ಚಿತ್ತೂರಿನಲ್ಲಿ ಕಾರ್ಯಾಚರಣೆ ಶ್ರೀನಿವಾಸುಲು ಬಂಧನ

0

ಬೆಳ್ತಂಗಡಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಶ್ರೀನಿವಾಸುಲು ಎಂಬಾತನನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ೨೦೧೬ರ ಡಿಸೆಂಬರ್ ೨೫ರಂದು ಬೆಂಗಳೂರು ಆನೆಕಲ್ ತಾಲೂಕಿನ ಜಿಗಣಿ ಗ್ರಾಮದ ಲೋಕೇಶ್ ಎಂಬವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತಿದ್ದ ವೇಳೆ ಯಾರೋ ಕಳ್ಳರು ಕಿಸೆಯಿಂದ ವಿಜಯ ಬ್ಯಾಂಕ್‌ನ ಎರಡು ಎ.ಟಿ.ಎಂ. ಕಾರ್ಡುಗಳನ್ನು ಮತ್ತು ರೂ ೮೭೦೦ ನಗದು ಹಣವನ್ನು ಕಳವು ಮಾಡಿದ್ದರು. ನಂತರ ಕಳವು ಮಾಡಿದ ಎ.ಟಿ.ಎಂ. ಕಾರ್ಡ್ ಉಪಯೋಗಿಸಿ ಅದರ ಕವರ್‌ನಲ್ಲಿ ಬರೆದಿದ್ದ ಸಿಕ್ರೇಟ್ ನಂಬರ್ ಬಳಸಿ ವಿವಿಧ ಕಡೆಯಿಂದ ರೂ ೪೮,೪೦೦ ಹಣ ಡ್ರಾ ಮಾಡಿದ್ದರು.

ಈ ಕುರಿತು ಲೋಕೇಶ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೬೯/೨೦೧೬ರಂತೆ ಐಪಿಸಿ ೩೭೯ ಮತ್ತು ೨೦೧ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೆನಮೂರು ಎಂಬಲ್ಲಿಯ ಕವಲಗುಂಟದ ವೆಂಕಟಯ್ಯ ಎಂಬವರ ಪುತ್ರ ಶ್ರೀನಿವಾಸಲು ಎಂಬಾತನನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದ ಆತ ಕಳೆದ ೯ ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.

ಶ್ರೀನಿವಾಸುಲು ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆಂದ್ರಪ್ರದೇಶದ ಚಿತ್ತೂರಿನಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕಿ ರೋಹಿಣಿ ಸಿ.ಕೆ., ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮತ್ತು ಉಪನಿರೀಕ್ಷಕ ಸಮರ್ಥ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ವೃಷಭ ಹಾಗೂ ಚರಣ್‌ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here