
ಬೆಳ್ತಂಗಡಿ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರಿಗೆ ‘ಶಿಕ್ಷಕ ರಕ್ಷಕ’ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ರವರು ಮಾತನಾಡಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮಗೆ ಎದುರಾಗುವ ಸ್ಪರ್ಧೆಯನ್ನು ಎದುರಿಸಲು ಬೇಕಾದ ತರಬೇತಿಯನ್ನು ನೀಡಿ ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವುದರ ಜೊತೆಗೆ ಈ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಲು ಅವರಲ್ಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ನಮ್ಮ ಸಂಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಪಡೆದ ಅಂಕದ ಆಧಾರದ ಮೇಲೆ ನಮ್ಮ ಸಂಸ್ಥೆಯಲ್ಲಿ ದಾಖಲಾತಿ ನೀಡುವುದಿಲ್ಲ. ಮೊದಲು ಬಂದವರಿಗೆ ಮೊದಲ ಆಧ್ಯತೆ ಎಂಬಂತೆ ಸಂಸ್ಥೆಗೆ ಬಂದಂತಹ ಎಲ್ಲ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿ ಅವರನ್ನು ಉತ್ತಮ ಸಾಧನೆಗೈಯುವಂತೆ ಮಾಡುತ್ತಿದ್ದೇವೆ.
ಪೋಷಕರ ಸಹಕಾರ ಇದ್ದರೆ ನಿಮ್ಮ ಮಕ್ಕಳ ಭವಿಷ್ಯ ಉತ್ತಮ ರೀತಿಯಲ್ಲಿ ರೂಪಿಸಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಹಣವನ್ನು ನೀಡಬೇಡಿ. ನೀವು ಹೆಚ್ಚಾಗಿ ಹಣ ನೀಡಿದರೆ ಅದನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳುತ್ತಾರೆ.
ನಾವಾಗಿಯೇ ಇಂತಹ ಕಾರ್ಯಗಳಿಗೆ ಅವಕಾಶ ಕಲ್ಪಿಸಿಕೊಡಬಾರದೆಂದು ವಿದ್ಯಾರ್ಥಿಗಳ ಪೋಷಕರಿಗೆ ಕಿವಿಮಾತನ್ನು ಹೇಳಿದರು.
ವಿದ್ಯಾರ್ಥಿಗಳಿಗೆ ಒತ್ತಡ ಹೇರಬೇಡಿ: ಕಾರ್ಯಕ್ರಮದಲ್ಲಿ ಕಾಲೇಜಿನ ಮತ್ತೋರ್ವ ಟ್ರಸ್ಟಿ ಶರತ್ ಗೋರೆ ಮಾತನಾಡಿ, ಪ್ರೌಢ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅಡಿಪಾಯ ಸಿಗದೇ ಇದ್ದಾಗ ಪಿಯು ಶಿಕ್ಷಣದ ಆರಂಭದ ಪರೀಕ್ಷೆಗಳಲ್ಲಿ ಅಂಕಗಳು ಕಡಿಮೆ ಬರುವುದು ಸಹಜ ಇಂತಹ ಸಂದರ್ಭದಲ್ಲಿ ಪೋಷಕರು ವಿದ್ಯಾರ್ಥಿಗಳಿಗೆ ಒತ್ತಡ ಹೇರದೆ ಪ್ರೀತಿ ಮತ್ತು ಕಾಳಜಿಯಿಂದ ವರ್ತಿಸಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ ಆ ಮೂಲಕ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ಕಠಿಣ ಶ್ರಮದಿಂದ ಉತ್ತಮ ಅಂಕಗಳನ್ನು ಪಡೆಯುವಂತೆ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಟ್ರಸ್ಟಿ ಚಂದ್ರಶೇಖರ್ ರಾಜೆ ಅರಸ್ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಛಲ ಬಿಡದೇ ಅಧ್ಯಯನದಲ್ಲಿ ತೊಡಗಿದರೆ ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರೊಂದಿಗೆ ಪೋಷಕರ ಸಹಕಾರವೂ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್, ಸುಭಾಷ್ ಝಾ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ನಿರ್ವಹಿಸಿದರು.