







ಬೆಳ್ತಂಗಡಿ: ಲಕ್ಷಾಂತರ ರೂ. ಮೌಲ್ಯದ ಖೋಟಾ ನೋಟುಗಳನ್ನು ಸಂಗ್ರಹಿಸಿದ್ದ ಆರೋಪದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಆರೋಪಿಯೋರ್ವ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬಂಟ್ವಾಳ ತಾಲೂಕಿನ ಕೂಮಿನಡ್ಕ ನಿವಾಸಿ ಅಬ್ದುಲ್ ರಶೀದ್ ಮೊಹಮದ್ ಅಲಿ ಎಂಬಾತ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಆರೋಪಿಗಳು ೨.೩೮ ಲಕ್ಷ ರೂ. ಮೌಲ್ಯದ ಖೋಟಾನೋಟು ಸಂಗ್ರಹಿಸಿರುವುದರಿಂದ ಸರಕಾರದ ಪರ ರಾಜ್ಯ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಹಾಜರಾಗಬೇಕು ಎಂದು ಸೂಚಿಸಿದ ನ್ಯಾಯಪೀಠ ಪುಂಜಾಲಕಟ್ಟೆ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.


ಎಸ್.ಐ. ಕೆ.ವಿ.ರಾಜೇಶ್ ಅವರು ೨೦೨೬ರ ಮೇ ೧ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಮದ್ ಸಮೀರ್, ಮಹಮ್ಮದ್ ಇರ್ಫಾನ್, ರಶೀದ್ ಕೂಮಿನಡ್ಕ ಮತ್ತಿತರರು ೨೦೨೬ರ ಮೇ ೧ರಂದು ಕಾರಿನಲ್ಲಿ ೫೦೦ ರೂ. ಮುಖಬೆಲೆಯ ಒಟ್ಟು ೨.೩೮ ಲಕ್ಷ ರೂ ಮೌಲ್ಯದ ಖೋಟಾನೋಟುಗಳನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಆ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳ ವಶದಲ್ಲಿದ್ದ ೩ ಮೊಬೈಲ್ ಫೋನ್, ೫೭ ಸಾವಿರ ರೂ. ವಶಡಿಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತೆ ೧೭೯ ಮತ್ತು ೧೮೦ರಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.








