







ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಔಷಧಿ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಔಷಧಿ ವಿಭಾಗದಲ್ಲಿದ್ದು ಈಗ ಮುಖ್ಯಸ್ಥನಾಗಿರುವ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಚಂದ್ರಶೇಖರ್ ಆಸ್ಪತ್ರೆಯ ಔಷಧಾಲಯದ ಉಗ್ರಾಣದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಜೂ.೧೧ರಂದು ಅಪರಾಧ ಕ್ರಮಾಂಕ ೬೭/೨೬ರಂತೆ ಬಿಎನ್ಎಸ್ ೭೫(೩), ೭೯, ೩೫೧(೨)ರಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲು: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಮುಖ್ಯ ಔಷಧಿ ವಿಭಾಗದಲ್ಲಿ ಫಾರ್ಮಸಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಅವರು ೨೦೨೬ರ ಜನವರಿ ೧ರಂದು ೧೦.೩೦ ಗಂಟೆಗೆ ಮಹಿಳಾ ಸಿಬ್ಬಂದಿ ಬಳಿ ಬಂದು ನೀನು ತುಂಬಾ ಚೆನ್ನಾಗಿ ಕಾಣುತ್ತೀಯಾ ಎಂದು ಹೇಳಿ ಮುಖವನ್ನು ತನ್ನ ಕೈಯಿಂದ ಸವರಿ ಕೈ ಹಿಡಿದುಕೊಂಡು ಅಸಭ್ಯ ಹಾಗೂ ಅಸಹ್ಯ ದೃಷ್ಟಿಯಿಂದ ನೋಡಿದ್ದಾರೆ.
ಈ ಹಿಂದೆಯೂ ಕೂಡ ಹಲವು ಬಾರಿ ಇದೇ ರೀತಿ ವರ್ತಿಸುತ್ತಾ ಬಳಿಗೆ ಕರೆದು ಕೈ ಹಿಡಿಯುವುದು, ಕೈ ಮುಟ್ಟುವುದು, ಮೈ ಮುಟ್ಟುವುದು, ಬೆನ್ನು ಸವರುವುದು, ಸೊಂಟ ಸ್ಪರ್ಶಿಸುವುದು, ಎದೆ ಭಾಗ ಮುಟ್ಟುವುದು, ಅಸಭ್ಯ ಕೈ ಸನ್ನೆ ಮಾಡುವುದು, ಲೈಂಗಿಕ ಉzಶದಿಂದ ಕೂಡಿದ ವರ್ತನೆಗಳನ್ನು ಮಾಡುತ್ತಿದ್ದರು. ಅಲ್ಲದೆ ಈ ಈ ವಿಚಾರ ಹೊರಗೆ ಗೊತ್ತಾದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದರು. ದೂರುದಾರೆ ಮಹಿಳೆಯ ತಮ್ಮ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿರುವ ಆಘಾತದಲ್ಲಿದ್ದರಿಂದ ತಡವಾಗಿ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.


ನಿರೀಕ್ಷಣಾ ಜಾಮೀನಿಗೆ ಅರ್ಜಿ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ತನ್ನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಚಂದ್ರಶೇಖರ್ ಪರಾರಿಯಾಗಿದ್ದಾರೆ. ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿರುವ ಅವರು ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಮಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕ್ರಮಕ್ಕೆ ಆಗ್ರಹ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ನ ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷೆ ಶಮಾ ಉಜಿರೆ ಮತ್ತು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಆಗ್ರಹಿಸಿದ್ದಾರೆ.








