







ಬೆಳ್ತಂಗಡಿ: ವಿದ್ಯಾರ್ಥಿಗಳನ್ನು ಟಿಪ್ಪರ್ನಲ್ಲಿ ಟ್ರಿಪ್ ಕರೆದುಕೊಂಡ ಹೋದ ವಿವಾದಕ್ಕೆ ಸಂಬಂಧಿಸಿ ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಕುಮಾರ್ ಅವರನ್ನು ಡಿಡಿಪಿಐ ಶಶಿಧರ್ ಜಿ.ಎಸ್. ಅವರು ಅಮಾನತು ಮಾಡಿ ಆದೇಶ ಹೊರಡಿಸಿದ ಮತ್ತು ಶಾಲಾ ಮಕ್ಕಳನ್ನು ಕರೆದುಕೊಂಡು ಹೋದ ಟಿಪ್ಪರ್ ಮಾಲಕರ ವಿರುದ್ಧ ಪೊಲೀಸ್ ಕೇಸ್ ದಾಖಲಾದ ಘಟನೆ ನಡೆದಿದೆ.
ಬಿ.ಇ.ಒ ಭೇಟಿ-ಡಿಡಿಪಿಐಗೆ ವರದಿ: ೨೦೨೫ರ ಡಿಸೆಂಬರ್ ೧೪ರಂದು ಎಲ್ಲರಿಗೂ ಮಾದರಿಯಾಗಿ ಅಮೃತ ಮಹೋತ್ಸವ ಆಚರಿಸಿ ಮೆಚ್ಚುಗೆ ಗಳಿಸಿದ್ದ ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೀಗ ಶಾಲಾ ವಿದ್ಯಾರ್ಥಿಗಳ ಟ್ರಿಪ್ ವಿಚಾರಕ್ಕೆ ಸಂಬಂಧಿಸಿ ವಿವಾದದ ಕೇಂದ್ರಬಿಂದುವಾಗಿದೆ. ಟಿಪ್ಪರ್ ಹಾಗೂ ಪಿಕಪ್ ವಾಹನದಲ್ಲಿ ಶಾಲಾ ಮಕ್ಕಳ ಹೊರ ಸಂಚಾರ ಮಾಡಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುವ ಮೂಲಕ ವಿವಾದ ಆರಂಭಗೊಂಡಿದೆ. ಫೆ.೯ರಂದು ಬಳಂಜ ಶಾಲೆಯ ಮಕ್ಕಳನ್ನು ನಾಲ್ಕೂರಿನಲ್ಲಿರುವ ಅನಿಲ್ ಬಳಂಜರವರ ಫಾರ್ಮ್ಗೆ ಶಾಲೆಯ ವತಿಯಿಂದ ಕರೆದುಕೊಂಡು ಹೋಗಲಾಗಿತ್ತು.
ಮಕ್ಕಳನ್ನು ಒಂದು ಟಿಪ್ಪರ್ ಹಾಗೂ ಒಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋದ ವಿಡಿಯೋ ತುಣುಕು ಫೆ.೧೨ರಂದು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸುದ್ದಿ ವಾಹಿನಿಗಳಲ್ಲಿ ವರದಿಯಾಗಿ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಳಂಜ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಫೆ. ೧೨ರಂದು ಭೇಟಿ ಕೊಟ್ಟು ನಡೆದ ಘಟನೆಯ ವರದಿ ಪಡೆದು ಡಿಡಿಪಿಐ ಶಶಿಧರ್ ಜಿ.