ಮಂಜುನಾಥ್, ಶರಧಿರಾಜ್ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ

0

ಬೆಳ್ತಂಗಡಿ: ಯುವ ವಕೀಲರಾದ ಮಂಜುನಾಥ ಮತ್ತು ಶರಧಿರಾಜ್ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯ ೨೦೨೫ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರಾಥಮಿಕ ಪರೀಕ್ಷೆ ನಡೆದು ಡಿಸೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆ ಹಾಗೂ ಜನವರಿ ತಿಂಗಳಿನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಡೆದಿದ್ದ ನೇರ ಸಂದರ್ಶನದ ಮೂರು ಹಂತದ ಕಠಿಣ ಪರೀಕ್ಷೆಗಳನ್ನು ಪೂರೈಸಿರುವ ಮಂಜುನಾಥ್ ಮತ್ತು ಶರಧಿರಾಜ್ ಅವರು ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಮೂಲತಃ ಬೆಳಗಾವಿಯವರಾಗಿರುವ ಶಿವಲಿಂಗಯ್ಯ ಮತ್ತು ನಿಂಗಮ್ಮ ಅವರ ಪುತ್ರರಾದ ಮಂಜುನಾಥ್ ಅವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ವಾಸವಿದ್ದಾರೆ. ಒಂದನೇ ತರಗತಿಯಿಂದ ೬ನೇ ತರಗತಿಯವರೆಗೆ ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ೭ ಮತ್ತು ೮ನೇ ತರಗತಿಯ ವಿದ್ಯಾಭ್ಯಾಸವನ್ನು ಪುತ್ತೂರು ತಾಲೂಕಿನ ಪಡ್ನೂರು ಶಾಲೆಯಲ್ಲಿ ಪೂರೈಸಿದ್ದರು. ೯ರಿಂದ ದ್ವಿತೀಯ ಪಿಯುಸಿಯವರೆಗೆ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಈ ವೇಳೆ ಮಂಜುನಾಥ್ ಅವರು ಬೆಸ್ಟ್ ಔಟ್‌ಗೋಯಿಂಗ್ ಸ್ಪೋರ್ಟ್ಸ್ ಸ್ಟೂಡೆಂಟ್ ಅವಾರ್ಡ್ ಪಡೆದಿದ್ದರು. ಕರಾಟೆ ಸ್ಪರ್ಧೆಯಲ್ಲಿ ೧೫ಕ್ಕೂ ಅಧಿಕ ಬಾರಿ ರಾಜ್ಯಮಟ್ಟದ ಪದಕ ಪುರಸ್ಕೃತರಾಗಿರುವ ಇವರು ಕರ್ನಾಟಕ ಸ್ಟೇಟ್ ಲಾ ಯೂನಿವರ್ಸಿಟಿ ನಡೆಸಿದ ಸ್ಪರ್ಧಾಕೂಟದಲ್ಲಿ ವಿವೇಕಾನಂದ ಕಾಲೇಜ್ ಪ್ರತಿನಿಧಿಸಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. ಪಡ್ನೂರಿನ ಶ್ರೀರಾಂ ಕಬಡ್ಡಿ ಫ್ರೆಂಡ್ಸ್ ತಂಡದಲ್ಲಿ ಉತ್ತಮ ಆಟಗಾರನಾಗಿದ್ದ ಮಂಜುನಾಥ್ ಅವರು ಪ್ರಸ್ತುತ ಬೆಳ್ತಂಗಡಿಯ ಮಿನಿವಿಧಾನ ಸೌಧದ ಬಳಿ ಕಾರ್ಯ ನಿರ್ವಹಿಸುತ್ತಿರುವ ವಕೀಲ ಯತೀಶ್ ಶೆಟ್ಟಿ ಅವರ ಜೂನಿಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಬೆಂಗಳೂರಿನ ರಾಜಣ್ಣ ಎಂ.ಬಿ. ಮತ್ತು ಜಮುನಾ ಜಿ. ಅವರ ಪುತ್ರಿಯಾಗಿರುವ ಶರಧಿರಾಜ್ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಸಮೀಪದ ಅಳಿಕೆಯವರಾದ ವಕೀಲ ಮಾಧವ ಪೂಜಾರಿ ಅವರ ಜೂನಿಯರ್ ವಕೀಲರಾಗಿ ಪುತ್ತೂರಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಶರಧಿರಾಜ್ ಅವರು ಬೆಂಗಳೂರಿನಲ್ಲಿಯೂ ಅಭ್ಯಾಸ ಮಾಡುತ್ತಿದ್ದರು.

LEAVE A REPLY

Please enter your comment!
Please enter your name here