ಚಾಲಕ ರೋಷನ್ ಕಿರಣ್ ಡಿಸೋಜಾ ನಾಪತ್ತೆ-ದೂರು ದಾಖಲು

0

ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೋಷನ್ ಕಿರಣ್ ಡಿಸೋಜ(೩೬) ಅವರು ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿಯ ಸಿಕ್ಸರಾ ಟ್ರಾವೆಲ್ಸ್‌ನ ಪಿಕಪ್‌ನಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ರೋಷನ್ ಡಿಸೋಜ ಅವರು ಜ.೨೪ರಂದು ತನ್ನ ಪತ್ನಿಗೆ ಕರೆ ಮಾಡಿ ಜ.೨೫ರಂದು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು. ಜ.೨೫ರಂದು ಬೆಳಿಗ್ಗೆ ಬಸ್ ಹತ್ತಿ ಬರುತ್ತಿರುವುದಾಗಿ ತಿಳಿಸಿದ್ದ ಅವರು ನಂತರ ಪತ್ನಿಗೆ ಕರೆ ಮಾಡಿಲ್ಲ. ಪತ್ನಿ ೪ ಗಂಟೆಗೆ ಕರೆ ಮಾಡಿದಾಗ ರೋಷನ್ ಕಿರಣ್ ಡಿಸೋಜ ಅವರು ಕರೆ ಸ್ವೀಕರಿಸಿಲ್ಲ. ನಂತರ ೬:೨೫ ಗಂಟೆಗೆ ರೋಷನ್ ಕಿರಣ್ ಡಿಸೋಜರವರು ಪತ್ನಿಯ ಮೊಬೈಲ್‌ಗೆ ?ನಾನು ಇರುವುದಿಲ್ಲ? ಎಂದು ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪತ್ನಿ ರೋಷನ್ ಅವರ ಮೊಬೈಲ್‌ಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ನೆರೆಯ ಪರಿಚಯಸ್ಥರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.

ಕೂಡಲೇ ಬೆಂಗಳೂರಿನಿಂದ ಹೊರಟು ಬೆಳ್ತಂಗಡಿಯ ಬಾಡಿಗೆ ಮನೆಗೆ ಬಂದು ನೋಡಿದಾಗ ರೋಷನ್ ಕಿರಣ್ ಡಿಸೋಜ ಅವರು ಮನೆಯಲ್ಲಿ ಇರಲಿಲ್ಲ. ಆದ್ದರಿಂದ ಕಾಣೆಯಾದ ರೋಷನ್ ಕಿರಣ್ ಅವರನ್ನು ಪತ್ತೆಹಚ್ಚಿ ಕೊಡಬೇಕು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಅವರ ಪತ್ನಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೧೧/೨೦೨೬ರಂತೆ ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ. ಕಾಣೆಯಾದ ಸಿದ್ದಕಟ್ಟೆಯ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆಯ ದೇವಸ್ಯ ಮನೆಯ ಮಾರ್ಷಲ್ ಡಿಸೋಜ ಅವರ ಪುತ್ರ ರೋಷನ್ ಕಿರಣ್ ಡಿಸೋಜ ಅವರ ಮಾಹಿತಿ ಇದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸ್ಥಿರ ದೂರವಾಣಿ ಸಂಖ್ಯೆ (೦೮೨೫೬-೨೩೨೦೯೩) ಅಥವಾ ೯೪೮೦೮೦೫೩೭೦ ಸಂಖ್ಯೆಗೆ ಕರೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೋಷನ್ ಕಿರಣ್ ಡಿಸೋಜ ಅವರು ಸುಮಾರು ೫.೧೦ ಅಡಿ ಎತ್ತರ ಇದ್ದು ಸಾಧಾರಣ ಶರೀರ ದುಂಡು ಮುಖ, ಗೋಧಿ ಮೈ ಬಣ್ಣ, ಬಲಕೈಯ ಮಣಿಗಂಟಿನಲ್ಲಿ ಗಾಯದ ಗುರುತು ಇದೆ. ಹಸಿರು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಅವರು ಕನ್ನಡ, ತುಳು ಮತ್ತು ಮಲಯಾಳಂ ಭಾಷೆ ಮಾತನಾಡುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here