ಎಸ್. ಅವರಿಗೆ ನೀಡಿದ್ದರು. ನಿಯಮ ಬಾಹಿರವಾಗಿ ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿದೆ ಎಂಬ ಕಾರಣಕ್ಕಾಗಿ ಡಿಡಿಪಿಐ ಶಶಿಧರ್ ಜಿ.ಎಸ್. ಅವರು ಶಾಲೆಯ ಪ್ರಭಾರ ಮುಖ್ಯ ಶಿಕ್ಷಣ ಕಿರಣ್ ಕುಮಾರ್ರವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿವಾದ ಸೃಷ್ಟಿ: ಶಿಕ್ಷಣ ಇಲಾಖೆಯ ನಿಯಮದಂತೆ ವರ್ಷಕ್ಕೊಮ್ಮೆ ಪರಿಸರ ವೀಕ್ಷಣೆಗಾಗಿ ಹೊರ ಸಂಚಾರಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು. ಅದರಂತೆ ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇಲ್ಲಿಂದ ಇಕೋ ಕ್ಲಬ್ ಕಾರ್ಯಕ್ರಮದಡಿ ಪರಿಸರ ಸಂಕರಕ್ಷಣೆ ಕುರಿತು ಚಟುವಟಿಕೆ ಹಮ್ಮಿಕೊಳ್ಳಲು ಬಳಂಜ ಶಾಲೆಗೆ ಅನುದಾನ ಬಿಡುಗಡೆಯಾಗಿತ್ತು. ಗಿಡ/ಮರಗಳನ್ನು ನೆಟ್ಟು ಪೋಷಿಸುವುದು, ಹಸಿ/ಒಣ ಕಸ ಸಂಗ್ರಹಣೆಗೆ ಕಸದ ಬುಟ್ಟಿಗಳ ಖರೀದಿ, ಪರಿಸರ ಸಂರಕ್ಷಣೆ ಮೂಡಿಸುವ ಜಾಗೃತಿ ಕಾರ್ಯಕ್ರಮ, ಸ್ಪರ್ಧೆಗಳು, ಪೋಸ್ಟರ್, ಬ್ಯಾನರ್ ರಚನೆ, ಉಪನ್ಯಾಸ ಕಾರ್ಯಕ್ರಮ, ಮಾದರಿಗಳ ರಚನೆ, ನವ ಭೆಟಿ, ಪ್ರಕೃತಿ ನಡಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ೯೦೦೦ ರೂ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ ವನ ಭೇಟಿ/ಪ್ರಕೃತಿ ನಡಿಗೆ, ಸಮೀಪದ ಉದ್ಯಾನವನ, ಅರಣ್ಯ ಇಲಾಖೆ ಕಚೇರಿ, ಸಾವಯವ ಗೊಬ್ಬರ ಕಾರ್ಖಾನೆ, ತ್ಯಾಜ್ಯ ವಿಲೇವಾರಿ ಘಟಕ ಅಥವಾ ಸ್ಥಳೀಯ ಗೃಹ ಕೈಗಾರಿಕಾ ಘಟಕ ಭೇಟಿಗೆ ೧೦೦೦ ರೂ ಮೀಸರಿಸಲಾಗಿತ್ತು. ಬಳಂಜ ಶಾಲೆಯ ಮಕ್ಕಳನ್ನು ಅಲ್ಲಿಯೇ ಹತ್ತಿರ ೬ ಕಿ.ಮೀ. ದೂರದಲ್ಲಿರುವ ಅನಿಲ್ ಬಳಂಜರವರ ಫಾರ್ಮ್ಗೆ ಕರೆದುಕೊಂಡು ಹೋಗಲು ಎಸ್ಡಿಎಂಸಿ ಮತ್ತು ಶಿಕ್ಷಕರು ನಿರ್ಧರಿಸಿದ್ದರು.
