ಶಿಬಾಜೆಯ ದಲಿತ ಯುವಕ ಶ್ರೀಧರ್ ಕೊಲೆ ಪ್ರಕರಣ-ಮರು ತನಿಖೆಗೆ ಎಸ್‌ಐಟಿ ರಚನೆ

0

ಬೆಳ್ತಂಗಡಿ: ನಾಲ್ಕು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದ್ದ ಶ್ರೀಧರ ಎಂಬ ಯುವಕನ ಕೊಲೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ. ೨೦೨೨ರ ಫೆಬ್ರವರಿ ೧೮ರಂದು ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ. ಕುರಿಯನ್ ಎಂಬವರ ಮಾಲಕತ್ವದ ಸಾರಾ ಫಾರ್ಮ್‌ನಲ್ಲಿ ಕಾರ್ಮಿಕರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಸಮೀಪದ ದಿನ್ನಕರೆಯ ದಿ. ಬಾಬು ಎಂಬವರ ಪುತ್ರ ಶ್ರೀಧರ(೩೬) ಎಂಬವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಅಂದು ಆರೋಪ ಕೇಳಿ ಬಂದಿತ್ತು. ಪ್ರಕರಣ ನಿಗೂಢವಾಗುತ್ತಿದ್ದಂತೆಯೇ ಬೆಳ್ತಂಗಡಿ ಮತ್ತು ಸುತ್ತಮುತ್ತಲಿನ ದಲಿತ ಸಂಘಟನೆಯವರು ಹೋರಾಟ ಮಾಡಿ ಸಮರ್ಪಕ ತನಿಖೆಗೆ ಒತ್ತಾಯಿಸಿದ್ದರು.

ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿತ್ತು. ಸಿಐಡಿ ತನಿಖೆಯಲ್ಲಿಯೂ ನ್ಯಾಯ ದೊರಕಿಲ್ಲ. ತನಿಖೆ ತೃಪ್ತಿಕರವಾಗಿಲ್ಲ ಎಂದು ದೂರುದಾರರಾಗಿದ್ದ ಸಾರಾ ಫಾರ್ಮ್‌ನ ಮೇಲ್ವಿಚಾರಕ ಹರೀಶ್ ಮೊಗೇರ ಅವರು ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ಇದೀಗ ನ್ಯಾಯಾಲಯದ ನಿರ್ದೇಶನದಂತೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಎಂ.ಎ.ಸಲೀಂ ಅವರು ಅಧಿಕೃತವಾಗಿ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿದ್ದು ತಂಡಕ್ಕೆ ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಎಂ.ಆರ್. ಹರೀಶ್ ಅವರನ್ನು ಸೇರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ.ಕುರಿಯನ್ ಎಂಬವರ ಮಾಲಿಕತ್ವದ ಸಾರಾ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಸಮೀಪದ ದಿನ್ನಕರೆಯ ದಿ. ಬಾಬು ಎಂಬವರ ಪುತ್ರ ಶ್ರೀಧರ (೩೦)ಎಂಬವರು ೨೦೨೨ರ ಫೆ.೧೮ರಂದು ತೋಟದಲ್ಲಿ ಅರೆಬೆತ್ತಲೆಯಾಗಿ ಸಾವನ್ನಪ್ಪಿದ್ದರು. ಈ ಸಂಬಂಧ ಇದೇ ಫಾರ್ಮ್‌ನಲ್ಲಿ ಮೇಲ್ವಿಚಾರಕರಾಗಿರುವ ಶಿಬಾಜೆ ತೊಂಬತ್ತಾಜೆಯ ಹರೀಶ್ ಮೊಗೇರ(೩೨) ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿ.೧೭ರಂದು ಸಂಜೆ ೫.೩೦ಕ್ಕೆ ತೋಟದ ಆಫೀಸ್ ಎದುರು ಇರುವ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಜೋರಾಗಿ ಬೊಬ್ಬೆ ಕೇಳಿ ಹೊರಗೆ ಬಂದು ನೋಡಿದಾಗ ಶ್ರೀಧರ ಅವರು ಅಂಗಾತ ಬಿದ್ದುಕೊಂಡಿದ್ದು ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಗೌಡ ಹಾಗೂ ಮಹೇಶ್ ಎಂಬವರು ಅವರ ಕಿಬ್ಬೊಟ್ಟೆಗೆ ಮತ್ತು ಎದೆಗೆ ಕೈಯಲ್ಲಿ ಹೊಡೆಯುತ್ತಿದ್ದರು.

