







ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಭಾನುವಾರದಂದು ಟ್ರಾಫಿಕ್ ದಟ್ಟಣೆ ವಿಪರೀತಗೊಂಡು ಪ್ರವಾಸಿಗರು ಭಾರೀ ಸಮಸ್ಯೆ ಎದುರಿಸಬೇಕಾಯಿತು. ವಾಹನ ಪಾರ್ಕಿಂಗ್ಗೆಂದು ನಿಗದಿಯಾದ ಸ್ಥಳದಲ್ಲಿ ವಾಹನಗಳು ಹೆಚ್ಚಾಗಿ ೧ ಮೈಲು ರಸ್ತೆಯುದ್ದಕ್ಕೂ ವಾಹನಗಳನ್ನು ಪಾರ್ಕ್ ಮಾಡಬೇಕಾಗಿ ಬಂದಿತ್ತು. ದೇವಸ್ಥಾನದ ಎದುರು ಭಾಗದಲ್ಲಿ ಅಂಗಡಿ ಸಾಲುಗಳನ್ನು ಇತ್ತೀಚಿಗೆ ನಿರ್ಮಾಣ ಮಾಡಿರುವುದು ಕೂಡ ಸಮಸ್ಯೆಯನ್ನು ಹೆಚ್ಚಿಸಿದೆ ಎಂಬ ಚರ್ಚೆ ಈಗ ಹೆಚ್ಚಾಗತೊಡಗಿದೆ.
ಸೌತಡ್ಕ ದೇವಸ್ಥಾನದ ಎದುರು ಭಾಗದ ಬಲ ಬದಿಯಲ್ಲಿ ೨೦೦೯ರಿಂದ ೧೦ಕ್ಕಿಂತಲೂ ಹೆಚ್ಚು ಅಂಗಡಿಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗಲೂ ಅಲ್ಲಿ ವ್ಯಾಪಾರ ಚಟುವಟಿಕೆ ನಡೆಯುತ್ತಿದೆ. ಆದರೆ, ೨೦೨೬ರ ಮಾರ್ಚ್ ತಿಂಗಳಿಂದ ಈ ಅಂಗಡಿ ಸಾಲುಗಳ ಎದುರು ಭಾಗದಲ್ಲೇ ಏಳೆಂಟು ಅಂಗಡಿಗಳು ಮತ್ತೆ ಹೊಸದಾಗಿ ನಿರ್ಮಾಣಗೊಂಡಿವೆ. ಸುಬ್ರಹ್ಮಣ್ಯ ಶಬರಾಯ ಅವರ ನೇತೃತ್ವದ ವ್ಯವಸ್ಥಾಪನಾ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಈ ಅಂಗಡಿಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಾಲಿ ವ್ಯವಸ್ಥಾಪನಾ ಸಮಿತಿಯವರು ಹೇಳುವ ಪ್ರಕಾರ, ಮಾರ್ಚ್ ತಿಂಗಳಲ್ಲಿ ಅಂಗಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟದ್ದು ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನಿನಲ್ಲಿ ಮತ್ತು ಅವರು ದಿನಕ್ಕೆ ರೂ. ೧೦೦ರಂತೆ ತಿಂಗಳಿಗೆ ರೂ. ೩೦೦೦ ಬಾಡಿಗೆ ನೀಡುತ್ತಿದ್ದಾರೆ.
೨೦೦೯ರಲ್ಲಿ ಅಂಗಡಿಗಳನ್ನು ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿರುವವರು ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ಗೆ ಬಾಡಿಗೆ ಸಂದಾಯ ಮಾಡುತ್ತಿದ್ದಾರೆ. ಇದು ದೇವಸ್ಥಾನದ ಖರ್ಚು-ವೆಚ್ಚಗಳಿಗೆ ಬಳಕೆಯಾಗುತ್ತಿಲ್ಲ. ಈ ಜಮೀನು ದೇವಸ್ಥಾನಕ್ಕೆ ಸೇರಬೇಕು ಮತ್ತು ಬಾಡಿಗೆ ಹಣವೂ ದೇವಸ್ಥಾನಕ್ಕೆ ಸೇರಬೇಕು ಎನ್ನುವುದು ಹಾಲಿ ವ್ಯವಸ್ಥಾಪನಾ ಸಮಿತಿಯ ಪ್ರತಿಪಾದನೆ. ಟ್ರಸ್ಟ್ ರಚನೆಗೆ ಸಂಬಂಧಿಸಿದಂತೆ ಹಾಲಿ ಮತ್ತು ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರ ಮಧ್ಯೆ ಮೊದಲಿನಿಂದಲೂ ಸಂಘರ್ಷಗಳಿದ್ದು, ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳಿಲ್ಲ. ಆದರೆ, ಸದ್ಯಕ್ಕೆ ವಾಹನ ದಟ್ಟಣೆ ಕಡಿಮೆ ಮಾಡಲು ಹಾಗೂ ಯಾತ್ರಾರ್ಥಿಗಳ ಓಡಾಟಕ್ಕೆ ಅನುಕೂಲಕರ ಪರಿಸರ ನಿರ್ಮಾಣವಾಗಬೇಕು. ಇದಕ್ಕೆ ಪರಿಹಾರ ಬೇಕು ಎಂದು ದೇವಸ್ಥಾನಕ್ಕೆ ಬರುವ ಸ್ಥಳೀಯ ಭಕ್ತರೊಬ್ಬರು ಅಭಿಪ್ರಾಯಪಡುತ್ತಾರೆ.


