ರೋಡ್‌ದ ಗುಂಡಿಡ್ ಮುಗುಡು ಸಾಂಕೊಲಿ, ಕಜಿಪ್ ಮಲ್ತ್‌ದ್ ಜನಪ್ರತಿನಿಧಿಲೆಗ್ ಬಲಸುಗ- ಉಪ್ಪಿನಂಗಡಿ-ಪಿಲಿಗೂಡು ರಸ್ತೆ ಬಗ್ಗೆ ಜನಾಕ್ರೋಶ

0

ಬೆಳ್ತಂಗಡಿ: `ಅಲ್ಪ ಒರಿ ಗುಂಡಿಗ್ ಬೂರ್ಯೆರ್.. ಓ ಮುಲ್ಪ ಒರಿ ಮುರಾನಿ ಬೂರ್ಯೆರ್..ಸರ್ ಎನ್ನನೇ ಮೂಂಕು ಮುಸುಂಟು ಪೋಂಡು.. ಈ ರೋಡುಡು ಪೋಂಡ ನಮ್ಮ ಗಾಡಿ ಗ್ಯಾರೇಜ್ ಗೆ ಪೋವೋಡು.. ಬೆಂದಿನ ಪೂರ ಗ್ಯಾರೇಜ್ ಗೆ.. ಸಾರ್ ಮುಲ್ಪದ ರೋಡ್ದ ಗುಂಡಿಡ್ ಮುಗುಡು ಸಾಂಕೊಲಿ-ಅವ್ವೆ ಮುಗುಡು ಕಜಿಪ್ ಮಲ್ತ್‌ದ್ ಜನಪ್ರತಿನಿಧಿಲೆಗ್ ಬಲಸುಗ.. ಎಂಕುಲೆಗ್ ಫ್ರೀ ಒವ್ವುಲ ಬೊಡ್ಚಿ, ದಯದೀದ್ ಈ ರೋಡ್ ಸರಿ ಮಲ್ಪಾಲೆ..’

ಇದು ಉಪ್ಪಿನಂಗಡಿ ಪಿಲಿಗೂಡು ಹೆದ್ದಾರಿಯಲ್ಲಿ ಸಾಗುವ ಜನರ ಆಕ್ರಂದನ.. ಆದರೆ ಸರ್ಕಾರ ಸೇರಿ ಕೆಲಸ ಮಾಡಿಸಬೇಕಾದ ಯಾರಿಗೂ ಇದು ಕೇಳಿಸುತ್ತಿಲ್ಲ.

ಇದು ಹೊಂಡಗಳ ಕಥೆ: ಗುರುವಾಯನಕೆರೆಯಿಂದ ಪಿಲಿಗೂಡು ತನಕ ಕೇಂದ್ರ ಸರ್ಕಾರದ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಸ್ಪರ್ ರಸ್ತೆಯನ್ನು ಅತ್ಯುತ್ತಮವಾಗಿ ಮಾಡಲಾಗಿದೆ. ಆದರೆ ಅಲ್ಲಿಂದ ನಂತರ ಉಪ್ಪಿನಂಗಡಿ ತನಕ ಸಾಗುವುದು ಪ್ರಯಾಣಿಕರಿಗೆ ನರಕಯಾತನೆ. ಇದು ರಸ್ತೆಯಲ್ಲಿ ಗುಂಡಿ ಇರುವುದಲ್ಲ, ನೂರಾರು ಗುಂಡಿಗಳ ನಡುವೆ ಅಲ್ಲಲ್ಲಿ ತೇಪೆ ಹಾಕಿದ ರಸ್ತೆಯಿದೆ.

