







ಬೆಳ್ತಂಗಡಿ: ಬಳಂಜ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಅಶ್ವತ್ಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಶಾಲಾ ಬಸ್ಗೆ ಸಂಬಂಧಿಸಿದಂತೆ ಆರೋಪ ಕೇಳಿ ಬಂದಿದೆ. ಬಸ್ನ ಎಫ್ಸಿ ಅವಧಿ ಮುಗಿದಿದೆ ಮತ್ತು ಶಾಲೆಗೆ ಬಸ್ ಹಸ್ತಾಂತರಿಸಲು ಶಿಕ್ಷಣ ಇಲಾಖೆಯ ಅನುಮತಿ ಪಡೆದಿಲ್ಲ ಎಂದು ದೂರು ವ್ಯಕ್ತವಾಗಿದೆ. ಈ ಆರೋಪಗಳಿಗೆ ಬಸ್ ಕೊಡುಗೆಯಾಗಿ ನೀಡಿದ್ದ ದಾನಿ ಅಶ್ವಥ್ ಹೆಗ್ಡೆ ಬಳಂಜ ಸ್ಪಷ್ಟನೆ ನೀಡಿದ್ದಾರೆ.
ಆರೋಪ: ಇತ್ತೀಚೆಗೆ ಬಳಂಜ ಶಾಲೆಯ ಮಕ್ಕಳನ್ನು ಟಿಪ್ಪರ್ ಹಾಗೂ ಪಿಕಪ್ ವಾಹನದಲ್ಲಿ ಅಧ್ಯಯನ ಪ್ರವಾಸಕ್ಕೆ ಕರೆದೊಯ್ದ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಅಮಾನತುಗೊಂಡ ಘಟನೆ ನಡೆದ ಕೆಲವೇ ತಿಂಗಳ ಬಳಿಕ ಬಸ್ಗೆ ಸಂಬಂಧಿಸಿದ ಆರೋಪ ಕೇಳಿ ಬಂದಿದೆ. ಜೂನ್ ೧೫ರಂದು ಅಶ್ವಥ್ ಹೆಗ್ಡೆ ಫೌಂಡೇಷನ್ ವತಿಯಿಂದ ಬಳಂಜ ಶಾಲೆಗೆ ಬಸ್ ಕೊಡುಗೆ ನೀಡಲಾಗಿತ್ತು. ಶಾಸಕ ಹರೀಶ್ ಪೂಂಜ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಅವರ ಸಮ್ಮುಖದಲ್ಲಿ ಬಸ್ ಹಸ್ತಾಂತರ ಮಾಡಲಾಗಿತ್ತು. ಶಾಲೆಗೆ ಬಸ್ ಕೊಡುಗೆ ನೀಡಿದ ಅಶ್ವತ್ಥ್ ಹೆಗ್ಡೆ ಫೌಂಡೇಶನ್ನ ಸೇವಾ ಕಾರ್ಯವನ್ನು ಶಾಸಕರ ಸಹಿತ ಅತಿಥಿ ಗಣ್ಯರು ಶ್ಲಾಸಿದ್ದರು. ಆದರೆ ಇದೀಗ ಶಾಲಾ ಬಸ್ ಕುರಿತು ಆರೋಪ ಕೇಳಿ ಬಂದಿದೆ. ಜೂನ್ ೧೧ರಂದು ಬಸ್ನ ಎಫ್ಸಿ ಅವಧಿ ಮುಗಿದಿದೆ. ದಾಖಲೆಗಳನ್ನು ಪೂರ್ಣಗೊಳಿಸದೆ ಪ್ರತಿನಿತ್ಯ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಹಾಗೂ ವಾಪಸ್ ಕರೆದೊಯ್ಯುವ ಕೆಲಸ ನಡೆಯುತ್ತಿದೆ. ಬಸ್ನ ಮಾಲೀಕತ್ವ ಇನ್ನೂ ಮೂರನೇ ವ್ಯಕ್ತಿಯ ಹೆಸರಿನಲ್ಲಿದೆ. ಅಧಿಕೃತ ಹಸ್ತಾಂತರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ಆರೋಪ ವ್ಯಕ್ತವಾಗಿದೆ. ಈ ಆರೋಪದ ಕುರಿತು ಅಶ್ವತ್ಥ್ ಹೆಗ್ಡೆ ಫೌಂಡೇಶನ್ ಮುಖ್ಯಸ್ಥರಾದ ಉದ್ಯಮಿ ಅಶ್ವತ್ಥ್ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.
