ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಜಾರಿಗೆ ಹೈಕೋರ್ಟ್ ತಡೆ

0

ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮೂರನೇ ಬಾರಿ ಗಡೀಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೊರಡಿಸಿರುವ ಆದೇಶವನ್ನು ಏ.೧೭ರವರೆಗೆ ಜಾರಿ ಮಾಡದಂತೆ ಸರಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.

ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇರೆಗೆ ತನ್ನನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾನ್ವಿ ತಾಲೂಕಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಮಾರ್ಚ್ ೧೩ರಂದು ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾಡಿರುವ ಆದೇಶವನ್ನು ರದ್ದು ಪಡಿಸಬೇಕು ಎಂದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿ ಎ.೧೦ರಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರ ತಿಮರೋಡಿ ಪರ ವಕೀಲರು ಅರ್ಜಿ ವಿಚಾರಣೆಯನ್ನು ಏ.೨೪ ಅಥವಾ ೨೭ಕ್ಕೆ ಮುಂದೂಡಬೇಕು. ಅಲ್ಲಿಯವರೆಗೆ ಗಡೀಪಾರು ಆದೇಶ ಜಾರಿಗೆ ತಾತ್ಕಾಲಿಕ ತಡೆ ಹೊರಡಿಸಿರುವ ನೀಡಿ ಮಧ್ಯಂತರ ಆದೇಶವನ್ನು ಮುಂದುವರಿಸಬೇಕು ಎಂದು ಕೋರಿದರು.

ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ ಇದು ಮೂರನೇ ಸುತ್ತಿನ ವ್ಯಾಜ್ಯವಾಗಿದೆ. ಅರ್ಜಿದಾರರನ್ನು ಗಡೀಪಾರು ಮಾಡಿ ಮೂರನೇ ಬಾರಿಗೆ ಆದೇಶ ಹೊರಡಿಸಲಾಗಿದೆ. ಪ್ರಕರಣ ಸಂಬಂಧ ಮೇಲ್ಮನವಿ ಪ್ರಾಧಿಕಾರದಲ್ಲಿ ಪರಿಹಾರ ಅರ್ಜಿದಾರರಿಗೆ ಕಂಡುಕೊಳ್ಳಲು ಅವಕಾಶವಿದೆ. ಅರ್ಜಿದಾರರು ರೌಡಿಶೀಟರ್ ಆಗಿದ್ದು ಅವರ ವಿರುದ್ಧ ೨೬ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗಡೀಪಾರು ವಿಚಾರವಾಗಿ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಆದೇಶ ಮಾಡಿದೆ ಎಂದು ತಿಳಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಏ.೧೭ರವರೆಗೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡದಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ.

LEAVE A REPLY

Please enter your comment!
Please enter your name here