ಬಿದ್ದವರ ಪಟ್ಟಿ ಬಲು ದೊಡ್ಡದು: ಕಡವಿನ ಬಾಗಿಲು ಕ್ರಾಸ್, ಇಳಂತಿಲ ಕ್ರಾಸ್, ತೆಕ್ಕಾರು ಕ್ರಾಸ್, ನೇಜಿಕಾರು, ಕರಾಯ, ಗರಡಿ, ಶಿವಗಿರಿ, ಕುಪ್ಪೆಟ್ಟಿ ಸೇತುವೆಯ ಬಳಿ, ಹಲೇಜಿ ಮುಂತಾದೆಡೆ ಇರುವ ನೂರಾರು ಗುಂಡಿಗಳಿಗೆ ಲೆಕ್ಕವಿಲ್ಲದ್ದಷ್ಟು ಜನ ಬಿದ್ದಾಗಿದೆ. ಗಾಯಗೊಂಡ ಅವರು ಆಸ್ಪತ್ರೆ ಸೇರಿ ನಂತರ ಡಿಸ್ಚಾರ್ಜ್ ಆಗಿದ್ದಾರೆ. ಉಜಿರೆಯ ಕಾಶಿಬೆಟ್ಟುವಿನ ಯುವಕ ಕೂಡ ನೇಜಿಕಾರು ಸಮೀಪ ಹೊಂಡಕ್ಕೆ ಬಿದ್ದು ೧ ತಿಂಗಳಿಗೂ ಅಧಿಕ ಕಾಲ ಮನೆಯಲ್ಲೇ ಇದ್ದು, ಈಗ ಮತ್ತೆ ಉದ್ಯೋಗಕ್ಕೆ ತೆರಳಿದ್ದಾರೆ. ಹೊಂಡದ ಸಮೀಪ ಬ್ರೇಕ್ ಹಾಕಿದ ಕುಪ್ಪೆಟ್ಟಿಯ ರಿಕ್ಷಾ ಚಾಲಕ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡ ಘಟನೆಯೂ ನಡೆದಿದೆ.

ಆಕ್ರೋಶ, ನೋವಿನ ನುಡಿ: ಸುದ್ದಿ ನ್ಯೂಸ್ ಈ ಹೊಂಡ ಗುಂಡಿಯ ರಸ್ತೆಯ ವರದಿ ಮಾಡಲು ಉಪ್ಪಿನಂಗಡಿ ಪಿಲಿಗೂಡು ರಸ್ತೆಯಲ್ಲಿ ನಿಂತಾಗ ಪ್ರತಿಯೊಬ್ಬರು ಕೂಡ ನೋವಿನಿಂದಲೇ ಮಾತನಾಡಿದರು. ಈ ಹೊಂಡ ಮುಚ್ಚಲಾಗದ ರಾಜಕಾರಣಿಗೆ ನಾಚಿಕೆಯಾಗಲ್ವಾ ? ರಾಜ್ಯ ಸರ್ಕಾರ ನಮಗೆ ಕೊಡುವ ಫ್ರೀ ಸೌಲಭ್ಯಗಳು ಬೇಡವೇ ಬೇಡ. ಈ ರಸ್ತೆ ಸರಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ, ಇದಕ್ಕೆ ಸೂಕ್ತ ಸ್ಪಂದನೆ ಇಲ್ಲಿಯವರೆಗೆ ಸಿಕ್ಕಿಲ್ಲ.

ಯಾಕೆ ಮಾಡಿಲ್ಲ?: ಶಾಸಕ ಹರೀಶ್ ಪೂಂಜ ಈ ರಸ್ತೆಯ ಅಭಿವೃದ್ಧಿಗೆ ತಮ್ಮ ಎಸ್.ಎಚ್.ಡಿ.ಪಿ ಅನದಾನದಲ್ಲಿ ರೂ ೧೨ ಕೋಟಿ ಮೀಸಲಿರಿಸಿzನೆ ಎಂದು ಮಾಧ್ಯಮಗಳೊಂದಿಗೆ ತಿಳಿಸಿದ್ದರು. ಅಲ್ಲದೇ, ಅಧಿವೇಶನದಲ್ಲೂ ಕೂಡ ಪ್ರಸ್ತಾಪಿಸಿದ್ದರು. ಆಗ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಅನುದಾನದ ಭರವಸೆ ನೀಡಿದ್ದರು. ಇದಾದ ನಂತರವೂ ಅಂದಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಬಳಿ ತೆರಳಿ, ಅಧಿಕಾರಿಗಳ ತೆರಳಿ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿಕೊಂಡಿದ್ದರು. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಈ ರಸ್ತೆಯ ಅಭಿವೃದ್ಧಿಯತ್ತ ಚಿತ್ತ ನೆಟ್ಟಿಲ್ಲ ಅನ್ನುವುದಕ್ಕೆ ಉತ್ತರ ಸಿಗಬೇಕಿದೆ.