ಅಷ್ಟರಲ್ಲಿ ಅದೇ ತೋಟದಲ್ಲಿ ಕೆಲಸಕ್ಕೆ ಇದ್ದ ಟಿ.ಸಿ.ಅಬ್ರಹಾಂ ಮತ್ತು ಪರಮೇಶ್ವರ ಗೌಡರವರು ಅಲ್ಲಿಗೆ ಬರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ನಂತರ ಶ್ರೀಧರ ಅವರನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಆತನನ್ನು ರಾತ್ರಿ ಉಳಿದುಕೊಳ್ಳುವ ವಿಶ್ರಾಂತಿ ಕೊಠಡಿಗೆ ಕಳುಹಿಸಿಕೊಟ್ಟಿzವೆ. ಮರುದಿನ ಡಿ.೧೮ರಂದು ಬೆಳಿಗ್ಗೆ ೬.೩೦ಕ್ಕೆ ವಿಶ್ರಾಂತಿಯಲ್ಲಿದ್ದ ಶ್ರೀಧರರನ್ನು ಕೂಗಿ ಕರೆದಾಗ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಒಳಹೋಗಿ ನೋಡಿದಾಗ ಶ್ರೀಧರರವರು ವಿಶ್ರಾಂತಿ ಕೊಠಡಿಯಲ್ಲಿ ಇರಲಿಲ್ಲ. ಸುತ್ತಮುತ್ತಲೂ ಹುಡುಕಾಡಿದಾಗ ಕೊಠಡಿಯಿಂದ ಸುಮಾರು ೩೦೦ ಮೀಟರ್ ದೂರದ ಅಡಿಕೆ ತೊಟದಲ್ಲಿ ಬೆತ್ತಲೆಯಾಗಿ ಅಂಗಾತನೆ ಬಿದ್ದು ಕೊಂಡಿರುವುದು ಕಂಡು ಬಂದಿತ್ತು.

ನಂತರ ತೋಟದ ಮಾಲೀಕರಿಗೆ ದೂರವಾಣಿ ಮೂಲಕ ತಿಳಿಸಿ ತೋಟವನ್ನು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿರುವುದು ಪತ್ತೆಯಾಗಿದೆ. ಆರೋಪಿಗಳು ವಿಶ್ರಾಂತಿ ಕೊಠಡಿಯ ಬಳಿ ಬಂದು ಶ್ರೀಧರ ಅವರನ್ನು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಆತನ ಬಳಿ ಇದ್ದ ೯೫೦೦ ರೂ ದೋಚಿಕೊಂಡು ಹೋಗಿದ್ದಾರೆ ಎಂದು ಹರೀಶ್ ಮೊಗೇರ ದೂರಿನಲ್ಲಿ ಆಪಾದಿಸಿದ್ದರು. ಬಳಿಕ ಧರ್ಮಸ್ಥಳ ಠಾಣೆಯಲ್ಲಿ ಅಪರಾಧ ಕ್ರಮಾಂಕ ೯೧/೨೦೨೨ರಂತೆ ಕೊಲೆ ಪ್ರಕರಣ ದಾಖಲಾಗಿತ್ತು.

ದಲಿತ ಸಂಘಟನೆಗಳಿಂದ ಧರ್ಮಸ್ಥಳ ಠಾಣೆ ಚಲೋ ನಡೆದಿತ್ತು: ಶ್ರೀಧರ ಕೊಲೆ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ದ.ಕ. ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ೨೦೨೨ರ ಜ.೨೩ರಂದು ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಪ್ರತಿಭಟನೆ ನಡೆಸಲಾಗಿತ್ತು. ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ತನಕ ಮೆರವಣಿಗೆ ಸಹ ನಡೆಸಲಾಗಿತ್ತು.

೫ ತಿಂಗಳು ಕಳೆದರೂ ರಚನೆಯಾಗದ ಎಸ್‌ಐಟಿ: ಹೈಕೋರ್ಟ್ ಅಸಮಾಧಾನ: ಶ್ರೀಧರ್ ಅವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿ ಐದು ತಿಂಗಳು ಕಳೆದರೂ ವಿಶೇಷ ತನಿಖಾ ತಂಡ ರಚಿಸಲಾಗಿಲ್ಲ ಎಂದು ಹರೀಶ್ ಮೊಗೇರ ಅವರು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಫೆ.೨೦ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ವಿವರಣೆ ನೀಡಲು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಫೆ.೨೧ರಂದು ಮಧ್ಯಾಹ್ನ ೨.೩೦ಕ್ಕೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಿತ್ತು. ಈ ನಡುವೆ ಸರ್ಕಾರ ಎಸ್‌ಐಟಿ ರಚನೆ ಮಾಡಿ ಆದೇಶಿಸಿತ್ತು.

ಕೊಲೆ ಅಲ್ಲ ಎಂದು ವರದಿ ನೀಡಿದ್ದ ಡಿವೈಎಸ್‌ಪಿ ಸಿಐಡಿ ತನಿಖೆ ನಡೆಸಿದ್ದರೂ ದೊರಕದ ನ್ಯಾಯ: ಶ್ರೀಧರ್ ಅವರ ಸಾವಿನ ಕುರಿತಂತೆ ಹರೀಶ್ ಮೊಗೇರ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಪ್ರಕರಣದ ತನಿಖೆಯನ್ನು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್‌ಸಿಂಗ್ ಥೋರಟ್ ನಡೆಸಿದ್ದರು. ಮೃತ ಶ್ರೀಧರ ಅವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಯಲ್ಲಿ ಪತ್ತೆಯಾದ ಮದ್ಯದ ಬಾಟಲಿಯಲ್ಲಿ ಕಡು ನೀಲಿ ಬಣ್ಣದ ವಿಷದ ಅಂಶವಿತ್ತು ಮತ್ತು ಅಲ್ಲಿ ವಾಂತಿ ಮಾಡಿದ ಪದಾರ್ಥದ ಅಂಶದಲ್ಲಿ ವಿಷದ ಅಂಶವಿತ್ತು. ಆದ್ದರಿಂದ ಮದ್ಯದೊಂದಿಗೆ ವಿಷ ಕುಡಿದ ಕಾರಣ ಆತನು ಮೇಲಿಂದ ಬಿದ್ದು ಹೊರಳಾಟ ನಡೆಸಿದಾಗ ತಲೆಯ ಭಾಗಕ್ಕೆ ಗಾಯವಾಗಿರುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ನಾಲ್ಕು ಜನ ಆರೋಪಿಗಳು ಶ್ರೀಧರನನ್ನು ಕೊಲೆ ಮಾಡಿ ಹಣ ದೋಚಿದ್ದಾರೆ ಎಂದು ಸಾಬೀತು ಪಡಿಸುವ ಸಾಕ್ಷಾಧಾರ ಇಲ್ಲದ ಕಾರಣ ಸದ್ರಿ ಪ್ರಕರಣ ದಾಖಲಾದ ಸಮಯ ಹಾಕಿದ ಕಲಂ: ೩೦೨, ೩೯೨, ಬಾ.ದಂ.ಸ. ಮತ್ತು ಕಲಂ ೩(೨)(ವಿ).ಎಸ್.ಸಿ/ಎಸ್‌ಟಿ ಕಾಯ್ದೆ ೨೦೧೫ ಕೈ ಬಿಟ್ಟು ಕಲಂ ೩೨೩ ಜೊತೆಗೆ ೩೪ ಐಪಿಸಿ ಮತ್ತು ಕಲಂ ೩(೨) (ವಿಎ), ಎಸ್‌ಸಿ/ಎಸ್‌ಟಿ ಕಾಯ್ದೆ ೨೦೧೫ರಂತೆ ಪ್ರಕರಣದ ತನಿಖೆ ಮುಂದುವರಿಸುತ್ತಿರುವುದಾಗಿ ೨೦೨೩ರ ಜ.೧೯ರಂದು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಬಳಿಕ ಪೊಲೀಸ್ ತನಿಖೆ ತೃಪ್ತಿಕರವಾಗಿಲ್ಲ ಎಂದು ಆರೋಪಿಸಿ ದೂರುದಾರ ಹರೀಶ್ ಮೊಗೇರ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣದ ಮರು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಿ ೪ ತಿಂಗಳೊಳಗಾಗಿ ಮರು ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ೯-೯-೨೦೨೫ರಂದು ಆದೇಶ ನೀಡಿತ್ತು. ಈ ಆದೇಶದಂತೆ ಮರು ತನಿಖೆಗೆ ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂ ರಾಮ್, ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆನ್ ಪೊಲೀಸ್ ಠಾಣೆ ಡಿವೈಎಸ್‌ಪಿ ಎಂ.ಆರ್.ಹರೀಶ್ ಅವರನ್ನೊಳಗೊಂಡ ವಿಶೇಷ ತನಖಾ ತಂಡವನ್ನು ರಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ| ಎಂ.ಎ.ಸಲೀಂ ಅವರು ೨೦-೨-೨೦೨೬ರಂದು ಆದೇಶಿಸಿದ್ದಾರೆ.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ವಿ. ಶರತ್‌ಚಂದ್ರ ಹಾಜರುನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲು ಪ್ರಾಸಿಕ್ಯೂಶನ್‌ಗೆ ಹೈಕೋರ್ಟ್ ನಿರ್ದೇಶನ: ಶಿಬಾಜೆ ಗ್ರಾಮದ ಸಾರಾ ಫಾರ್ಮ್ ಸಿಬಂದಿ ಶ್ರೀಧರ್ ಅವರ ಸಾವಿನ ಪ್ರಕರಣ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿದೆ ಎಂದು ಸರಕಾರ ಹೈಕೋರ್ಟಿಗೆ ತಿಳಿಸಿದೆ. ನ್ಯಾಯಾಲಯ ಆದೇಶ ಹೊರಡಿಸಿ ಐದು ತಿಂಗಳು ಕಳೆದರೂ ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚಿಸದಿರುವುದಕ್ಕೆ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ಶನಿವಾರ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿತ್ತು. ಅದರಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ ಅವರು ಹಾಜರಾಗಿದ್ದರು. ಆಗ ಅವರಿಗೆ ನ್ಯಾಯಪೀಠ ಈ ಕೋರ್ಟ್ ಸರಕಾರದ ಹಿರಿಯ ಅಧಿಕಾರಿಗಳನ್ನು ಸುಖಾಸುಮ್ಮನೆ ಬರಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿತು. ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿ ನ್ಯಾಯಾಲಯದ ಸೂಚನೆಯಂತೆ ಎಸ್‌ಐಟಿ ರಚಿಸಿzವೆ. ಅಧಿಕಾರಿಗಳು ಕೂಡ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ೪ ವಾರಗಳಲ್ಲಿ ಕೋರ್ಟ್‌ಗೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಇದೇ ವೇಳೆ ನಿರ್ದೇಶಿಸಿತು. ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಹಾಜರಿದ್ದರು.

