






ಬೆಳ್ತಂಗಡಿ: ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾವೂರು ಗ್ರಾಮದ ಮಹಿಳೆ ಮತ್ತು ಅವರಿಬ್ಬರು ಮಕ್ಕಳಿಗೆ ಅಪರಿಚಿತ ಯುವಕರಿಬ್ಬರು ಹಲ್ಲೆ ನಡೆಸಿದ ಘಟನೆ ಜ.೧೦ರಂದು ಅಪರಾಹ್ನ ನಡೆದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿರಿಂದಿ ನಿವಾಸಿ ರಝಾಕ್ ಅವರ ಪತ್ನಿ ಎ ಅಸೀದಾ(೩೮), ಅವರ ಪುತ್ರರಾದ ಮುಝಫರ್(೨೦) ಮತ್ತು ಮುರ್ಷಿದ್(೧೯) ಹಲ್ಲೆಗೊಳಗಾದವರು. ಈ ಪೈಕಿ ಮುಝಪರ್ ಅವರಿಗೆ ತಲೆಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಉಚ್ಚಿಲದಲ್ಲಿ ಜ.೧೧ರಂದು ನಡೆಯಬೇಕಿದ್ದ ಫ್ಯಾಮಿಲಿ ಮೀಟ್ ಕಾರ್ಯಕ್ರಮಕ್ಕೆ ಹೋಗುವ ಉzಶದಿಂದ ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಮುಝಪರ್ ಅವರು ಶುಕ್ರವಾರ ರಾತ್ರಿ ನಾವೂರು ಮನೆಗೆ ಆಗಮಿಸಿ ಶನಿವಾರ ತಾಯಿ ಮತ್ತು ಸಹೋದರ ಸಹಿತ ಎಂ-೧೯.ಈ-೩೧೩೯ ನಂಬರಿನ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಂಗಳೂರಿಗೆ ಪ್ರಯಾಣ ಹೊರಟಿದ್ದರು. ಇವರ ಜೊತೆ ಜೊತೆಗೆ ಬೆಳ್ತಂಗಡಿಯಲ್ಲಿ ಬಸ್ಸೇರಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಯಾವುದೋ ಅಮಲು ಸೇವಿಸಿದ್ದವರ ರೀತಿ ಕಾಣುತ್ತಿದ್ದವರು ಮಹಿಳೆಯರೂ ಇದ್ದ ಬಸ್ಸಿನಲ್ಲಿ ಜೋರಾದ ಶಬ್ದದಲ್ಲಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿದ್ದರು.


ಇದು ಇತರ ಪ್ರಯಾಣಿಕರಿಗೆ ಮತ್ತು ಮಹಿಳೆಯರಿಗೆ ಮುಜುಗರದ ಸನ್ನಿವೇಶ ನಿರ್ಮಿಸಿತ್ತು. ಅವರ ಈ ವರ್ತನೆಯನ್ನು ಕಂಡು ಮುಝಫರ್ ಅವರು ಸಾರ್ವಜನಿಕವಾಗಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದನ್ನೇ ನೆಪವಾಗಿಟ್ಟುಕೊಂಡು ಅಪರಿಚಿತರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ಆರಂಭದಲ್ಲಿ ಜಗಳ ಶುರು ಮಾಡಿದ ಯುವಕರ ವರ್ತನೆಯಿಂದ ಮುಝಫರ್ ಅವರ ತಾಯಿ ನಿರ್ವಾಹಕನ ಬಳಿ ಬಸ್ಸು ನಿಲ್ಲಿಸುವಂತೆ ಕೇಳಿಕೊಂಡರು. ಆದರೆ ಮದ್ದಡ್ಕ ಪೇಟೆಗಿಂತಲೂ ಎದುರು ಹೋಗಿ ಯಾರೂ ಇಲ್ಲದ ಜಾಗದಲ್ಲಿ ಬಸ್ಸು ನಿಲ್ಲಿಸಿದರು. ಈ ವೇಳೆ ಮುಝಪರ್ ಅವರ ತಾಯಿಯನ್ನು ಜೋರಾಗಿ ದೂಡಿ ಸಹೋದರರಿಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಮುಝಪರ್ ಅವರನ್ನು ಬಸ್ಸಿನಿಂದ ಹೊರಗೆಳೆದು ಕಲ್ಲಿನಿಂದ ಹಲ್ಲೆ ನಡೆಸಿ ಅವರ ಮುಖದಲ್ಲಿ ರಕ್ತ ಹರಿಯುತ್ತಿರುವಂತೆ ಇಬ್ಬರೂ ಯುವಕರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ಘಟನೆ ನಡೆಯುವ ವೇಳೆ ಬಸ್ಸಿನಲ್ಲಿದ್ದ ಯಾರೂ ಕೂಡ ಇವರ ಸಹಾಯಕ್ಕೆ ಬರಲಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಘಟನೆಯಿಂದ ಗಾಯಗೊಂಡ ಮುಝಫರ್ ಅವರು ಗುರುವಾಯನಕರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಗೆ ಕಾರಣರಾದ ಅಪರಿಚಿತ ವ್ಯಕ್ತಿಗಳು ಬಸ್ಸಿನಿಂದ ಇಳಿದು ತಪ್ಪಿಸಿಕೊಂಡವರು ರಿಕ್ಷಾ ಹತ್ತಿ ಬಳಿಕ ಬಿ.ಸಿ.ರೋಡ್ವರೆಗೆ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.








