ಎಡಮಂಗಲದಲ್ಲಿ ನಡೆದಿದ್ದ ಕಳವು ಪ್ರಕರಣನೆರಿಯದ ಶರತ್‌ಗೆ ಶಿಕ್ಷೆ ವಿಧಿಸಿದ ಸುಳ್ಯ ಕೋರ್ಟ್

0

ಬೆಳ್ತಂಗಡಿ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿಯ ಜಗದೀಶ ಎಂಬವರ ಮನೆಯಲ್ಲಿ ೨೦೨೨ರ ಮಾರ್ಚ್ ೨೪ರಂದು ರಾತ್ರಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ನೆರಿಯ ನಿವಾಸಿ ಶರತ್ ಎಸ್ (೨೪) ಎಂಬಾತನಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಳವು ಕೃತ್ಯ ನಡೆದ ನಂತರ ಬಂಧನಕ್ಕೊಳಗಾಗಿ ಜಾಮೀನು ಮೂಲಕ ಬಿಡುಗಡೆಗೊಂಡ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಶರತ್‌ನನ್ನು ಬೆಳ್ಳಾರೆ ಠಾಣಾ ಎಸ್.ಐ. ಹಾಗೂ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರಾಗಿದ್ದು ಸುಳ್ಯ ನ್ಯಾಯಾಲಯದ ಪ್ರಭಾರ ಕರ್ತವ್ಯದಲ್ಲಿರುವ ಶಿವಣ್ಣ ಹೆಚ್.ಆರ್. ಅವರು ಆರೋಪಿ ಶರತ್‌ಗೆ ಐಪಿಸಿ ೪೫೭ರ ಅಪರಾಧಕ್ಕಾಗಿ ೬ ತಿಂಗಳ ಸಾಧಾರಣ ಸಜೆ ಹಾಗೂ ೫೦೦ ರೂ ದಂಡ, ಐಪಿಸಿ ೩೮೦ರ ಅಪರಾಧಕ್ಕಾಗಿ ೧೦ ತಿಂಗಳ ಸಾಧಾರಣ ಸಜೆ ಹಾಗೂ ೫೦೦ ರೂ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದರೆ ೧೦ ದಿನಗಳ ಸಜೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸ್‌ಐ ಸಂತೋಷ್ ಅವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ. ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು. ಶರತ್ ಎಸ್. ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ ೨೬೯ರ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದ್ದು ನ್ಯಾಯಾಧೀಶರು ರೂ ೧೦೦೦ ದಂಡ ಅಥವಾ ೧೦ ದಿನಗಳ ಕಾರಾಗೃಹ ವಾಸ ವಿಧಿಸಿ ಆದೇಶಿಸಿದ್ದಾರೆ.

ಘಟನೆಯ ವಿವರ: ೨೦೨೨ರ ಮಾ.೨೩ರ ರಾತ್ರಿಯಿಂದ ಮಾ.೨೪ರ ಮುಂಜಾನೆಯ ಅವಧಿ ಒಳಗೆ ಯಾರೋ ಕಳ್ಳರು ಕಡಬ ತಾಲೂಕಿನ ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿರುವ ಜಗದೀಶ ಎಂಬವರ ಮನೆಯ ಮುಂಬಾಗಿಲಿನ ಬೀಗವನ್ನು ಕಬ್ಬಿಣದ ಸರಳಿನಿಂದ ಮುರಿದು ಮನೆಯ ಒಳಗೆ ಪ್ರವೇಶಿಸಿ ಅಡುಗೆ ಕೋಣೆಯ ಪಕ್ಕದ ಬೆಡ್ ರೂಂನಲ್ಲಿಟ್ಟಿದ ಕಬ್ಬಿಣದ ಕಪಾಟಿನ ಬೀಗವನ್ನು ಕೀಯಿಂದ ತೆರೆದು ಕಪಾಟಿನ ಒಳಗೆ ಇದ್ದ ೨೦ ಗ್ರಾಂ ತೂಕದ ಲಕ್ಷ್ಮೀ ಪೆಂಡೆಂಟ್, ಕೆಂಪು ಹವಳ ಇರುವ ಚಿನ್ನದ ಕನಕಾಂಬರ ಮಾಲೆ, ೧೦ ಗ್ರಾಂ ತೂಕದ ಚಿನ್ನದ ಚೈನು, ೨ ಗ್ರಾಂ ತೂಕದ ಕೆಂಪು ಹವಳ ಇರುವ ಚಿನ್ನದ ಬೆಂಡೋಲೆ, ೨ ಗ್ರಾಂ ತೂಕದ ಬಿಳಿ ಕಲ್ಲು ಇರುವ ಚಿನ್ನದ ಬೆಂಡೋಲೆ, ೧ ಗ್ರಾಂ ತೂಕದ ಕಿವಿಯ ಚಿನ್ನದ ಸಣ್ಣ ಟಿಕ್ಕಿ, ೨ ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ೨೦ ಸಾವಿರ ರೂ ನಗದು ಹಣ ಕಳವಾದ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೨೨/೨೦೨೨ರಂತೆ ಐಪಿಸಿ ೪೫೭ ಮತ್ತು ೩೮೦ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆ ಬಳಿಕ ಶರತ್‌ನನ್ನು ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here