








ಬೆಳ್ತಂಗಡಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತನ್ನನ್ನು ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಉಜಿರೆ ನಿವಾಸಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ತನ್ನನ್ನು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರು ಮೂರನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾನ್ವಿ ತಾಲೂಕಿಗೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಾದ ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಏ.೩೦ರಂದು ತನ್ನ ಆದೇಶ ಪ್ರಕಟಿಸಿದ ನ್ಯಾಯಮೂರ್ತಿಯರು ಸರಕಾರದ ಪರ ವಾದವನ್ನು ಪುರಸ್ಕರಿಸಿದ್ದು ಮಹೇಶ್ ಶೆಟ್ಟಿ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸಹಾಯಕ ಆಯುಕ್ತರು ಗಡೀಪಾರು ಮಾಡಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸರಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿರುವ ನ್ಯಾಯಪೀಠ ೨ ವಾರ ಅರ್ಜಿದಾರ ಮಹೇಶ್ ಶೆಟ್ಟಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಆದೇಶಿಸಿದೆ.








