ಜ.3-4: ಕಲ್ಮಂಜ ಸ. ದ. ಕ. ಜಿ. ಪಂ. ಹಿ. ಪ್ರಾ ಶಾಲೆಯ ಶತ ಸಂಭ್ರಮ ಕಾರ್ಯಕ್ರಮ-ಊರಿನ ದಾನಿಗಳ ಸಹಕಾರದಿಂದ ಶಾಲೆ ಅಭಿವೃದ್ಧಿ- ಪತ್ರಿಕಾಗೋಷ್ಠಿ

0

ಕಲ್ಮಂಜ: ಸರಕಾರಿ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 3, 4ರಂದು ನಡೆಯಲಿರುವ ಶತ ಸಂಭ್ರಮ ಕಾರ್ಯಕ್ರಮದ ಪತ್ರಿಕಾ ಗೋಷ್ಠಿ ಶಾಲಾ ಸಭಾಂಗಣದಲ್ಲಿ ಡಿ. 30ರಂದು ನಡೆಯಿತು.
ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ ಈ ಶಾಲೆಯಲ್ಲಿ ಅನೇಕ ಶಿಬಿರಗಳು ನಡೆದಿದೆ. ಹುಣಿಪ್ಪಾಜೆ ಗುತ್ತು ಮನೆಯ ದಿ. ಪದ್ಮಯ್ಯ ಕಂಬಳಿಯವರು ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಂಕಲ್ಪಿಸಿ ನಿಡಿಗಲ್ ಪರಿಸರದಲ್ಲಿ ಮುಳಿಹುಲ್ಲಿನ ಕುಟೀರವನ್ನು ನಿರ್ಮಿಸಿ ಶಾಲೆಯನ್ನು ಆರಂಭಿಸಿದರು.

ಪ್ರಾರಂಭದಲ್ಲಿ ಶಾಲೆಯ ಗುರುಗಳಾಗಿ ಇದ್ದವರು ದಿ. ಆದಿರಾಜ ಅಜ್ರಿ. ಅವರು ಸುಮಾರು 33 ವಷಗಳ ಕಾಲ ಗುರುಗಳಾಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದರು. 1950ರಲ್ಲಿ ದಿ. ಧರ್ಮರಾಜ ಕಡಂಬ ಹುಣಿಪ್ಪಾಜೆಗುತ್ತು ಅವರ ನೇತೃತ್ವದಲ್ಲಿ ದಿ. ರಘುನಾಥ ಪ್ರಭು ಗಣೇಶನಗರ, ದಿ. ವಾಮನ ಪ್ರಭು, ನಿಡಿಗಲ್ ಅವರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿ ಕಾರ್ಯ ಕೈಗೊಂಡರು. ಹಂಚಿನ ಕೊಠಡಿ ನಿರ್ಮಿಸಿ, ಸುಸಜ್ಜಿತ ಶಾಲೆಯ ನಿರ್ಮಾಣ ಮಾಡಿದರು. 1962ರಲ್ಲಿ ಶಾಲೆಯು ಸರಕಾರದ ಅಧೀನಕ್ಕೆ ಬಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತಿತವಾಯಿತು. 1965ರಲ್ಲಿ ಸರಕಾರ 2 ಕೊಠಡಿಗಳನ್ನು ನಿರ್ಮಾಣ ಮಾಡಿತ್ತು. 1978ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಿಸಲಾಯಿತು.

ದಿ. ಕೆ. ವಾಮನ ಕಾಮತ್‌ರವರ ಸ್ಮರಣಾರ್ಥವಾಗಿ 1 ಕೊಠಡಿ, ದಿ. ಕೆ ನಾರಾಯಣ ಕಾಮತ್ ರವರು ಕಟ್ಟಿಸಿಕೊಟ್ಟರು. 2003ರಲ್ಲಿ ಊರಿನವರ ಸತತ ಪ್ರಯತ್ನದ ಫಲವಾಗಿ ಸರಕಾರವು 8ನೇ ತರಗತಿಗೆ ಅನುಮತಿ ನೀಡಿತು. ಶಾಲೆಯ ಒಟ್ಟು 5 ಎಕ್ರೆ 49 ಸೆಂಟ್ಸ್ ಜಾಗದಲ್ಲಿ 2 ಎಕ್ರೆ 19 ಸೆಂಟ್ಸ್ ಜಾಗದಲ್ಲಿ ಸರಕಾರ ಪ್ರೌಢಶಾಲೆಗೆ ಕಟ್ಟಡ ನಿರ್ಮಾಣ ಮಾಡಿ, 2006ರಲ್ಲಿ ಜನತೆಯ ಬಹು ನಿರೀಕ್ಷಿತ ಪ್ರೌಢಶಾಲೆ ಪಾರಂಭವಾಯಿತು.

ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆಯ ಶಿಕ್ಷಕ ವೃಂದದವರು ಶ್ರಮಿಸುತ್ತಿದ್ದಾರೆ. ಪ್ರತಿಭಾ ಕಾರಂಜಿ, ಆಟೋಟ ಸ್ಪರ್ಧೆ, ಯೋಗ, ಯಕ್ಷಗಾನ ಇನ್ನಿತರ ಜೀವನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿ ಖಾಸಗಿ ಶಾಲೆಗಳು ಇದ್ದರೂ ಶಿಕ್ಷಕರು ಊರಿನವರ ಪರಿಶ್ರಮದಿಂದ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಸುಮಾರು 250ಕ್ಕಿಂತಲೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಸರಕಾರಿ ಶಾಲೆಯ ಯಶಸ್ಸಿಗೆ ಸಾಕ್ಷಿ.

ಸರಕಾರಿ ಶಾಲೆಯ ಸವಿನೆನಪು ಉಳಿಯುವ ಉದ್ದೇಶದಿಂದ ಶಾಲೆಯನ್ನು ದಾನಿಗಳ ಮತ್ತು ಊರವರ ಸಹಕಾರದಿಂದ ಅಭಿವೃದ್ಧಿ ಮಾಡಿದ್ದೇವೆ. ಶಾಸಕರ ಅನುದಾನದಲ್ಲಿ ಅತ್ಯುತ್ತಮ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ, ಗುರುವಾಯನಕೆರೆ ಎಕ್ಸೆಲ್ ಕಾಲೇಜ್ ಸುಮಂತ್ ಕುಮಾರ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಮೋಹನ್ ಕುಮಾರ್ ಉಜಿರೆ, ರಾಮಚಂದ್ರ, ಹಾಗೂ ಇತರರು ಸಹಕರಿಸಿದ್ದಾರೆ.

ಊರಿಗೂ ಶಾಲೆಗೂ ಅನನ್ಯ ಸಂಬಂಧವಿದೆ. ಊರಿನ ಜಾತ್ರೆಯಂತೆ ಮಾಡಲು ನಾವು ನಿರ್ಧರಿಸಿದ್ದೇವೆ, ಪ್ರೌಢಶಾಲೆ ಪ್ರತಿವಷ ಶೇಕಡಾ 100 ಫಲಿತಾಂಶ ಪಡೆಯುತ್ತಿದ್ದು, 2024ರಲ್ಲಿ ಶಾಲೆಯ ಎಸ್.ಎಸ್.ಎಲ್.ಸಿ. ಯ ಓರ್ವ ವಿದ್ಯಾರ್ಥಿನಿ ಜಿಲ್ಲೆಯಲ್ಲಿ 4ನೇ, ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯೊಬ್ಬ ಯೋಗದಲ್ಲಿ ರಾಷಮಟ್ಟಕ್ಕೆ ಸ್ಪರ್ಧಿಸಿ ಶಾಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿರುವುದು ಮೈಲಿಗಲ್ಲು. ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಊರಿನವರ ಭಾಗವಹಿಸುವಿಕೆ ಸ್ವಾಗತಾರ್ಹ. ಊರಿನವರ ಸಹಕಾರದೊಂದಿಗೆ ನಡೆಯುವ ಶಾಲೆಯ ಶಾರದಾ ಪೂಜೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ, ಯುವ ಸೇವಾ ಪಥ ಸಂಘಟನೆ ಶಾಲೆ ಸುಣ್ಣ ಬಣ್ಣ ಬಳಿದು ಸಹಕರಿಸಿದ್ದಾರೆ ಎಂದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಫೆರ್ನಾಂಡಿಸ್ ಮಾತನಾಡಿ ಕಾರ್ಯಕ್ರಮದಲ್ಲಿ ಜನರಿಗೆ ಮನರಂಜನೆಗೆ ಜಾತ್ರೆಯ ರೀತಿಯಲ್ಲಿ ತೊಟ್ಟಿಲು, ಉಯ್ಯಾಲೆ ಏರ್ಪಡಿಸಲಾಗಿದೆ, ಬಡತನದಿಂದ ಬರುವ ಮಕ್ಕಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ, NSS ಮುಂಡಾಜೆ ವಿದ್ಯಾರ್ಥಿಗಳು ಶಾಲೆಗೆ ತುಂಬಾ ಸಹಕಾರವನ್ನು ನೀಡಿದ್ದಾರೆ, ಶಾರದೋತ್ಸವ ಮತ್ತು ಭಜನಾ ಮಂಡಳಿಯಿಂದ ಒಂದು ಲಕ್ಷ ದೇಣಿಗಿನ್ನು ಪ್ರಥಮವಾಗಿ ನೀಡಿದ್ದು ಕೆಲಸ ಪ್ರಾರಂಭಿಸಲು ಸಹಕಾರಿಯಾಗಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಜೆ.ಪಿ. ಮಾತನಾಡಿ ಶಾಲೆಯಲ್ಲಿ 134 ವಿದ್ಯಾರ್ಥಿಗಳಿದ್ದು ಕೊಠಡಿಯ ಬೇಡಿಕೆಯನ್ನು ಇಟ್ಟಿದ್ದೇವೆ, SDMC ಮತ್ತು ಊರವರ ಸಹಕಾರದಿಂದ ಅತ್ಯುತ್ತಮವಾಗಿ ಶಾಲೆ ನಡೆಯುತ್ತಿದೆ ಎಂದರು. ಉಪಾಧ್ಯಕ್ಷ ಸೇಸಪ್ಪ ಟಿ. ಕಂದೂರು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಿದಾನಂದ, ಮಂಟಮೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಮೀದ್, ಬಿ. ಏನ್. ಶಾಲಾ ನಾಯಕ ಭವಿತ್, ಹಿರಿಯ ವಿದ್ಯಾರ್ಥಿ ಶೀನ ಅಕ್ಷಯನಗರ ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಅಕ್ಷಯನಗರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here