ಬೆಳ್ತಂಗಡಿ: ನ್ಯಾಯಾಲಯದಲ್ಲಿ ಲೋಕ ಅದಾಲತ್- 409 ಪ್ರಕರಣ ಇತ್ಯರ್ಥ-ರೂ.1.61ಕೋಟಿ ಪರಿಹಾರ ವಿತರಣೆಗೆ ಆದೇಶ

0

ಬೆಳ್ತಂಗಡಿ: ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತು ನ್ಯಾಯಾಲಯಕ್ಕೆ ದಾಖಲಾಗದೇ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಡಿ.13ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 721 ಪ್ರಕರಣಗಳಲ್ಲಿ 409 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ರೂ.1,61,46,019 ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿದೆ.

ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ, ಚೆಕ್‌ಬೌನ್ಸ್, ಮೋಟಾರ್ ಪ್ರಕರಣ, ಬ್ಯಾಂಕ್ ಪ್ರಕರಣ ಹಾಗೂ ಇತರ ಸಣ್ಣ ಪುಟ್ಟ ಪ್ರಕರಣ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.

ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರ ನ್ಯಾಯಾಲಯದಲ್ಲಿ 199 ಪ್ರಕರಣಗಳಲ್ಲಿ 112 ಪ್ರಕರಣ ಇತ್ಯರ್ಥಗೊಂಡಿದ್ದು ರೂ. 1,40,72,103 ಪರಿಹಾರ ವಿತರಣೆಗೆ ಆದೇಶ ಆಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಹೆಚ್ ಅವರ ನ್ಯಾಯಾಲಯದಲ್ಲಿ ೫೨೨ ಪ್ರಕರಣಗಳಲ್ಲಿ 297 ಪ್ರಕರಣ ಇತ್ಯರ್ಥಗೊಂಡಿದ್ದು ರೂ. 2073196 ಪರಿಹಾರ ವಿತರಣೆಗೆ ಆದೇಶ ಆಗಿದೆ. ಸಹಾಯಕ ಸರಕಾರಿ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ ಪುತ್ತೂರು ಮತ್ತು ಆಶಿತಾ ಉಪಸ್ಥಿತರಿದ್ದರು. ಪ್ರಕರಣ ಇತ್ಯರ್ಥಕ್ಕೆ ವಕೀಲ ಸಂಧಾನಕಾರರಾಗಿ ನ್ಯಾಯವಾದಿ ದಕ್ಷ ಜೈನ್ ಹಾಗೂ ಶಶಿಧರ ಅವರು ಸಹಕರಿಸಿದರು.

LEAVE A REPLY

Please enter your comment!
Please enter your name here