ಆದರೆ ಅಲ್ಲಿಗೆ ಬಸ್ ವ್ಯವಸ್ಥೆ ಮಾಡಲು ಅನುದಾನದ ಕೊರತೆ ಮತ್ತು ನಡೆದುಕೊಂಡು ಹೋಗಲು ಬಿಸಿಲು ಇರುವುದರಿಂದ ಶಾಲೆಯ ಮೈದಾನದ ಕೆಲಸಕ್ಕೆ ಬಂದಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರವೀಣ್ ಎಂಬವರ ಟಿಪ್ಪರ್ ಹಾಗೂ ಪಿಕಪ್ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಅದರಂತೆ ಮಕ್ಕಳ ಜೊತೆ ಶಿಕ್ಷಕರೂ ಸೇರಿ ಟಿಪ್ಪರ್ ಹಾಗೂ ಪಿಕಪ್ನಲ್ಲಿ ಕೂತು ಫಾರ್ಮ್ಗೆ ಭೇಟಿ ಕೊಟ್ಟಿದ್ದರು.ಬಳಿಕ ಮಕ್ಕಳ ಈ ಪ್ರವಾಸದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಳಿಕ ಕೆಲವು ಪೋಷಕರು ಮಕ್ಕಳನ್ನು ಈ ರೀತಿ ಪ್ರವಾಸ ಕರೆದುಕೊಂಡು ಹೋಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿ ವಿವಾದ ಸೃಷ್ಟಿಯಾಗಿತ್ತು. ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅವರು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಡಿಡಿಪಿಐ ಶಶಿಧರ ಜಿ.ಎಸ್. ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ ಡಿಡಿಪಿಐ ಶಶಿಧರ ಜಿ.ಎಸ್. ಅವರು ತಕ್ಷಣ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಕರ್ನಾಟಕ ಸರ್ಕಾರದ ಸುತ್ತೋಲೆ ಪ್ರಕಾರ ಮಕ್ಕಳನ್ನು ತೆರೆದ ವಾಹನಗಳಲ್ಲಿ ಹೊರ ಸಂಚಾರಕ್ಕೆ ಕರೆದುಕೊಂಡು ಹೋಗುವ ಹಾಗಿಲ್ಲ. ಹಾಗಾಗಿ ಇದು ನಿಯಮ ಬಾಹಿರವಾದ ಕಾರ್ಯಕ್ರಮವೆಂದು ಪರಿಗಣಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಬಳಂಜ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ತುರ್ತು ರಜೆಯಲ್ಲಿರುವ ಕಾರಣ ಸಹಶಿಕ್ಷಕ ಕಿರಣ್ ಕುಮಾರ್ ಪ್ರಭಾರ ಮುಖ್ಯ ಶಿಕ್ಷಕರಾಗಿ ಮೂರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದರು.
ನನ್ನ ಸಮಾಜ ಸೇವೆಯೇ ನನಗೆ ಮುಳುವಾಯಿತು: ಪ್ರವೀಣ್ ಪೂಜಾರಿ ಶಾಲೆಯೇ ದೇಗುಲವೆಂದು ನಂಬಿ ವಿಶ್ವಾಸದಿಂದ ಉಚಿತ ಸೇವೆಯ ರೂಪದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕಾಗಿ ಶಾಲೆಯಿಂದ ಎರಡು ಕಿ.ಮೀ. ದೂರದ ನಾಲ್ಕೂರು ಗ್ರಾಮದ ರಾಮನಗರ ಅನಿಲ್ ಭಟ್ರವರ ಬಳಂಜ ಪಾರ್ಮ್ಗೆ ನನ್ನ ಪಿಕಪ್ ಮತ್ತು ಟಿಪ್ಪರ್ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದು ನಿಜ. ಅದು ನನ್ನ ತಪ್ಪು ತಿಳುವಳಿಕೆಯಿಂದ ನನಗೆ ಗೊತ್ತಿಲ್ಲದೆ ನಡೆದ ಘಟನೆ. ಆದರೂ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಬರುವವರೆಗೆ ನಾನು ಮತ್ತು ಶಾಲಾ ಶಿಕ್ಷಕ ವೃಂದದವರ ಜೊತೆಗೆ ಮಕ್ಕಳ ಬಗ್ಗೆ ಅತ್ಯಂತ ಜಾಗ್ರತೆ ಮತ್ತು ಕಾಳಜಿಯನ್ನು ವಹಿಸಿಕೊಂಡಿರುತ್ತೇವೆ. ನಾನು ಬಳಂಜ ಮತ್ತು ಅಟ್ಲಾಜೆ ಶಾಲೆಯ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದು ವರ್ಷಕ್ಕೆ ೨೫ ಸಾವಿರಕ್ಕಿಂತಲೂ ಹೆಚ್ಚು ಮೊತ್ತದಲ್ಲಿ ದೇಣಿಗೆ ಮತ್ತು ವಸ್ತು ರೂಪದಲ್ಲಿ ಸಹಕರಿಸಿರುತ್ತೇನೆ. ಈ ವಿಷಯದಲ್ಲೂ ಹಾಗೆಯೇ ನಾನು ಬಾಡಿಗೆ ಪಡೆಯುವ ಉದ್ದೇಶ ಇಟ್ಟುಕೊಂಡು ನನ್ನ ಪಿಕಪ್ ಮತ್ತು ಟಿಪ್ಪರ್ ಅನ್ನು ಶಾಲಾ ಮಕ್ಕಳ ಅಧ್ಯಯನ ಪ್ರವಾಸಕ್ಕೆ ನೀಡಿದ್ದಲ್ಲ.


ಬಳಂಜ ಪಾರ್ಮ್ ಶಾಲೆಯಿಂದ ಕೇವಲ ಎರಡು ಕಿಲೋ ಮೀಟರ್ ದೂರ ಇರುವುದರಿಂದ ಶಾಲಾ ಮಕ್ಕಳಿಗೆ ಪ್ರಯೋಜನ ಆಗಲಿ ಎಂಬ ಒಂದೇ ಉದ್ದೇಶದಿಂದ ಉಚಿತವಾಗಿ ನೀಡಿರುತ್ತೇನೆ. ಅದು ಸಹ ತಲೆಹರಟೆ ಯೂಟ್ಯೂಬ್ ಚಾನೆಲ್ಗಳು ಹೇಳಿದಂತೆ ಗುರುವಾಯನಕೆರೆ, ಬೆಳ್ತಂಗಡಿ ಎಂದೆಲ್ಲ ಪೇಟೆ ಸುತ್ತಾಡಿಸಿಲ್ಲ. ಶಾಲೆಯಿಂದ ಹತ್ತಿರವೇ ಇರುವ ಹಳ್ಳಿ ರೋಡಿನಲ್ಲಿ ಕರೆದುಕೊಂಡು ಹೋಗಿದ್ದನ್ನು ಸರಕಾರಿ ಶಾಲೆಯ ಏಳಿಗೆಯನ್ನು ಬಯಸದ ವಿಘ್ನ ಸಂತೋಷಿಗಳು ಉzಶಪೂರ್ವಕವಾಗಿ ಶಿಕ್ಷಣ ಇಲಾಖೆಗೆ ದೂರು ನೀಡಿ ನನ್ನ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಟಿಪ್ಪರ್ ಮತ್ತು ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿರುವುದು ವಿಪರ್ಯಾಸವಾಗಿದೆ. ಇದಲ್ಲದೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಕಿರಣ್ರವರನ್ನು ಸಹ ಅಮಾನತು ಮಾಡಿರುತ್ತಾರೆ. ಎಲ್ಲವನ್ನೂ ಕಾನೂನು ಕ್ರಮದ ಮೂಲಕವೇ ನೋಡುವುದಾದರೆ ಶಾಲೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಊರಿನ ಜನರು ಸೇರಿಕೊಳ್ಳುವುದಾದರು ಹೇಗೆ ಅನ್ನುವ ಪ್ರಶ್ನೆ ಮೂಡುತ್ತದೆ.
ನನ್ನ ಮನೆಯ ಮಕ್ಕಳಾಗಲಿ ಅಥವಾ ನನ್ನ ಕುಟುಂಬದ ಮಕ್ಕಳಾಗಲಿ ಬಳಂಜ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿಲ್ಲ. ಆದರೂ ನಾನು ಶಾಲೆಯ ಅಭಿವೃದ್ಧಿಗಾಗಿ ಹಣವನ್ನು ಖರ್ಚು ಮಾಡಿದ್ದು ಇನ್ನು ಮುಂದಕ್ಕೆ ಬಳಂಜ ಶಾಲೆಯ ಕುರಿತು ಸ್ವಲ್ಪ ಆಲೋಚನೆ ಮಾಡಬೇಕಾಗುತ್ತದೆ. ನನ್ನಲ್ಲಿ ಹಣ ಇದ್ದು ಕೊಟ್ಟದ್ದಲ್ಲ. ಇದು ನಾನು ಕಲಿತ ಶಾಲೆ ಅನ್ನುವ ಕಾರಣಕ್ಕಾಗಿ ಕೊಟ್ಟಿzನೆ. ಆದರೆ ಒಮ್ಮೊಮ್ಮೆ ಮಾಡಿದ ಸೇವೆಯೇ ನನಗೆ ಮುಳುವಾಗಿದ್ದು ಮನಸ್ಸಿಗೆ ತುಂಬಾ ನೋವಾಗಿದೆ. ಇದುವರೆಗೆ ಬಳಂಜ ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗೆ ಪಾಠ ಮಾಡಲು ೪ ಶಿಕ್ಷಕರಿದ್ದು ಇದರಲ್ಲಿ ಮುಖ್ಯೋಪಾಧ್ಯಾಯರಾದ ರಂಗಸ್ವಾಮಿಯವರು ಚಿಕಿತ್ಸೆಯ ಉzಶಕ್ಕಾಗಿ ರಜೆಯಲ್ಲಿದ್ದಾರೆ. ಇದೀಗ ಒಬ್ಬರನ್ನು ಅಮಾನತು ಮಾಡಿದ್ದಾರೆ. ಹಾಗಾದರೆ ಎರಡು ಶಿಕ್ಷಕರಿಂದ ಎಷ್ಟು ಪಾಠ ಮಾಡಲು ಸಾಧ್ಯ. ಇದು ಶಿಕ್ಷಣ ಇಲಾಖೆಗೆ ಕಾಣುವುದಿಲ್ಲವೇ? ಯಾರೋ ಹೇಳಿದರೆಂದು ಏಕಾಏಕಿ ಮಾಧ್ಯಮಗಳಲ್ಲೂ ಬರುವಂತೆ ಮಾಡಿದ ಕಾಣದ ಕೈಗಳು ಯಾರು ಎಂದು ಜನತೆಗೆ ಅರ್ಥ ಆಗಬೇಕು.
ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ನಾಗರಿಕರು ಒಟ್ಟು ಸೇರಿ ಈ ಕುರಿತು ಒಟ್ಟಾಗಿ ಇಂತಹ ದುರುzಶದಿಂದ ಕೂಡಿದ ಶಾಲೆಯ ವಿರೋಧಿ ಮನಸ್ಥಿತಿಯನ್ನು ಖಂಡಿಸಬೇಕಾಗಿದೆ. ಊರವರ ಸಹಕಾರ ಇಲ್ಲದೆ ಶಾಲೆ ನಡೆಯುವುದಾದರೆ ನಡೆಸಲಿ. ಆದರೆ ಶಾಲೆಯಲ್ಲಿ ದಾಖಲಾತಿ ಕೊರತೆಯಾದರೆ, ಗುಣಮಟ್ಟದ ಶಿಕ್ಷಣ ಇಲ್ಲದಿದ್ದರೆ, ಮೂಲಭೂತ ಸೌಕರ್ಯ ಮಕ್ಕಳಿಗೆ ಸಿಗದಿದ್ದರೆ, ಊರವರು ಸುಮ್ಮನಿರಲು ಸಾಧ್ಯವಿಲ್ಲ. ಯಾಕೆಂದರೆ ಇದೇ ಪರಿಸ್ಥಿತಿ ಎದುರಾದರೆ ಮುಂದಿನ ದಿನಗಳಲ್ಲಿ ನನ್ನಂತಹ ನಿಸ್ವಾರ್ಥ ಮನಸ್ಸಿನಿಂದ ಶಾಲೆಯ ಏಳಿಗೆಗೆ ಸಹಕಾರ ನೀಡುವ ಅನೇಕ ಜನರು ಹಿಂದೆ ಸರಿಯಬಹುದು. ನಾನು ಅಂತೂ ಇನ್ನು ಮುಂದಕ್ಕೆ ಶಾಲೆಯ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದು ತೀರ್ಮಾನಿಸಿzನೆ. ಯಾಕೆಂದರೆ ಯಾವುದೇ ಲಾಭ ಇಲ್ಲದಿದ್ದರೂ ಸಹಾಯ ಮಾಡಲು ಹೋಗಿ ಕೈ ಸುಟ್ಟುಕೊಂಡು ಪೊಲೀಸ್ ಠಾಣೆ, ಕೋರ್ಟ್, ಕಚೇರಿ ಅಂತ ಹೇಳಿ ಸಾವಿರಾರು ರೂಪಾಯಿ ನಷ್ಟ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ಅಂತಹ ಅನಿವಾರ್ಯತೆಯಲ್ಲಿ ಈಗ ಸಿಲುಕಿಕೊಂಡು ನನ್ನ ಎರಡು ವಾಹನಗಳು ಪೊಲೀಸ್ ಠಾಣೆಯಲ್ಲಿ ನಿಂತಿದೆ. ಇದಕ್ಕೆ ನಾನು ಮಾಡಿದ ದೊಡ್ಡ ತಪ್ಪು ಅಂದರೆ ಟಿಪ್ಪರ್ ಮತ್ತು ಪಿಕಪ್ ವಾಹನವನ್ನು ಉಚಿತವಾಗಿ ಮಕ್ಕಳ ಅಧ್ಯಯನ ಪ್ರವಾಸಕ್ಕೆ ನೀಡಿದ್ದು ಈ ಬಗ್ಗೆ ಗಮನಿಸಿದ್ದಕ್ಕಾಗಿ ಶಿಕ್ಷಣ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರವೀಣ್ ಪೂಜಾರಿ ಲಾಂತ್ಯಾರು ಪ್ರತಿಕ್ರಿಯೆ ನೀಡಿದ್ದಾರೆ.
ಟಿಪ್ಪರ್ ಮಾಲಕರ ವಿರುದ್ಧ ಕೇಸ್ ದಾಖಲು: ಬಳಂಜ ಶಾಲೆಯ ಮಕ್ಕಳನ್ನು ಅಧ್ಯಯನಕ್ಕಾಗಿ ಟಿಪ್ಪರ್ ಹಾಗೂ ಪಿಕಪ್ನಲ್ಲಿ ಕರೆದುಕೊಂಡು ಹೋದ ವಿಚಾರವಾಗಿ ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಅವರನ್ನು ಡಿಡಿಪಿಐಯವರು ಅಮಾನತುಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಮಕ್ಕಳನ್ನು ಕರೆದೊಯ್ದ ಟಿಪ್ಪರ್ ಹಾಗೂ ಪಿಕಪ್ ವಾಹನದ ಮಾಲಕ ಪ್ರವೀಣ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೆ.೯ರಂದು ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಪರಾರಿ ಎಂಬಲ್ಲಿ ಬಳಂಜ-ನಾಲ್ಕೂರು ಸಾರ್ವಜನಿಕ ರಸ್ತೆಯಲ್ಲಿ ಬಳಂಜ ಕಡೆಯಿಂದ ಟಿಪ್ಪರ್ ಲಾರಿ ನಂಬ್ರ ಎಂ. ೭೦-೨೫೯೬ ಮತ್ತು ಪಿಕ್ಅಪ್ ನಂಬ್ರ ಎಂ. ೨೧-ಂ೮೭೭೬ ನೇದರಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ನಾಲ್ಕೂರು ಎಂಬಲ್ಲಿಯ ನರ್ಸರಿಗೆ ಅಧ್ಯಯನಕ್ಕೆ ಕರೆದುಕೊಂಡು ಹೋಗಲಾಗಿದ್ದು ಈ ಬಗ್ಗೆ ಧರಣೇಂದ್ರ ಬಳಂಜ ಗ್ರಾಮ ಬೆಳ್ತಂಗಡಿ ತಾಲೂಕುರವರು ನೀಡಿದ ದೂರಿನ ಅನ್ವಯ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ೧೪/೨೦೨೬ರಂತೆ ಕಲಂ ೨೮೧ ಮತ್ತು ಕಲಂ ೬೬ ಜೊತೆಗೆ ೧೯೨(ಎ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ ಶಾಲೆಯವರ ಬಗ್ಗೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ: ಕಿರಣ್ ಕುಮಾರ್
ನಾನು ಈ ಹಿಂದೆ ಇದ್ದ ಶಾಲೆಯಲ್ಲಿ ಇದೇ ರೀತಿ ಹೊರ ಸಂಚಾರವನ್ನು ಕಾಲ್ನಡಿಗೆ ಮೂಲಕ ಮಾಡುತ್ತಿದ್ದೆ. ಆಗ ಬಿಸಿಲು ಎನ್ನುವ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದಿತ್ತು. ಇದು ಪ್ರವಾಸ ಅಲ್ಲ. ಹೊರ ಸಂಚಾರ. ಇಲ್ಲಿಯೂ ಎಲ್ಲಾ ವಿದ್ಯಾರ್ಥಿಗಳಿಗೆ ಹೊರ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವ ಉzಶದಿಂದ ಹತ್ತಿರದ ನಾಲ್ಕೂರಿನ ಅನಿಲ್ ಫಾರ್ಮ್ಗೆ ಹೋಗುವ ನಿರ್ಧಾರ ಮಾಡಿದೆವು. ಅಲ್ಲಿಗೆ ಬಸ್ ವ್ಯವಸ್ಥೆ ಬಗ್ಗೆ ವಿಚಾರಿಸಿದಾಗ ರೂ.