






ಚಾರ್ಮಾಡಿ ಘಾಟಿಯುದ್ದಕ್ಕೂ ಸದಾ ದಟ್ಟವಾದ ಮಂಜು ಕವಿದ ವಾತಾವರಣ ಇರುವುದರಿಂದ ವಾಹನ ಸವಾರರಿಗೆ ಮುಂದಿರುವ ರಸ್ತೆ ಸರಿಯಾಗಿ ಕಾಣಿಸುತ್ತಿಲ್ಲ. ಚಾರ್ಮಾಡಿ ಘಾಟ್‌ನ ಪ್ರಸಿದ್ಧ ಮಲೆಯ ಮಾರುತ ಪ್ರವಾಸಿ ಮಂದಿರದ ಬಳಿ ರಸ್ತೆ ಸರಿಯಾಗಿ ಕಾಣಿಸದೆ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಭಾರಿ ಮಳೆಯಿಂದಾಗಿ ಘಾಟಿಯ ಮೇಲ್ಭಾಗದ ನೀರು ರಭಸವಾಗಿ ಹರಿದು ಬರುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಳ್ಳುತ್ತಿದೆ.


ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಗುಡ್ಡ ಕುಸಿತ ಹಾಗೂ ಮರಗಳು ಧರೆಗುರುಳುವ ಸಾಧ್ಯತೆ ಹೆಚ್ಚಿದೆ.ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದಾರೆ. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ, ಚಾಲಕರು ಮುಂಜಾಗ್ರತೆ ವಹಿಸಿ ಅತ್ಯಂತ ನಿಧಾನವಾಗಿ ವಾಹನ ಚಾಲನೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.
ಪ್ರವಾಸಿಗರು ಕಿರಿದಾದ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ನೃತ್ಯ ಮಾಡುವುದು, ರೀಲ್ಸ್ ಮಾಡುವುದು. ಧೂಮಪಾನ ಹಾಗೂ ಮದ್ಯಪಾನದಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗಿದೆ. ರಸ್ತೆ ಬದಿಯ ಅಪಾಯಕಾರಿ ಕಲ್ಲು ಬಂಡೆಗಳನ್ನು ಏರುವುದು ಹಾಗೂ ಪ್ರಪಾತದ ತಡೆಗೋಡೆಗಳ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುವ ಸಾಹಸಕ್ಕೆ ಪ್ರವಾಸಿಗರು ಕೈ ಹಾಕುತ್ತಿದ್ದಾರೆ, ಘಾಟಿ ಪ್ರದೇಶದಲ್ಲಿ ಪೊಲೀಸರ ಗಸ್ತು ನಿರಂತರವಾಗಿದ್ದರೂ, ಪ್ರವಾಸಿಗರ ಈ ಆಟಾಟೋಪಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆ ದಂಡ ವಿಧಿಸುವ ಪ್ರಕ್ರಿಯೆಗೂ ಮುಂದಾಗಿದೆ.









