






ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸದಿಂದ ವಂಚಿತಳಾಗಿ ಶಾಲೆಯಿಂದ ಹೊರಗುಳಿದಿದ್ದ ಪರಿಶಿಷ್ಟ ಜಾತಿಯ ಬಾಲಕಿಯೊಬ್ಬಳನ್ನು ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರ ವಿಶೇಷ ಕಾಳಜಿಯಿಂದಾಗಿ ಧರ್ಮಸ್ಥಳದ ವಸತಿ ಶಾಲೆಗೆ ದಾಖಲಿಸುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ಹಾದಿ ಸುಗಮಗೊಳಿಸಲಾಗಿದೆ.
ಜೂನ್ 16 ರಂದು ಕಳಿಯ ಗ್ರಾಮದ ಕೆ. ಬಿ. ರೋಡ್ ಪರಿಶಿಷ್ಟ ಜಾತಿ ಕಾಲೋನಿಯ ಅತೀ ಬಡ ಕುಟುಂಬದ ಸುಮಿತ್ರಾ ಎಂಬುವವರ ಮಗಳು ಕೃತಿಕಾಳು ಶಾಲೆಯಿಂದ ಹೊರಗುಳಿದಿರುವ ವಿಷಯ ಬೆಳಕಿಗೆ ಬಂದಿತ್ತು. ತಾಯಿ ಸುಮಿತ್ರಾ ಅವರು ಅನಾರೋಗ್ಯದ ಕಾರಣದಿಂದ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದರಿಂದಾಗಿ ಬಾಲಕಿ ಶಿಕ್ಷಣದಿಂದ ವಂಚಿತಳಾಗಿದ್ದಳು.


ವಿಷಯ ಮನಗಂಡ ಕಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಕುಂಞ ಕೆ., ಸಿಬ್ಬಂದಿ ರವಿ ಎಚ್., ಕಳಿಯ ಮಾಜಿ ಪಂಚಾಯತ್ ಸದಸ್ಯೆ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಮರೀಟಾ ಪಿಂಟೋ ಬಾಲಕಿಯ ಮನೆಗೆ ಭೇಟಿ ನೀಡಿದರು. ಬಳಿಕ ಆಸ್ಪತ್ರೆಯಲ್ಲಿದ್ದ ತಾಯಿಯನ್ನು ಸಂಪರ್ಕಿಸಿ ಆಕೆಗೆ ಧೈರ್ಯ ತುಂಬಿ, ಮಗಳ ಮುಂದಿನ ಶಿಕ್ಷಣ ಮತ್ತು ಪಾಲನೆಯ ಕುರಿತು ಮಾಹಿತಿ ನೀಡಿ ಒಪ್ಪಿಗೆ ಪಡೆದರು.
ಬಾಲಕಿಯ ವಿದ್ಯಾಭ್ಯಾಸಕ್ಕೆ ಬೆಳ್ತಂಗಡಿಯ ‘ಮದರ್ ತೆರೆಸಾ ಫ್ರೆಂಡ್ಸ್ ಗ್ರೂಪ್’ ಹಾಗೂ ಗೇರುಕಟ್ಟೆಯ ಉದ್ಯಮಿ ರವೂಫ್ ಬಿ. ಕೆ. ಅಗತ್ಯ ಸಹಕಾರ ನೀಡಿದರು. ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಧರ್ಮಸ್ಥಳದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗೆ ಬಾಲಕಿಯನ್ನು ಕರೆತರಲಾಯಿತು.
ವಸತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ವಿದ್ಯಾರ್ಥಿನಿ ಕೃತಿಕಾಳನ್ನು ಪ್ರೀತಿಯಿಂದ ಶಾಲೆಗೆ ದಾಖಲಿಸಿಕೊಂಡರು. ಅಧಿಕಾರಿಗಳು ಮತ್ತು ದಾನಿಗಳ ಈ ಸಕಾಲಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.