ನಾಲ್ವರು ಆರೋಪಿಗಳ ಬಂಧನವಾಗಿತ್ತು: ಕೊಲೆ ಕೇಸು ದಾಖಲಾದ ಬಳಿಕದ ದಿನಗಳಲ್ಲಿ ದೂರಿನಲ್ಲಿ ತಿಳಿಸಲಾಗಿದ್ದ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದ ಗೌಡ ಕೆ. ಮತ್ತು ಮಹೇಶ್ ಪೂಜಾರಿ ಎಂಬವರನ್ನು ಬಂಧಿಸಲಾಗಿತ್ತು. ಕೆಲವು ತಿಂಗಳ ನಂತರ ಅವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಈ ಪ್ರಕರಣವನ್ನು ಪೊಲೀಸರು ಸರಿಯಾಗಿ ನಡೆಸಿಲ್ಲ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿತ್ತು. ಸಿಐಡಿ ತನಿಖೆಯಲ್ಲಿಯೂ ನ್ಯಾಯ ದೊರಕಿಲ್ಲ ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇದೀಗ ಎಸ್‌ಐಟಿ ರಚನೆಯಾಗಿದೆ. ಈ ಮಧ್ಯೆ ಪ್ರಕರಣದ ತನಿಖೆ ನಡೆಸಿದ್ದ ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್‌ಸಿಂಗ್ ಥೋರಟ್ ಅವರು ಸರಿಯಾಗಿ ತನಿಖೆ ನಡೆಸಿಲ್ಲ. ಪ್ರಭಾವಿಗಳೊಂದಿಗೆ ಶಾಮೀಲಾಗಿ ಅವರು ಆರೋಪಿಗಳನ್ನು ರಕ್ಷಿಸಿದ್ದಾರೆ. ಇದೇ ಉದ್ದೇಶದಿಂದ ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಈ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡಲು ಪುತ್ತೂರು ಡಿವೈಎಸ್‌ಪಿಯಾಗಿದ್ದ ಡಾ. ಗಾನ ಪಿ. ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ತನಿಖೆ ನಡೆಸಿದ ಡಾ. ಗಾನ ಅವರು ಡಿವೈಎಸ್‌ಪಿ ಪ್ರತಾಪ್‌ಸಿಂಗ್ ಥೋರಟ್ ಅವರನ್ನು ಸಮರ್ಥಿಸಿ ವರದಿ ನೀಡಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here