ಯಾತ್ರಾರ್ಥಿಗಳು ಹೆಚ್ಚಿದ್ದ ಸಂದರ್ಭದಲ್ಲಿ ಜನ, ವಾಹನ ದಟ್ಟಣೆ ಹೆಚ್ಚಾಗಿ ತೊಂದರೆಯಾಗುತ್ತಿರುವುದು ಸುಳ್ಳಲ್ಲ. ನಮ್ಮ ವ್ಯವಸ್ಥಾಪನಾ ಸಮಿತಿ ಅನುಮತಿ ನೀಡಿ ಅಂಗಡಿ ನಿರ್ಮಾಣ ಮಾಡಿದವರು ದೇವಸ್ಥಾನಕ್ಕೆ ಬಾಡಿಗೆ ನೀಡುತ್ತಿದ್ದಾರೆ. ಅವಕಾಶ ನೀಡುವುದಿದ್ದರೆ ಎಲ್ಲರಿಗೂ ನೀಡಬೇಕು. ಇಲ್ಲವಾದರೆ ಎಲ್ಲಾ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದೇ ಸೂಕ್ತ. ನಿರ್ದಿಷ್ಟ ಅಂಗಡಿಗಳನ್ನು ಗುರಿ ಮಾಡುವುದಕ್ಕೆ ನಾವು ಒಪ್ಪುವುದಿಲ್ಲ. ೨೦೨೪ರಲ್ಲಿ ಮೊದಲಿನಿಂದಿದ್ದ ಅಂಗಡಿಗಳ ಜಮೀನನ್ನು ದೇವಸ್ಥಾನಕ್ಕೆ ವರ್ಗಾಯಿಸಬೇಕು ಎಂದು ನಾವು ಪ್ರತಿಭಟನೆಯನ್ನೂ ಮಾಡಿದ್ದೆವು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಹೇಳುತ್ತಾರೆ. ಹಳೆ ಅಂಗಡಿಗಳು ಅಲ್ಲಿಂದ ತೆರವುಗೊಳ್ಳಬೇಕು ಎಂದು ಈ ಹಿಂದೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರು ಅಂಗಡಿ ಮಾಲೀಕರಿಗೆ ನೊಟೀಸ್ ಜಾರಿ ಮಾಡಿದ್ದರು. ಈ ನೊಟೀಸ್ನ್ನು ಪ್ರಶ್ನಿಸಿ ಅಂಗಡಿ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರತ್ಯೇಕ ಜಾಗ ಕಲ್ಪಿಸುತ್ತೇವೆ: ದೇವಸ್ಥಾನಕ್ಕೆ ಯಾತ್ರಾರ್ಥಿಗಳು ಬರುವುದು ಹೆಚ್ಚಾಗಿ, ಸಂಚಾರ ದಟ್ಟಣೆಯೂ ಹೆಚ್ಚುತ್ತಿರುವುದರಿಂದ ಈ ಅಂಗಡಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು. ಈ ಅಂಗಡಿಗಳು ಇರುವ ಜಮೀನೆಲ್ಲವೂ ದೇವಸ್ಥಾನಕ್ಕೆ ಸೇರಿದ್ದು, ದೇವರ ದುಡ್ಡಿನಿಂದ ತೆಗೆದ ಜಾಗವಾಗಿದೆ. ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಹಾಗೂ ಅಂಗಡಿಯವರಿಗೆ ಅಂಗಡಿ ಹಾಕಿಕೊಳ್ಳಲು ನಾವು ಪ್ರತ್ಯೇಕ ಜಾಗ ಮಾಡಿಕೊಡುತ್ತೇವೆ. ಈಗಾಗಲೇ ೫ ಎಕರೆ ಭೂಮಿ ಖರೀದಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. – ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ, ಸೌತಡ್ಕ ಗಣಪತಿ ದೇವಸ್ಥಾನ
ಇದು ಕಾನೂನು ಬಾಹಿರ: ಇಲ್ಲಿ ಹೊಸದಾಗಿ ಇರುವುದು ಅನಧಿಕೃತ ಅಂಗಡಿಗಳು. ಯಾತ್ರಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೂ, ದೇವಸ್ಥಾನದ ಜಮೀನಿನಲ್ಲೇ ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಇಲಾಖೆಯವರು ಕಾನೂನು ಬಾಹಿರವಾಗಿ ನಿರ್ಣಯಿಸಿ ಅವಕಾಶ ನೀಡಿದ್ದಾರೆ. ಕಾನೂನು ಬದ್ಧವಾಗಿ ದಿನಕ್ಕೆ ರೂ.೫೦೦ರೂ ಸ್ಥಳ ಬಾಡಿಗೆ ಪಡೆಯಬಹುದಾದ ಅವಕಾಶಗಳಿದ್ದರೂ, ತಮ್ಮ ಬೆಂಬಲಿಗರಿಗೆ ರೂ. ೧೦೦ ನಿಗದಿ ಮಾಡಿ ನೀಡಿರುವುದರ ಉzಶ ಮುಂದಿನ ದಿನದಲ್ಲಿ ಬೆಳಕಿಗೆ ಬರಲಿದೆ. ಪಾರದರ್ಶಕತೆ ಎನ್ನುವುದು ಕೇವಲ ಗಂಟೆ ಹರಾಜಿಗೆ ಸೀಮಿತವಾಗುವುದು ಬೇಡ
- ಪ್ರಶಾಂತ್ ಪೂವಾಜೆ, ಹಿಂದಿನ ವ್ಯವಸ್ಥಾಪನಾ ಸಮಿತಿಯ ಸದಸ್ಯ








