಾವಿನಲ್ಲಿ ಸಂಶಯವಿರುವುದಾಗಿ ಅವರ ತಾಯಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ನಿವಾಸಿ ಗುಲಾಬಿ ರೈ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಪುತ್ತೂರಿನ ಕೆಯ್ಯೂರಿನಲ್ಲಿ ವಾಸವಾಗಿದ್ದ ಗುಲಾಬಿ ರೈ ಕುಟುಂಬ ಪ್ರಸ್ತುತ ಮಡಂತ್ಯಾರು ಪಾರೆಂಕಿಯಲ್ಲಿ ಗುಲಾಬಿ ರೈಯವರ ತಾಯಿಯ ಜಮೀನನಲ್ಲಿ ಮನೆ ಮಾಡಿ ವಾಸವಿದ್ದಾರೆ. ಗುಲಾಬಿ ರೈ ಮತ್ತು ಮಗಳು ಶಬರಿ ರೈಯವರು ಪಾರೆಂಕಿಯಲ್ಲಿ ವಾಸವಿದ್ದು ಸಚಿನ್ ರೈಯವರು ಕಳೆದ ಐದು ವರ್ಷಗಳಿಂದ ಪಾರೆಂಕಿ ಮನೆಗೆ ಹೋಗದೆ ಪುತ್ತೂರಿನಲ್ಲಿಯೇ ವಾಸ್ತವ್ಯವಿದ್ದರು ಎಂದು ತಿಳಿದು ಬಂದಿದೆ.









