ನ.20ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

0

ಬೆಳ್ತಂಗಡಿ: ಚಾರಣಪ್ರಿಯರಿಗೆ ನ.20ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ಕಾಡಿಚ್ಚು ಭಯ, ಮಳೆಗಾಲ ಇತ್ಯಾದಿ ಕಾರಣಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಪ್ರಸ್ತುತ ಮಳೆ ಕಡಿಮೆಯಾಗಿದ್ದು, ಇದೀಗ ಮತ್ತೆ ಅವಕಾಶ ಕಲ್ಪಿಸಲಾಗಿದೆ.

ನೂರಾರು ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ ಬಂಡಾಜೆ ಜಲಪಾತ ಪ್ರದೇಶಕ್ಕೆ ಬೆಳ್ತಂಗಡಿ ತಾಲೂಕಿನ ಕಡಿರು ದ್ಯಾವರದಿಂದ ಚಾರಣದ ಮೂಲಕ ತಲುಪಬಹುದು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ವ್ಯಾಪ್ತಿಯಲ್ಲಿರುವ ಈ ಜಲಪಾತಕ್ಕೆ ಹೋಗ ಬೇಕಾದರೆ 11 ಕಿ.ಮೀ. ದೂರವನ್ನು ಚಾರಣದ ಮೂಲಕವೇ ತಲುಪಬೇಕು.

ಕಡಿರುದ್ಯಾವರದಿಂದ ಕಡಿದಾದ ಹಾದಿ, ಜಾರುವ ಬಂಡೆಗಳು, ಅರಣ್ಯ ಪ್ರದೇಶ, ಸುತ್ತಲೂ ಬೆಳೆದಿರುವ ಮುಳಿ ಹುಲ್ಲು, ಪೊದೆಗಳು ಅಲ್ಲಲ್ಲಿ ಹರಿಯುವ ನೀರು, ಇಂಬಳಗಳ ಕಾಟದೊಂದಿಗೆ ಚಾರಣ ನಡೆಸಿ ಆಕರ್ಷಕವಾದ ಬಂಡಾಜೆ ತಲುಪಬಹುದು. ಜಲಪಾತವನ್ನು ರಮಣೀಯವಾದ ಈ ಜಲಪಾತ ವೀಕ್ಷಣೆಗೆ ತೆರಳುವ ವೇಳೆ ಕಾಡಾನೆ ಸಹಿತ ಇತರ ವನ್ಯಜೀವಿಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅತಿ ಅಗತ್ಯ. ಜಲಪಾತಕ್ಕೆ ತೆರಳುವ ದಾರಿಯ ಮಾಹಿತಿ ಇರುವ ಸ್ಥಳೀಯರು ಜತೆಗಿದ್ದರೆ ತಲುಪುವುದು ಸುಲಭ. ಚಾರಣದ ವೇಳೆ ಒಂದಿಷ್ಟು ದಾರಿ ತಪ್ಪಿದರೂ ಯಾವುದೇ ಮೊಬೈಲ್ ನೆಟ್ವಕ್೯ ಇಲ್ಲದ ಈ ಪರಿಸರದಲ್ಲಿ ಅಲೆಯ ಬೇಕಾಗಬಹುದು. ಈ ಹಿಂದೆ ಇಂತಹ ಹಲವಾರು ಪ್ರಕರಣಗಳು ನಡೆದಿವೆ.

ಚಾರ್ಮಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಈ ಜಲಪಾತಕ್ಕೆ ಕೊಟ್ಟಿಗೆಹಾರದ ಮೂಲಕವೂ ಹೋಗಬಹುದು. ಈ ಭಾಗದಿಂದ ಯಾವುದೇ ಪ್ರವೇಶ ನಿಷೇಧ ಇರಲಿಲ್ಲವಾದ ಕಾರಣ ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ.ಆದರೆ ಕಡಿರುದ್ಯಾವರದ ಮೂಲಕ ಚಾರಣ ನಡೆಸಿ ಜಲಪಾತ ವೀಕ್ಷಿಸುವ ಆನಂದ ಇಲ್ಲಿ ಸಿಗುವುದು ಕಡಿಮೆ.

LEAVE A REPLY

Please enter your comment!
Please enter your name here