ಅಶ್ವಥ್ ಹೆಗ್ಡೆ ಸ್ಪಷ್ಟನೆ: ಗ್ರಾಮೀಣ ಭಾಗದ ಮಕ್ಕಳು ಮಳೆಗಾಲದಲ್ಲಿ ಕಷ್ಟದಿಂದ ನಡೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಮಕ್ಕಳ ಪೋಷಕರೇ ವಿನಂತಿ ಮಾಡಿದ ಕಾರಣ ಬಳಂಜ ಶಾಲೆಯಲ್ಲಿ ಶಾಲಾ ವಾಹನ ಸೌಲಭ್ಯ ಆರಂಭಿಸಲಾಗಿದೆ. ಮುಂಚಿತವಾಗಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಡಿಡಿಪಿಐ ಅವರಿಗೆ ನಾನೇ ಖುದ್ದಾಗಿ ಕರೆ ಮಾಡಿ ವಿಚಾರ ತಿಳಿಸಿzನೆ. ಶಾಲೆಗೂ ಆಹ್ವಾನಿಸಿzನೆ.
ನಮ್ಮ ಶಾಲಾ ಮುಖ್ಯೋ ಪಾದ್ಯಾಯರು ಬಿಇಓ ಕಚೇರಿಗೆ ತೆರಳಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ ಎನ್ನುವುದು ಸುಳ್ಳು ಎಂದು ಅಶ್ವತ್ಥ್ ಹೆಗ್ಡೆ ತಿಳಿಸಿದ್ದಾರೆ. ಈಗಾಗಲೇ ನಮ್ಮ ಶಾಲೆಯ ಎಲ್ಲಾ ಪೋಷಕರಿಗೆ ತಿಳಿದಿರುವಂತೆ ಇದು ಕೇವಲ ಪ್ರಾಯೋಗಿಕ ಸಂಚಾರ. ಇಲ್ಲಿಯ ತನಕ ಯಾವುದೇ ರೂಟ್ ಮ್ಯಾಪ್ ಅಂತಿಮಗೊಳಿಸಿರದ ಕಾರಣ ಪ್ರಾಯೋಗಿಕವಾಗಿ ಆರಂಭಿಸಿ ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ಜೂಲೈ ತಿಂಗಳ ನಂತರ ಅಧಿಕೃತ ಸೇವೆ ಆರಂಭಿಸುವುದಾಗಿ ಸ್ಪಷ್ಟವಾಗಿ ತಿಳಿಸಿzವೆ. ಈ ಬಸ್ ೨೦೨೪ ಜೂನ್ ತಿಂಗಳಲ್ಲಿ ಖರೀದಿಸಿದ್ದಾಗಿದ್ದು ಕೇವಲ ಎರಡು ವರ್ಷ ಆಗಿದೆ. ಜೂನ್ ೧೧ನೇ ತಾರೀಖಿಗೆ ನವೀಕರಣ ಆಗಬೇಕಿತ್ತು. ಆದರೂ ಸರಕಾರದ ನಿಯಮದ ಪ್ರಕಾರ ಫಿಟ್ನೆಸ್ ಟೆಸ್ಟ್ ಮಾಡಿಸಬೇಕಿದೆ ಎಂದು ನಮಗೂ ಅರಿವಿದೆ. ಯಾರೂ ಮುಚ್ಚಿಡುತ್ತಿಲ್ಲ. ಆದರೆ ಅದನ್ನು ಆರ್ಟಿಓ ಕಚೇರಿಯಲ್ಲಿ ಖುದ್ದಾಗಿ ನಡೆಸಬೇಕಾಗುತ್ತದೆ.


ಅದಲ್ಲದೆ ಈ ವಾಹನ ಕೆ.ಎ. ೨೦ ಉಡುಪಿ ಜಿಲ್ಲೆಯಲ್ಲಿ ರಿಜಿಸ್ಟರ್ ಆಗಿರುವ ಕಾರಣ ಸ್ವಲ್ಪ ವಿಳಂಬವಾಯಿತು. ಈಗಾಗಲೇ ಸಮಯ ನಿಗದಿಗೊಳಿಸಿ ಬುಧವಾರ ಆ ಪ್ರಕ್ರಿಯೆಯನ್ನೂ ಅಂತಿಮಗೊಳಿಸಲಾಗುವುದು ಎಂದು ಅಶ್ವತ್ಥ್ ಹೆಗ್ಡೆ ಹೇಳಿದ್ದಾರೆ. ಶಾಲಾ ವಾಹನ ಗುತ್ತಿಗೆಯ ಆಧಾರದಲ್ಲಿ ನನ್ನ ಸಂಸ್ಥೆಯಿಂದ ನಮ್ಮ ಬಳಂಜ ಶಾಲೆಗೆ ಮುಂದಿನ ಮೂರು ವರುಷಗಳ ಕಾಲ ಸೌಲಭ್ಯ ಒದಗಿಸಲಾಗುವುದು ಎಂದು ಈಗಾಗಲೇ ಸ್ಪಷ್ಟವಾಗಿ ತಿಳಿಸಿರುತ್ತೇವೆ. ಒಟ್ಟು ೯೬ ಮಕ್ಕಳು ಶಾಲಾ ವಾಹನ ಸೌಲಭ್ಯ ಬೇಕು ಎಂದು ಕೇಳಿಕೊಂಡಿದ್ದಾರೆ. ಎಲ್ಲರಿಗೂ ಮುಂದಿನ ದಿನಗಳಲ್ಲಿ ಸೌಲಭ್ಯ ಒದಗಿಸಲಾಗುವುದು.
