
ಉಜಿರೆ: ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ದಾಖಲಾದ ಕೇಸ್ ಹಿನ್ನೆಲೆಯಲ್ಲಿ ಆ.21ರ ಬೆಳಗ್ಗೆ ಉಡುಪಿ ಪೊಲೀಸರು ಉಜಿರೆಗೆ ಬಂದು ಮಹೇಶ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ.
ಈ ವೇಳೆ ಮಹೇಶ್ ಶೆಟ್ಟಿ ಪರ ವಕೀಲರು ಪೊಲೀಸರನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದಾಗ ವಿಸ್ತೃತ ಚರ್ಚೆ ನಡೆದಿದೆ. ಗಿರೀಶ್ ಮಟ್ಟಣ್ಣನವರ್ ಕೂಡ ಪೊಲೀಸೆರನ್ನು ಪ್ರಶ್ನಿಸಿದ್ದಾರೆ. ನಂತರ ಬಹಳ ಕಾಲ ತಿಮರೋಡಿ ಮನೆಯಲ್ಲಿ ಹೈಡ್ರಾಮ ನಡೆದು, ಅಂತಿಮವಾಗಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ.
ಬಿ.ಎಲ್. ಸಂತೋಷ್ ವಿರುದ್ಧ ತಿಮರೋಡಿ ಹೇಳಿದ್ದೇನು? ವೈಯಕ್ತಿಕ ನಿಂದನೆ ಮಾಡಿದ್ದ ತಿಮರೋಡಿ- ಬಂಧನಕ್ಕೆ ಇದುವೇ ಕಾರಣ
ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್ ಯಾರೆಂದೇ ಗೊತ್ತಿಲ್ಲ. ನಾನು ಸಂಘಟನೆ ಮಾಡುವಾಗ ಎಲ್ಲಿದ್ದರು ಎನ್ನುವುದೇ ಗೊತ್ತಿಲ್ಲ. ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಸಂತೋಷ್‌ರಿಂದಲೇ ರಾಜ್ಯದಲ್ಲಿ ಬಿಜೆಪಿ ಸತ್ತು ಹೋಗಿದೆ, ಸೌಜನ್ಯಳ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಚಾವ್ ಮಾಡಲು ರಾಜಕೀಯದ ಒಳಗೆ ತಂದಿದ್ದು ಇದೇ ಸಂತೋಷ್ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ ಮಾಡಿದ್ದರು.
ದ.ಕ ಜಿಲ್ಲೆಯ ಬಿಜೆಪಿ ಇಂದು ಅಧರ್ಮಕ್ಕೆ ಕೈ ಹಾಕಿದೆ. ಹಿಂದುತ್ವದ ಬಗ್ಗೆ ನಮಗೆ ಬೋಧನೆ ಮಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ತಿಮರೋಡಿ ಕಿಡಿಕಾರಿದರು. ಅವರಂತಹ ವಿಘ್ನ ಸಂತೋಷಿಗಳನ್ನು ಎಷ್ಟೋ ನೋಡಿದ್ದೇನೆ. ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಸೌಜನ್ಯಳಿಗೆ ಆದ ರೀತಿ ಆದರೆ ಒಪ್ಪುತ್ತೀರಾ? ಆರ್‌ಎಸ್‌ಎಸ್‌ಗೆ ಹಿಂದೂ ಸಮಾಜಕ್ಕೆ ನಿಮ್ಮಿಂದ ಭಂಗ ಆಗುತ್ತಿದೆ ಎಂದು ತಿಮರೋಡಿ ಟೀಕಿಸಿದ್ದಾರೆ.
ನಮ್ಮ ರಕ್ತ ಹಿಂದೂ ರಕ್ತ. ಸೌಜನ್ಯಳ ಮೃತದೇಹ ಇಟ್ಟು ಕಾಯುವಾಗ ಆಗಿನ ಶಾಸಕ, ಸಂಸದ, ಮಹಿಳಾ ಹೋರಾಟಗಾರ್ತಿ ಶೋಭಾ ಕರಂದ್ಲಾಜೆ, ಸಿ ಟಿ ರವಿ ಎಲ್ಲಿದ್ದರು? ಧರ್ಮಸ್ಥಳದಲ್ಲಿ ಯಾರೇ ಅವಿವೇಕಿ ಅಧರ್ಮದ ಬಗ್ಗೆ ಮಾತನಾಡಿದರೆ ಉತ್ತರ ಕೊಡುವವನು ಮಹೇಶ್ ತಿಮರೋಡಿ ಎಂದು ತಿಳಿಸಿದರು. ಹಿಂದೂ ಜಾಗರಣಾ ವೇದಿಕೆ ಎಂಬುದಿದ್ದರೆ ಅದಕ್ಕೆ ಕಾರಣೀಕರ್ತರು ನಾವು. ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆ ಒಟ್ಟಾಗಿರುವಾಗ ನಾವು ಹೋರಾಟ ಮಾಡುತ್ತಿದ್ದೆವು. ವಸಂತ ಬಂಗೇರರು ಬಿಜೆಪಿಯ ಶಾಸಕರಾಗಿದ್ದಾಗ ಇವರುಗಳ ತುಳಿತ ನೋಡಿ ಬೇರೆ ಪಕ್ಷದ ಶಾಸಕರಾದರು. ಅವರು ಹೋದ ನಂತರ ಬಿಜೆಪಿ ತಲೆ ಎತ್ತಿ ನಿಲ್ಲಿಲ್ಲ. ೧೯೯೨ರಿಂದ ಅಯೋಧ್ಯೆ ಘಟನೆಯ ಸಂದರ್ಭದಲ್ಲಿ ಹಿಂದೂ ಸಂಘಟನೆ ಕಟ್ಟಲು ನಿರ್ಧಾರ ಮಾಡಿದ್ದೆ. ಕಾಗದದ ರೂಪದಲ್ಲಿ ಹಿಂದೂ ಜಾಗರಣಾ ವೇದಿಕೆ ತಂಡ ಇತ್ತು. ಆಗ ನಾನು ಬೆಳ್ತಂಗಡಿ ಸಂಚಾಲಕನಾಗಿ ಇಡೀ ರಾಜ್ಯಾದ್ಯಂತ ಹಿಂದೂ ಜಾಗರಣಾ ವೇದಿಕೆ ಇದೆ ಎನ್ನುವುದನ್ನು ತೋರಿಸಿಕೊಟ್ಟೆ. ನಾನು ೨೨ ವರ್ಷ ಕೆಲಸ ಮಾಡಿzನೆ. ಈಗ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯಾಗಿ ಮಾರ್ಪಡಿಸಿ ಕೆಲಸ ಮಾಡುತ್ತಿದ್ದೇನೆ ಎಂದು ವಿವರಿಸಿದ್ದರು
ತಿಮರೋಡಿ ವಿರುದ್ಧ ಕೇಸು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ. ೧೬ರಂದು ಫೇಸ್‌ಬುಕ್ ಪೇಜ್‌ನಲ್ಲಿ ವೀಡಿಯೋ ಮಾಡಿ ಪಕ್ಷದ ಹಿರಿಯರು, ಹಿಂದೂ ಧರ್ಮದ ನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇಷ ಭಾವನೆ ಉಂಟು ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಗ್ರಾಮಾಂತರ ಬಿಜೆಪಿಯ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.