೯೦೦೦ ಮೊತ್ತವೆಂದು ಹೇಳಿದರು. ನಮ್ಮಲ್ಲಿ ಕೇವಲ ರೂ.೧೦೦೦ ಮಾತ್ರ ಅನುದಾನವಿತ್ತು. ಅದೇ ಸಮಯದಲ್ಲಿ ಧರ್ಮಸ್ಥಳ ವತಿಯಿಂದ ಮೈದಾನದ ಕೆಲಸ ನಡೆಯುತ್ತಿತ್ತು. ಈ ಶಾಲೆಯ ಹಳೆ ವಿದ್ಯಾರ್ಥಿ ಪ್ರವೀಣ್ರವರ ಪಿಕಪ್ ಹಾಗೂ ಟಿಪ್ಪರ್ ಲಾರಿ ಇತ್ತು. ಅವರು ಮಾನವೀಯ ದೃಷ್ಠಿಯಿಂದ ನಿಮಗೆ ಒಪ್ಪಿಗೆ ಇದ್ದರೆ ನಮ್ಮ ಪಿಕಪ್ ಹಾಗೂ ಟಿಪ್ಪರ್ ವಾಹನದಲ್ಲಿ ನೀವು ಹೇಳಿದ ವೇಗದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಿಟ್ಟು ಬರುತ್ತೇವೆ. ಮತ್ತೆ ವಾಪಸ್ ಕರೆದುಕೊಂಡು ಬರುತ್ತೇವೆ ಎಂಬ ಭರವಸೆ ಕೊಟ್ಟರು. ಅದರಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಸಿಗುತ್ತದೆ ಎಂಬ ಕಾರಣದಿಂದ ಮಕ್ಕಳಿಗೆ ಪರಿಸರದ ಕಾಳಜಿ ಬರಲಿ ಎಂದು ಈ ಕಾರ್ಯಕ್ರಮ ಆಯೋಜನೆ ಜೊತೆ ಮೂರು ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಸೇರಿ ಹೋದೆವು. ನಾನು ಪಿಕಪ್ ವಾಹನದಲ್ಲಿ ಮಕ್ಕಳ ಜೊತೆಯೇ ಮಧ್ಯದಲ್ಲಿ ನಿಂತಿದ್ದೆ. ಕೇವಲ ೧೦ರಿಂದ ೨೦ ಕಿ.ಮೀ. ವೇಗದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವಾಪಸ್ ಬಂದಿzವೆ. ಮಕ್ಕಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಮಕ್ಕಳನ್ನು ನಾವು ಆ ರೀತಿ ಕರೆದುಕೊಂಡು ಹೋಗಬಾರದು ನಿಜ. ಅದು ನಮ್ಮ ತಪ್ಪು ಹೌದು. ಆದರೆ ಮಕ್ಕಳಿಗೋಸ್ಕರ ಬೇರೆ ದಾರಿ ಇಲ್ಲದೆ ಈ ರೀತಿ ಕರೆದುಕೊಂಡು ಹೋದೆವು. ಈ ಬಗ್ಗೆ ದಾನಿಗಳನ್ನು ಸಂಪರ್ಕ ಮಾಡಬಹುದಿತ್ತು. ಆದರೆ ಈಗಾಗಲೇ ಅನೇಕ ಮಂದಿ ಕಳೆದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ, ಶಾಲೆಯ ಅಭಿವೃದ್ಧಿಗೆ, ಶಿಕ್ಷಕರ ವೇತನಕ್ಕೆ ದೇಣಿಗೆ ಕೊಟ್ಟಿದ್ದಾರೆ. ಮತ್ತೆ ಮತ್ತೆ ಅವರನ್ನು ಕೇಳುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದೆವು. ಮುಂದಿನ ದಿನಗಳಲ್ಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಇಲಾಖಾ ನಿಯಮ ಪಾಲನೆ ಮಾಡುತ್ತೇವೆ ಎಂದು ಅಮಾನತುಗೊಂಡಿರುವ ಪ್ರಭಾರ ಮುಖ್ಯಶಿಕ್ಷಕ ಕಿರಣ್ ಕುಮಾರ್ ತಿಳಿಸಿದ್ದಾರೆ.
