






ಬೆಳ್ತಂಗಡಿ: ತಾಲೂಕಿನಲ್ಲಿ ಮಳೆಗಾಲ ಬರುತ್ತಿದ್ದಂತೆ ರಸ್ತೆಗಳ ಸಮಸ್ಯೆ ತಲೆದೋರುತ್ತದೆ. ಮರೋಡಿ-ಪಾಣಾಲ್-ಪೆರಾಡಿ ರಸ್ತೆಯಲ್ಲಿ ಇದೀಗ ರಸ್ತೆಯ ಅಭಿವೃದ್ಧಿ ವಿಚಾರವಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಸ್ತೆ ಕಳೆದ ಸುಮಾರು ಎಂಟು ವರ್ಷಗಳಿಂದ ಸಮಗ್ರ ಅಭಿವೃದ್ಧಿ ಕಾಣದೆ ದುಸ್ಥಿತಿಯಲ್ಲಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ರಸ್ತೆಯ ಮೂಲಕ ಹಲವು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಪ್ರತಿದಿನ ಸಂಚರಿಸುತ್ತಿದ್ದು, ರಸ್ತೆ ಗುಂಡಿಮಯವಾಗಿರುವ ಕಾರಣ ಅಪಘಾತದ ಭೀತಿ ಹೆಚ್ಚಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಮತ್ತಷ್ಟು ಕಷ್ಟಕರವಾಗುತ್ತದೆ. ಶಾಲಾ ವಾಹನಗಳು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಲೋಕೋಪಯೋಗಿ ಇಲಾಖೆಯು ೨೦೨೪-೨೫ನೇ ಸಾಲಿನಲ್ಲಿ ರಸ್ತೆಯ ಕೇವಲ ೮೫ ಮೀಟರ್ ಭಾಗದ ಅಭಿವೃದ್ಧಿಗೆ ಸುಮಾರು ೧ ಕೋಟಿ ರೂ. ಅನುದಾನ ಮಂಜೂರು ಮಾಡಿ ಕಾಮಗಾರಿ ಕೈಗೊಂಡಿದೆ. ಆದರೆ ಇದನ್ನು ಹೊರತುಪಡಿಸಿದರೆ ಉಳಿದ ರಸ್ತೆ ಭಾಗದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.
ವರ್ಷಗಳಿಂದ ರಸ್ತೆ ಸಂಪೂರ್ಣ ದುರಸ್ತಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಉಳಿದ ರಸ್ತೆ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕೇವಲ ಒಂದು ಭಾಗದ ಅಭಿವೃದ್ಧಿಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಂಪೂರ್ಣ ರಸ್ತೆಯನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ಒತ್ತಾಯಿಸಿದ್ದಾರೆ.


ಹಲವು ವರ್ಷಗಳ ಬೇಡಿಕೆ: ಈ ರಸ್ತೆ ಅಭಿವೃದ್ಧಿ ಕಾಣದೆ ೮ ವರ್ಷ ಮೇಲಾಯಿತು. ಇಲ್ಲಿ ಧಾರ್ಮಿಕ ಕ್ಷೇತ್ರಗಳಿವೆ, ಶಿಕ್ಷಣ ಸಂಸ್ಥೆಗಳಿವೆ. ಅನೇಕ ಮಂದಿ ಇಲ್ಲಿ ಶಾಲೆಗಳಿಗೆ ಹೋಗುತ್ತಾರೆ. ಕೋಕ್ರಬೆಟ್ಟು ಶಾಲೆಗೆ ಅಗತ್ಯವಾಗಿ ರಸ್ತೆ ಆಗಬೇಕು. ಇಲ್ಲಿ ಶಾಲಾ ವಾಹನ ಕಳುಹಿಸಲು ಹಿಂದೇಟು ಹಾಕುತ್ತಾರೆ. ರಿಕ್ಷಾದವರು ಬರುವುದಿಲ್ಲ. ಈ ರಸ್ತೆಗೆ ಡಾಂಬರೀಕರಣ ಆಗಬೇಕು ಎನ್ನುವುದು ನಮ್ಮ ಹಲವು ವರ್ಷಗಳ ಬೇಡಿಕೆ. ರಸ್ತೆಯ ಅಭಿವೃದ್ಧಿಯಾದರೆ ಜನರೂ ಅಭಿವೃದ್ಧಿ ಆದ ಹಾಗೆ. -ಎಂ.ಎಸ್. ಪೂಜಾರಿ, ಮಾಜಿ ಅಧ್ಯಕ್ಷರು, ಮರೋಡಿ ಗ್ರಾ. ಪಂ
ಬಿಜೆಪಿ ಬಂದರೆ ಅಭಿವೃದ್ಧಿ: ಪ್ರಭಾಕರ ಬಂಗೇರರ ಸಮಯದಲ್ಲಿ ನಬಾರ್ಡ್ನಲ್ಲಿ ಮಾಡಿರುವ ರಸ್ತೆ ಮರೋಡಿ-ಪಾಣಾಲ್ ರಸ್ತೆ. ಆ ನಂತರ ಯಾವುದೇ ಅನುದಾನ ಅದಕ್ಕೆ ಬಿಡುಗಡೆ ಆಗಿಲ್ಲ. ೨೦೧೮ರಲ್ಲಿ ಶಾಸಕ ಹರೀಶ್ ಪೂಂಜರು ೩೦ ಲಕ್ಷ ರೂ. ಅನುದಾನ ಒದಗಿಸಿ ಪ್ಯಾಚ್ ವರ್ಕ್ ಮಾಡಿಸಿದ್ದರು. ನಂತರ ಅದು ಪಿ.ಡಬ್ಲ್ಯು.ಡಿ ರಸ್ತೆಯಾಗಿ ರಸ್ತೆ ನಿರ್ವಹಣೆಗೆ ಕಿ.ಮೀಗೆ ರೂ. ೫೦ ಸಾವಿರ ಖರ್ಚಾಗುತ್ತಿದೆ. ನಂತರ ನಾವು ಶಾಸಕರಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಒತ್ತಡ ತಂದಾಗ ಅಂದಾಜು ವೆಚ್ಚ ೧೧ ಕೋಟಿ ರೂ. ಬೇಕಾಗಿ ಬಂತು. ಆದರೆ ಅನುದಾನದ ಕೊರತೆ. ಇದೀಗ ಕಾಂಗ್ರೆಸ್ ಸರ್ಕಾರವಿದೆ. ಶಾಸಕರು ನಿರಂತರವಾಗಿ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಯಾವುದೇ ಅನುದಾನ ಕೊಟ್ಟಿಲ್ಲ. ಶಾಸಕರು ಪಾಣಾಲ್ ರಸ್ತೆಗೆ ೧ ಕೋಟಿ ರೂ. ಕೊಟ್ಟಿದ್ದಾರೆ. ಅದರ ಕಾಮಗಾರಿ ಆಗಿದೆ. ಉಳಿದ ರಸ್ತೆಗಳು ಹದಗೆಟ್ಟಿವೆ, ಅದರ ಬಗ್ಗೆ ನನಗೂ ಬೇಸರವಿದೆ. ದೊಡ್ಡ ಮೊತ್ತದಿಂದಾಗಿ ಅನುದಾನ ತರಲು ಕಷ್ಟವಾಗಿದೆ. ಬಿಜೆಪಿ ಸರ್ಕಾರ ಬಂದರೆ ಈ ರಸ್ತೆ ಅಭಿವೃದ್ಧಿ ಮಾಡುವ ಸಂಪೂರ್ಣ ಭರವಸೆ ಇದೆ. -ಜಯಂತ್ ಕೋಟ್ಯಾನ್, ಸಹ ಪ್ರಭಾರಿ, ಬಿಜೆಪಿ ಮಂಗಳೂರು ವಿಭಾಗ.
೨೫೦ ಮನೆಗಳಿಗೆ ಅನುಕೂಲ: ನಾರಾವಿಯಿಂದ ಪೆರಾಡಿಗೆ, ಶಿರ್ತಾಡಿಗೆ, ಸುಲ್ಕೇರಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ೮ ವರ್ಷದ ಹಿಂದೆ ಜಿಲ್ಲಾ ಪಂಚಾಯತ್ ರಸ್ತೆಯಾಗಿತ್ತು. ನಂತರ ಈ ರಸ್ತೆ ಮೇಲ್ದರ್ಜೆಗೇರಿತು. ಆದರೆ ಇಲಾಖೆಗೆ ಹೋದ ನಂತರ ಯಾವುದೇ ಅನುದಾನ ಬಂದಿಲ್ಲ. ಪೆರಾಡಿಯಿಂದ ೨ ಕಿಮೀ ರಸ್ತೆ ಮರುಡಾಂಬರೀಕರಣ ಹಾಗೂ ಇತ್ತೀಚಿನ ೧ ಕೋಟಿ ರೂ. ಅನುದಾನದಿಂದ ನಾರಾವಿಯ ೮೫೦ ಮೀ ಡಾಂಬರೀಕರಣ ಆಗಿರುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಇಲ್ಲಿ ರಸ್ತೆ ಕಾಮಗಾರಿ ನಡೆದರೆ ಸುಮಾರು ೨೫೦ ಮನೆಗಳಿಗೆ ಅನುಕೂಲವಾಗಲಿದೆ. ಶುಭರಾಜ್ ಜೈನ್, ಮಾಜಿ ಉಪಾಧ್ಯಕ್ಷರು, ಮರೋಡಿ ಗ್ರಾ.ಪಂ.









