
ಬೆಳ್ತಂಗಡಿ: ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಮಾತ್ರ ಅವಲಂಬಿಸದೆ ಸೃಜನಾತ್ಮಕ ಹಾಗೂ ತಾರ್ಕಿಕ ಚಿಂತನಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಯುಐಪಾತ್ ಆಟೋಮೆಷನ್ ಡೆವಲಪರ್ ಜಿಬಿನ್ ಟಿ.ವಿ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ ಐಟಿ ಕ್ಲಬ್ ನ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಇಂಡಸ್ಟ್ರಿ ಟ್ರೆಂಡ್ಸ್’ ಎಂಬ ವಿಷಯದ ಕುರಿತು ಮಾತನಾಡುತ್ತಾ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎ ಐ) ಆಧುನಿಕ ಕಾರ್ಪೊರೇಟ್ ಕ್ಷೇತ್ರದಲ್ಲಿ ಅಥವಾ ಕೈಗಾರಿಕೆಗಳಲ್ಲಿ ಹೆಚ್ಚೆಚ್ಚು ಉದ್ಯೋಗವಕಾಶಗಳನ್ನು ನೀಡಲು ಸಹಕಾರಿಯಾಗುತ್ತದೆ. ಕಂಪ್ಯೂಟರ್ ಸೈನ್ಸ್ ನ ಮೂಲಭೂತ ಮಹತ್ವವನ್ನು ತಿಳಿದು, ಅದರಲ್ಲಿ ವಿಶೇಷವಾದ ಜ್ಞಾನವನ್ನು ಗಳಿಸಿ, ಉತ್ತಮ ಉದ್ಯೋಗವನ್ನು ಪಡೆದುಕೊಂಡು ಇಲ್ಲವೇ ಉದ್ಯಮಗಳನ್ನು ಪ್ರಾರಂಭಿಸಿ ಸ್ವಾಭಿಮಾನದ ಜೀವನ ನಡೆಸಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸುಧೀರ್ ಕೆ ಎನ್, ಐಟಿ ಕ್ಲಬ್ ನ ಸಂಯೋಜಕರಾದ ಶ್ರೀಮತಿ ಕಾಮಾಕ್ಷಿ, ದೀಕ್ಷಿತಾ, ವಿದ್ಯಾರ್ಥಿ ಪ್ರತಿನಿಧಿ ಅನ್ವಿತಾ ಉಪಸ್ಥಿತರಿದ್ದರು.
ಸಪ್ತಮಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ನಿಶಿತಾ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ವಿಜೇತರ ವಿವರ ನೀಡಿದರು.
ಜಯಂತ್ ಸ್ವಾಗತಿಸಿದರು. ಸಮೀಕ್ಷಾ, ನಿಶ್ಮಿತಾ, ರೆನ್ವಿಟಾ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ ಧನ್ಯವಾದವಿತ್ತರು.