ಶಾಲಾ ನಿಯಮ ಉಲ್ಲಂಘನೆ: ತಾರಕೇಸರಿ
ನಾವು ವಿಚಾರ ಗೊತ್ತಾಗುತ್ತಿದ್ದಂತೆ ಬಳಂಜ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟಿzನೆ. ನಡೆದ ಘಟನೆ ಕುರಿತಾಗಿ ಮುಖ್ಯ ಶಿಕ್ಷಕರನ್ನು ವಿಚಾರಿಸಿದಾಗ ಅವರು ಮಕ್ಕಳನ್ನು ಟಿಪ್ಪರ್ ವಾಹನದಲ್ಲಿ ಕರೆದುಕೊಂಡು ಹೋಗಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇದರ ವರದಿಯನ್ನು ಪಡೆದು ಡಿಡಿಪಿಐ ಶಶಿಧರ್ ಜಿ.ಎಸ್.ರವರಿಗೆ ನೀಡಿದ್ದೆ. ಅದರಂತೆ ಇದು ಶಾಲಾ ನಿಯಮ ಉಲ್ಲಂಘನೆ ಎಂದು ಉಲ್ಲೇಖಿಸಿ ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಕುಮಾರ್ರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ತಿಳಿಸಿದ್ದಾರೆ.
ನಮ್ಮಿಂದ ತಪ್ಪಾಗಿದೆ: ರತ್ನಾಕರ್
ಕಮಿಟಿಯ ನಿರ್ಣಯದಂತೆ ನಾವು ಈ ನಿರ್ಧಾರಕ್ಕೆ ಬಂದಿರುವುದು. ಇಲ್ಲಿಂದ ಕೇವಲ ೬ ಕಿ.ಮೀ. ಅಷ್ಟೇ ದೂರವಿರುವುದು. ಕಳೆದ ಬಾರಿ ಆರು ಮತ್ತು ಏಳನೇ ತರಗತಿ ಮಕ್ಕಳು ಮಾತ್ರ ಹೋಗಿದ್ದರು. ಆದರೆ ಈ ಬಾರಿ ಪೋಷಕರು ಅದ್ಯಾಕೆ ನಮ್ಮ ಮಕ್ಕಳಿಗೆ ಅವಕಾಶ ಇಲ್ಲ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕಾಗಿ ಎಲ್ಲಾ ಮಕ್ಕಳನ್ನು ಕರೆದುಕೊಂಡು ಅನಿಲ್ ಫಾರ್ಮ್ಗೆ ಹೋಗಿದ್ದೆವು. ಈ ಹಿಂದೆ ಕೂಡ ಈ ರೀತಿಯೇ ಹೋಗಿದ್ದರು. ಆದರೆ ಇತ್ತೀಚೆಗೆ ಸರ್ಕಾರದಿಂದ ತೆರೆದ ವಾಹನಗಳಲ್ಲಿ ಹೊರ ಸಂಚಾರ ಹೋಗಬಾರದು ಎಂಬ ಸುತ್ತೋಲೆ ಇದೆ. ನಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಇಂತಹ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ್ ಪ್ರತಿಕ್ರಿಯೆ ನೀಡಿದ್ದಾರೆ.








