







ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರೂ ಸೌಜನ್ಯ ಪರ ಹೋರಾಟಗಾರರೂ ಆಗಿರುವ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ(೫೭ವ) ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮೂರನೇ ಬಾರಿ ಹೊರಡಿಸಿದ್ದ ಆದೇಶಕ್ಕೂ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆಯನ್ನು ಎಪ್ರಿಲ್ ೧೦ಕ್ಕೆ ಮುಂದೂಡಿದ್ದಾರೆ.


ತನ್ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿರುವ ಸಹಾಯಕ ಆಯುಕ್ತರ ಆದೇಶಕ್ಕೆ ತಡೆ ನೀಡಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಮಾ.೨೪ರಂದು ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗ್ದಂ ಅವರ ಪೀಠದಲ್ಲಿ ವಿಚಾರಣೆಗೆ ಬಂದಿದ್ದ ವೇಳೆ ಸರಕಾರದ ಪರ ಹಾಜರಾಗಬೇಕಿದ್ದ ವಿಶೇಷ ಸರಕಾರಿ ಅಭಿಯೋಜಕರು ಗೈರಾಗಿದ್ದರು. ಹಾಗಾಗಿ ವಿಚಾರಣೆ ಮುಂದೂಡಬೇಕು ಎಂದು ಅವರ ಕಿರಿಯ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು.
ಆದರೆ ಇದನ್ನು ಒಪ್ಪದ ನ್ಯಾಯಮೂರ್ತಿಯವರು ಗಡಿಪಾರು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡುವುದಾಗಿ ತಿಳಿಸಿ ಮುಂದಿನ ವಿಚಾರಣೆಯನ್ನು ಮಾ.೨೬ಕ್ಕೆ ಮುಂದೂಡಿದ್ದರು.
ಮಹೇಶ್ ಶೆಟ್ಟಿ ಪರ ವಕೀಲರಾದ ಎಂ.ಆರ್. ಬಾಲಕೃಷ್ಣ ಸುಳ್ಯ ಮತ್ತು ಮೋಹಿತ್ ಕುಮಾರ್ ಪುತ್ತೂರು ಅವರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ಮಾ.೨೬ರಂದು ಅರ್ಜಿಯ ಮರು ವಿಚಾರಣೆ ನಡೆದಾಗ ಮುಂದಿನ ವಿಚಾರಣೆಯನ್ನು ಎ.೧೦ಕ್ಕೆ ನಡೆಸುವುದಾಗಿ ತಿಳಿಸಿದ ನ್ಯಾಯಮೂರ್ತಿಗಳು ಆವರೆಗೆ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಸಹಾಯಕ ಆಯುಕ್ತರು ಗಡಿಪಾರು ಮಾಡಿ ಹೊರಡಿಸಿರುವ ಆದೇಶಕ್ಕೆ ನೀಡಲಾಗಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.