ಉಪ್ಪಿನಂಗಡಿ ತನಕ ವಿಸ್ತರಿಸಬಹುದಿತ್ತಲ್ಲವೇ?: ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಯನ್ನು ಸ್ಪರ್ ರಸ್ತೆ ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರದ ಸ್ಪರ್ ರಸ್ತೆ ಅಭಿವೃದ್ದಿಯಡಿ ಗುರುವಾಯನಕೆರೆ ಯಿಂದ ಪಿಲಿಗೂಡುವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಇದೇ ಯೋಜನೆಯನ್ನು ಮುಂದುವರೆಸಿ ಉಪ್ಪಿನಂಗಡಿ ತನಕ ರಸ್ತೆ ಅಭಿವೃದ್ಧಿ ಮಾಡಬಹುದಿತ್ತಲ್ಲವೇ, ಆಗ ಮಾತ್ರ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಿದಂತಾಗುತ್ತದೆಯಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಸಂಸದ ಬ್ರಿಜೇಶ್ ಚೌಟರವರು ಉತ್ತರಿಸಬೇಕಿದೆ.

ಮೀನ್ ಫ್ರೈ ಮಾಡಿ: `ಸುದ್ದಿ ನ್ಯೂಸ್’ ವರದಿ ಮಾಡುವ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರಸ್ತೆ ಗುಂಡಿಗಳ ಬಗ್ಗೆ ಮಾತನಾಡಿ “ಉಪ್ಪಿನಂಗಡಿಯಿಂದ ಪಿಲಿಗೂಡು ತನಕದ ರಸ್ತೆಯಲ್ಲಿ ಮುಗುಡು ಮೀನು ಸಾಕಬಹುದು. ಆ ಮೀನನ್ನು ಫ್ರೈ ಮಾಡಿ, ಪದಾರ್ಥ ಮಾಡಿ ರಾಜಕಾರಣಿಗಳಿಗೆ ಬಡಿಸಬಹುದು. ಅಲ್ಲದೇ, ಅದರಲ್ಲಿ ಯಾರಾದರೂ ಈಜುವ ಆಸಕ್ತಿಯಿದ್ದರೆ ಅವರಿಗೆ ಈಜಲೂ ಕೂಡ ಅವಕಾಶವಿದೆ” ಅಂತ ನೋವಲ್ಲಿ ತಿಳಿಸಿದ್ದಾರೆ.

ಫ್ರೀ ಸೌಲಭ್ಯ ಬೇಡ, ರಸ್ತೆ ಮಾಡಿಕೊಡಿ: ಕಣಿಯೂರು ಗ್ರಾ.ಪಂ.ನ ಮಾಜಿ ಸದಸ್ಯ ಅಬ್ದುಲ್ ಸುಕೂರು ಮಾತನಾಡಿ, ಈ ರಸ್ತೆಯ ಪರಿಸ್ಥಿತಿಗೆ ಮೊದಲ ಕಾರಣ ನಮ್ಮ ಶಾಸಕರು, ಎರಡನೆಯದ್ದು ರಾಜ್ಯ ಸರ್ಕಾರ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಯಾವಾಗಲೋ ಈ ರಸ್ತೆ ಸರಿ ಮಾಡಬಹುದಿತ್ತು. ತಾತ್ಕಾಲಿಕ ಪರಿಹಾರವಾದರೂ ಮಾಡಬೇಕು. ಟ್ರಾಫಿಕ್ ಪೊಲೀಸ್ ನಿಲ್ಲಿಸಿ ನಮ್ಮಿಂದ ದಂಡ ವಸೂಲಿ ಮಾಡುತ್ತಾರೆ. ಅವರನ್ನು ಇಲ್ಲಿಂದ ಓಡಿಸಬೇಕು. ಇಂತಹ ಗುಂಡಿ ರಸ್ತೆಯಲ್ಲಿ ಓಡಾಡುವ ನಮಗೆ ಯಾರು ಪರಿಹಾರ ಕೊಡುತ್ತಾರೆ. ಟ್ಯಾಕ್ಸ್ ಕಟ್ಟಿ ಗಾಡಿ ಬರುವುದು. ಬಂದು ಇಲ್ಲಿಯ ಗುಂಡಿಗೆ ಹಾಕುವುದು. ನಮಗೆ ತಿಂಗಳಿಗೆ ಕೊಡುವ ಯಾವುದೇ ಫ್ರೀ ಬೇಡ, ನಾವು ಹಣ ಕೊಡುತ್ತೇವೆ, ರಸ್ತೆಯ ಅಭಿವೃದ್ಧಿ ಮಾಡಿ ಎಂದರು.

ಲಾರಿಯ ಗೇರ್ ಬಾಕ್ಸ್ ಢಮಾರ್: ಕರಾಯ ಸಮೀಪದ ರಸ್ತೆಯ ಗುಂಡಿಗೆ ಜುಲೈ ೧ರಂದು ಸಂಜೆಗೆ ನಮ್ಮ ಜೋಳ ತುಂಬಿಕೊಂಡ ಲಾರಿ ಬಿದ್ದಿದೆ. ಇದರಿಂದಾಗಿ ಗೇರ್ ಬಾಕ್ಸ್ ಹೋಗಿದೆ. ಅಂದಾಜು ೨೫೦೦೦ ರೂ. ಖರ್ಚಿದೆ. ಇಂತಹ ರಸ್ತೆ ಇದ್ದರೆ ನಮ್ಮ ಗತಿ ಏನು? ಯಾರಾದರೂ ಮನಸ್ಸು ಮಾಡಿ ಕೂಡಲೇ ರಸ್ತೆ ಸರಿಪಡಿಸಿ. -ಕಿರಣ್ ಹಾಸನ, ಲಾರಿ ಡ್ರೈವರ್

ಪರಿಹಾರ ಕೊಡ್ತೀರಾ?: ಉಪ್ಪಿನಂಗಡಿ-ಪಿಲಿಗೂಡು ರಸ್ತೆಯಲ್ಲಿ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಇಲ್ಲಿ ಗುಂಡಿಗೆ ಬಿದ್ದು ಗಾಯಗೊಂಡವರಿಗೆ ರಾಜ್ಯ ಸರ್ಕಾರ ಪರಿಹಾರ ಕೊಡುತ್ತಾ ಅಂತ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಇಲ್ಲವೇ ಸ್ಪರ್ ರಸ್ತೆಯಾಗಿರುವ ಕಾರಣ ಇಲ್ಲಿ ಬಿದ್ದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುತ್ತಿರಾ ಸಂಸದ ಚೌಟರವರೇ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಶಾಸಕ, ಸಂಸದ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕಿದೆ.

ಮಣ್ಣು ತುಂಬಿದ ಲಾರಿಗಳ ಪಯಣ: ಈ ರಸ್ತೆಯಲ್ಲಿ ಹೊರ ರಾಜ್ಯಗಳ ಟನ್ ಗಟ್ಟಲೇ ಮಣ್ಣು ತುಂಬಿದ ಲಾರಿಗಳು ಪಯಣಿಸುತ್ತವೆ. ಇವುಗಳು ರಸ್ತೆ ಹದಗೆಟ್ಟಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಲಾರಿಯನ್ನು ಬೆಳ್ತಂಗಡಿ, ಉಜಿರೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕೊಡುವುದಿಲ್ಲ, ಅದಕ್ಕೆ ಅವುಗಳು ಈ ರಸ್ತೆಯಲ್ಲಿ ಚಲಿಸುತ್ತವೆ ಎಂದಿದ್ದಾರೆ. ಇದಕ್ಕೂ ಅಧಿಕಾರಿಗಳು ಉತ್ತರಿಸಬೇಕಿದೆ.

LEAVE A REPLY

Please enter your comment!
Please enter your name here