






ಬೆಳ್ತಂಗಡಿ: ನಾವೂರು ಗ್ರಾಮದಲ್ಲಿ ಪತಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಪತ್ನಿಯನ್ನು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಕೊಲೆ ಆರೋಪಿಯಾಗಿದ್ದ ಮಹಿಳೆ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುವ ಕಾರಣ ಆಕೆ ಅಪರಾಧಿಯಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಾಧೀಶರು ಆಕೆಯನ್ನು ನಿಮ್ಹಾನ್ಸ್ಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿ ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆಯಿಂದ ಸ್ವಂತಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಅಪಾಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಘಟನೆಯ ವಿವರ: ೨೦೨೨ರ ಜುಲೈ ೫ರಂದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ನಲ್ಲಮ್ಮ ಅಲಿಯಾಸ್ ಎಲಿಯಮ್ಸ್ (೫೬) ತನ್ನ ಗಂಡ ಬೇಬಿ ಅಲಿಯಾಸ್ ಪೊಟ್ಟಸ್ ಬೇಬಿ ಅಲಿಯಾಸ್ ಯೋಹಾನನ್ (೭೨) ಅವರನ್ನು ಮನೆಯಲ್ಲಿ ಮಲಗಿರುವಾಗ ಬೆಳಗಿನ ಜಾವ ೫.೩೦ಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ವಿಚಾರಣೆಯ ದೋಷಾರೋಪಣೆಯ ಹಂತದಲ್ಲಿ ಸಂದರ್ಭದಲ್ಲಿ ಎಲಿಯಮ್ಮ ನ್ಯಾಯಾಲಯದ ಮುಂದೆ ತಾನು ಕೊಂದಿರುವುದು ಹೌದು ಎಂದು ಒಪ್ಪಿಕೊಂಡಿದ್ದರು. ಆದರೆ ಪ್ರಕರಣ ಕೊಲೆ ಪ್ರಕರಣ ಮತ್ತು ಗಂಭೀರ ಸ್ವರೂಪದ್ದಾಗಿದ್ದರಿಂದ ನ್ಯಾಯಾಧೀಶರು ಪೂರ್ಣ ಪ್ರಮಾಣದ ಸಾಕ್ಷಿ ವಿಚಾರಣೆಯನ್ನು ನಡೆಸಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಎಲ್ಲ ಸಾಕ್ಷಿದಾರರು ಅಭಿಯೋಜನೆಯ ಪರವಾಗಿ ಸಾಕ್ಷಿ ನುಡಿದು ಆಕೆಯೇ ಕೃತ್ಯ ಎಸಗಿದ್ದಾರೆಂದು ಹೇಳಿದ್ದರು.


ಪ್ರಕರಣಕ್ಕೆ ತಿರುವು: ಪಾಟಿ ಸವಾಲು ಸಂದರ್ಭದಲ್ಲಿ ಆರೋಪಿಗೆ ದೀರ್ಘಕಾಲದ ಮಾನಸಿಕ ಆರೋಗ್ಯದ ಸಮಸ್ಯೆಗಳಿರುವುದು ಮತ್ತು ಆಕೆ ಭ್ರಮಾಧೀನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಪ್ರಬಲ ಸಾಕ್ಷ್ಯಗಳು ದೊರೆತವು. ಇದನ್ನು ಆಧರಿಸಿ ವಾದ ಮಂಡಿಸಿದ ಆಕೆಯ ಪರ ವಕೀಲರಾದ ವಿಕ್ರಮ್ರಾಜ್ ಎ., ಆರೋಪಿ ಕೃತ್ಯ ನಡೆಸಿದ್ದು ಹೌದಾದರೂ ಮಾನಸಿಕ ಅಸ್ವಾಸ್ಞ್ಥದಿಂದ ಬಳಲುತ್ತಿದ್ದ ಕಾರಣ ಆಕೆಗೆ ತಾನು ತಪ್ಪು ಮಾಡುತ್ತಿzನೆ ಎನ್ನುವ ಅರಿವಿಲ್ಲದ ಕಾರಣ ಕಾನೂನು ರೀತ್ಯ ಆಕೆ ಅಪರಾಧ ಎಸಗಿಲ್ಲ. ಆಕೆಗೆ ಕಾನೂನಿನ ರಕ್ಷಣೆ ಇದೆ ಎಂದು ಬಲವಾಗಿ ಪ್ರತಿಪಾದಿಸಿದರು. ಡಿ. ೨೩ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಎಲಿಯಮ್ಮ ತನ್ನ ಗಂಡನನ್ನು ಕೊಂದಿರುವುದು ಸಾಬೀತಾಗಿದೆ.
ಆದರೆ ಕೃತ್ಯ ಎಸಗುವಾಗ ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಮತ್ತು ಕೃತ್ಯದ ಸರಿ ತಪ್ಪಿನ ಅರಿವಿಲ್ಲದೆ ಇದನ್ನು ಮಾಡಿರುವುದರಿಂದ ಆಕೆಯನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಆದೇಶಿಸಲಾಗಿದೆ. ಇದೇ ವೇಳೆ ಆರೋಪಿಯನ್ನು ನಿಮ್ಹಾನ್ಸ್ಗೆ ಕರೆದೊಯ್ಯುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಿದ ನ್ಯಾಯಾಧೀಶರು ಆಕೆಯನ್ನು ಪರೀಕ್ಷೆಗೆ ಒಳಪಡಿಸಿ ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆಯಿಂದ ಸ್ವಂತಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಅಪಾಯವಿದೆಯೇ ಎಂದು ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯ ಪರವಾಗಿ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ. ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.








