೭೦ ವರ್ಷಗಳ ಇತಿಹಾಸ ಹೊಂದಿರುವ ಬೆಳ್ತಂಗಡಿ ಹಳೆ ಸೇತುವೆಯ ಯುಗಾಂತ್ಯ-ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಹಿನ್ನಲೆ: ಹೊಸ ಸೇತುವೆ ನಿರ್ಮಾಣ

0

ಬೆಳ್ತಂಗಡಿ: ಸುಮಾರು ೭೦ ವರ್ಷಗಳ ಇತಿಹಾಸ ಹೊಂದಿರುವ ಬೆಳ್ತಂಗಡಿಯ ಹಳೆ ಸೇತುವೆ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಇತಿಹಾಸದ ಪುಟ ಸೇರಲಿದೆ. ಮುಖ್ಯ ಹೆದ್ದಾರಿ ಬದಿ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಮತ್ತೊಂದು ಸೇತುವೆ ನಿರ್ಮಾಣದ ದೃಷ್ಟಿಯಿಂದ ಶೀಘ್ರದಲ್ಲಿ ಹಳೆ ಸೇತುವ ತೆರವಾಗಲಿದೆ. ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ದೃಷ್ಟಿಯಿಂದ ಸೋಮಾವತಿ ನದಿಗೆ ಅಡ್ಡಲಾಗಿ ೧೯೫೭ರಲ್ಲಿ ಈ ಸೇತುವೆ ಕಟ್ಟಲಾಗಿತ್ತು. ಬೆಳ್ತಂಗಡಿಗೆ ಬೇರೆ ಬೇರೆ ಭಾಗಗಳನ್ನು ಬೆಸೆಯುವ ಕೊಂಡಿಯಾಗಿದ್ದ ಸೇತುವೆ ಕೆಲವೇ ದಿನಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಬೆಳ್ತಂಗಡಿಯ ಪ್ರಮುಖ ಲ್ಯಾಂಡ್ ಮಾರ್ಕ್ ಎನಿಸಿಕೊಂಡಿದ್ದ ಈ ಹಳೆಯ ಸೇತುವೆ ಇನ್ನು ನೆನಪಿನ ಪುಟಗಳನ್ನು ಸೇರಲಿದೆ.

೭೦ ವರ್ಷಗಳ ಹಿಂದೆ ಹಳೆಯ ಸೇತುವೆಯ ನಾಲ್ಕು ಮೂಲೆಗಳಲ್ಲಿ ಕಂಬಗಳನ್ನು ನಿರ್ಮಿಸಿ ಅದರ ಮೇಲೆ ಅಶೋಕ ಸ್ತಂಭವನ್ನು ಅಳವಡಿಸಲಾಗಿತ್ತು. ಕಂಬದಲ್ಲಿರುವ ಅಮೃತ ಶಿಲೆಯ ಮಾಹಿತಿ ಪ್ರಕಾರ ೧೯೫೭ರ ಜುಲೈ ೮ರಂದು ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದ ಎಚ್.ಕೆ.ವೀರಣ್ಣ ಗೌಡ ಸೇತುವೆ ಉದ್ಘಾಟಿಸಿದ್ದರು. ೭೦ ವರ್ಷವಾದರೂ ಕೆಲವು ಕಡೆ ಶೈಥಿಲ್ಯ ಬಿಟ್ಟರೆ ಸೇತುವೆ ಗಟ್ಟಿಯಾಗಿಯೇ ಇದೆ. ಆದರೆ ಹೆದ್ದಾರಿ ಕಾಮಗಾರಿಯ ದೃಷ್ಟಿಯಿಂದ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳೆಯ ಸೇತುವೆಯನ್ನು ತೆರವು ಮಾಡುವುದು ಅನಿವಾರ್ಯವಾಗಿದೆ. ಈ ಭಾಗದಲ್ಲಿ ಮುಖ್ಯ ಹೆದ್ದಾರಿಯ ಜತೆಗೆ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣವಾಗುತ್ತಿದ್ದು ಈಗಾಗಲೇ ಮುಖ್ಯ ಸೇತುವೆ ಹಾಗೂ ಒಂದು ಬದಿಯ ಸರ್ವೀಸ್ ರಸ್ತೆಯ ಸೇತುವೆಯ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಮತ್ತೊಂದು ಸೇತುವೆ ನಿರ್ಮಿಸಬೇಕಾದರೆ ಹಳೆಯ ಸೇತುವೆ ತೆರವು ಅನಿವಾರ್ಯವಾಗಿದೆ.

ಬೆಳ್ತಂಗಡಿ ನಗರ ಹಾಗೂ ಲಾಯಿಲ ಎರಡೂ ಕಡೆಯಲ್ಲೂ ಹಳೆಯ ಸೇತುವೆ ಸಂಪರ್ಕ ರಸ್ತೆಗಳು ಇಳಿಜಾರಿನಿಂದ ಕೂಡಿದ್ದು, ಅಂದಿನ ವ್ಯವಸ್ಥೆಗೆ ಅದು ಸೂಕ್ತವಾಗಿತ್ತು. ಆದರೆ ಈಗಿನ ಹೆದ್ದಾರಿಯು ಇಳಿಜಾರನ್ನು ತಪ್ಪಿಸಿ ನೇರವಾಗಿ ಸಾಗಬೇಕಿರುವುದರಿಂದ ಪ್ರಸ್ತುತ ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆಗಳು ಸಾಕಷ್ಟು ಎತ್ತರದಲ್ಲಿ ನಿರ್ಮಾಣಗೊಂಡಿದೆ. ಮತ್ತೊಂದು ಸೇತುವೆ ಕೂಡ ಅಷ್ಟೇ ಎತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಪ್ರಸ್ತುತ ಬೆಳ್ತಂಗಡಿ ಭಾಗದಿಂದ ಲಾಯಿಲ ಕಡೆಗೆ ತೆರಳುವ ವಾಹನಗಳು ಹಳೆ ಸೇತುವೆಯಲ್ಲಿ ಸಾಗುತ್ತಿದ್ದು ಬೆಳ್ತಂಗಡಿ ನಗರಕ್ಕೆ ಆಗಮಿಸುವ ವಾಹನಗಳು ಹೊಸ ಸೇತುವೆಯ ಮೂಲಕ ಸಂಚರಿಸುತ್ತಿದೆ. ಮುಂದೆ ಎರಡೂ ಬದಿಯ ವಾಹನಗಳು ಹೊಸ ಸೇತುವೆಯಲ್ಲೇ ಸಂಚರಿಸಿದ ಬಳಿಕ ಹಳೆ ಸೇತುವೆಯ ತೆರವು ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here