ನಾನು ಈ ಸೌಲಭ್ಯ ಆರಂಭಿಸಿದ್ದು ಮಕ್ಕಳ ಮತ್ತು ಪೋಷಕರ ಮನವಿಯ ಮೇರೆಗೆ ಅವರ ಒಳಿತಿಗೇ ಹೊರತು ಬೇರಾವ ಸ್ವಾರ್ಥದಿಂದ ಅಲ್ಲ. ಈ ಸ್ಕೂಲ್ ಬಸ್ ನಿರ್ವಹಣೆಗೆ ಒಂದು ವರ್ಷಕ್ಕೆ ೮ ಲಕ್ಷ ರೂ ಖರ್ಚಿದೆ. ಈ ವೆಚ್ಚವನ್ನು ನನ್ನ ಫೌಂಡೇಷನ್ನಿನ ವತಿಯಿಂದಲೇ ನಿಭಾಯಿಸುತ್ತಿzವೆಯೇ ಹೊರತು ಮಕ್ಕಳಿಗೆ ಹೊರೆ ಮಾಡುತ್ತಿಲ್ಲ.
ಇದು ತಪ್ಪಾದರೆ ಪೋಷಕರು ಮತ್ತು ಮಕ್ಕಳು ಹೇಳಲಿ. ನಾಳೆಯಿಂದಲೇ ಬಸ್ ನಿಲ್ಲಿಸುತ್ತೇವೆ. ವೈಯಕ್ತಿಕ ದ್ವೇಷ ಸಾಧನೆಗೆ ಶಾಲೆಯ ಮುಗ್ದ ಮಕ್ಕಳನ್ನು ಬಳಸುವುದು ಅಕ್ಷಮ್ಯ. ಇದರಲ್ಲಿ ಯಾವುದು ಗೋಲ್ಮಾಲ್, ಯಾವುದು ಅನ್ಯಾಯ, ಯಾವುದು ತಪ್ಪು ಎಂದು ಜನ ನಿರ್ಧಾರ ಮಾಡಲಿ. ಇಂತಹ ವರದಿಗಳು ಬರುವ ಹಿಂದಿನ ಉzಶ ಏನು ಎಂದು ತಿಳಿಯದಷ್ಟು ಮುಗ್ದರು ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅಶ್ವತ್ಥ್ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.
ದಾಖಲೆಗಳನ್ನು ನೀಡಲಾಗಿಲ್ಲ: ಬಿಇಒ
ಕಾರ್ಯಕ್ರಮಕ್ಕೆ ನನ್ನನ್ನು ಕರೆಯುವುದು ಬೇರೆ. ಆದರೆ ಶಾಲೆಗೆ ಬಸ್ ಹಸ್ತಾಂತರ ಮಾಡುವ ವಿವರವಾದ ಸಂಬಂಧಿತ ದಾಖಲೆಗಳನ್ನು ಕಚೇರಿಗೆ ಕಡ್ಡಾಯವಾಗಿ ನೀಡಬೇಕು. ಅದನ್ನು ಶಾಲಾ ವತಿಯಿಂದ ಈವರೆಗೂ ನೀಡಲಾಗಿಲ್ಲ. ಅದಕ್ಕಾಗಿ ನಾವೇ ಶಿಕ್ಷಣ ಸಂಯೋಜನಾಧಿಕಾರಿಯವರನ್ನು ಬಳಂಜ ಶಾಲೆಗೆ ಪರಿಶೀಲನೆಗಾಗಿ ಕಳುಹಿಸಿzವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಪ್ರತಿಕ್ರಿಯಿಸಿದ್ದಾರೆ.









