






ಬೆಳ್ತಂಗಡಿ: ಅನ್ಯಾಯ , ದೌರ್ಜನ್ಯ, ಮೂಢನಂಬಿಕೆ ವಿರುದ್ಧ ವೈಚಾರಿಕ ಚಳವಳಿ ಅಗತ್ಯವಿದ್ದು , ಮಾನವ ಬಂಧುತ್ವ ವೇದಿಕೆ ಮೂಲಕ ವೈಚಾರಿಕ , ವೈಜ್ಞಾನಿಕ ಚಳವಳಿಯನ್ನು ಕಟ್ಟುವ ಅಗತ್ಯವಿದೆ ಎಂದು ಹಿರಿಯ ಸಾಮಾಜಿಕ ಚಿಂತಕ , ಪತ್ರಕರ್ತ ಶಿಭಿ ಧರ್ಮಸ್ಥಳ ಹೇಳಿದರು.
ಅವರು ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲನ ಸಮಿತಿ ವತಿಯಿಂದ ನಡೆದ ಗ್ರಾಮ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ , ದಲಿತ , ಕಾರ್ಮಿಕ ಚಳವಳಿಗಳು ಶತಮಾನಗಳಿಂದ ಗಟ್ಟಿಯಾಗಿದೆ. ಇದರ ಜೊತೆಗೆ ವೈಚಾರಿಕ , ವೈಜ್ಞಾನಿಕ ಚಳವಳಿ ಕೂಡ ಅಗತ್ಯವಿದೆ. ಮೂಢನಂಬಿಕೆ ವಿರುದ್ಧ ಜನರನ್ನು ಜಾಗೃತಿಗೊಳಿಸಲು ವೈಚಾರಿಕ ಚಳವಳಿ ಅಗತ್ಯವಿದೆ ಎಂದರು. ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರನ್ನು ವೈಚಾರಿಕವಾಗಿ ಗಟ್ಟಿಗೊಳಿಸಲು ಅದ್ಯಯನ ಶಿಬಿರಗಳನ್ನು ನಡೆಸಬೇಕು ಎಂದರು.


ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಕೆ.ಎಸ್ ಸತೀಶ್ ಕುಮಾರ್ ಮಾತನಾಡುತ್ತಾ ದೇಶವು ಇಂದು ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ಅಡಿಪಾಯ ಕುಸಿಯುತ್ತಿದೆ. ಮಾದ್ಯಮ ರಂಗ ಕೂಡ ಉಳ್ಳವರು ಖರೀದಿಸುತ್ತಿದ್ದಾರೆ. ಜನರು ಇದರ ವಿರುದ್ಧ ಸಂಘಟಿತ ಹೋರಾಟ ನಡೆಸದಂತೆ ಧರ್ಮ , ದೇವರ ಹೆಸರಿನಲ್ಲಿ ವಿಭಜಿಸಲಾಗುತ್ತಿದೆ. ಒಟ್ಟಿನಲ್ಲಿ ಬಂಧುತ್ವವನ್ನು ಕೆಡವುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದ ಅವರು ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಪ್ರಜಾಪ್ರಭುತ್ವ ಮತ್ತು ಬಂಧುತ್ವವನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಿಂದಲೇ ಜನಜಾಗೃತಿಗಾಗಿ ಮಾನವ ಬಂಧುತ್ವ ವೇದಿಕೆಯನ್ನು ಬೆಳೆಸುವ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಗಳಲ್ಲಿ ಮಾನವ ಬಂಧುತ್ವ ವೇದಿಕೆಯ ಘಟಕಗಳನ್ನು ಸ್ಥಾಪಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿಸುತ್ತೇವೆ. ಧರ್ಮವನ್ನು ಮೀರಿ ಮನುಷ್ಯನನ್ನು ಪ್ರೀತಿಸುವ ಸಮಾಜದ ನಿರ್ಮಾಣಕ್ಕಾಗಿ ಕಂಕಣಬದ್ದರಾಗಿ ದುಡಿಯೋಣ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಬರಮಣ್ಣ , ದಲಿತ ನಾಯಕ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ ಪ್ರಸಾದ್ , ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ , ಮಾನವ ಬಂಧುತ್ವ ವೇದಿಕೆ ದ.ಕ ಜಿಲ್ಲಾ ಸಂಚಾಲಕ ಜಯರಾಂ ಪೂಜಾರಿ , ಪಡ್ಡಂದಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ , ಬಳೆಂಜ ಯುವ ಉದ್ಯಮಿ ಪ್ರದೀಪ್ ಕೋಟ್ಯಾನ್ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು , ಮಾನವ ಬಂಧುತ್ವ ವೇದಿಕೆಯ ಗ್ರಾಮ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ಶೇಖರ್ ಎಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.









