
ಬೆಳ್ತಂಗಡಿ: ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆ.15ರಂದು ಶಾಸಕ ಹರೀಶ್ ಪೂಂಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದ್ವಜಾರೋಹಣೆಯನ್ನು ತಾಲೂಕು ದಂಡಾಧಿಕಾರಿ ಪೃಥ್ವಿ ಸಾನಿಕಂ ನೆರವೇರಿಸಿದರು.
ಪ್ರಧಾನ ಭಾಷಣಕಾರರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಕುಶಾಲಪ್ಪ ಎಸ್. ಮಾತನಾಡಿ, ಇಂದು ಭಾರತ ದೇಶವು ವಿಶ್ವದ 4ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿರುವುದು ಭಾರತದ ಸದೃಢ ಆರ್ಥಿಕ ನೀತಿಗಳಿಗೆ ಸಾಕ್ಷಿಯಾಗಿದೆ. ಕೆಲವೇ ವರ್ಷಗಳಲ್ಲಿ ವಿಶ್ವದ ದೊಡ್ಡಣ್ಣ ಆಗುವುದಕ್ಕೆ ಸಂಶಯವಿಲ್ಲ. ಡಿಮಾನಿಟೈಸೇಶನ್ ಪರಿಣಾಮದಿಂದ ಅರ್ಧ ಪಾಕಿಸ್ತಾನ ದಿವಾಳಿಯಾಗಿದೆ. ಪ್ರಧಾನಿಯವರ ಮೇಕ್ ಇನ್ ಇಂಡಿಯಾ ದಂತಹ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದು ಭಾರತ ದೇಶವು ಎಲ್ಲಾ ರಂಗದಲ್ಲಿ ಮುನ್ನುಗ್ಗಲು ಸಹಾಯಕವಾಗಿದೆ. ಸದೃಢ ಮಿಲಿಟರಿ ಸೇನೆಯನ್ನು ಹೊಂದಿರುವ ನಮ್ಮ ದೇಶದ ಮಿಲಿಟರಿ ಶಕ್ತಿಗೆ ಜಗತ್ತು ಬೆಚ್ಚಿ ಬೀಳುತ್ತಿದೆ ಎಂದು ಹೇಳಿ ಶುಭಹಾರೈಸಿದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಆಪರೇಷನ್ ಸಿಂಧೂರದ ಮೂಲಕ ಜಗತ್ತಿನೆದುರು ಭಾರತ ದೇಶ ತನ್ನ ಮಿಲಿಟರಿ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆರ್ಥಿಕತೆಯಲ್ಲಿ ನಮ್ಮ ದೇಶ ಮುನ್ನುಗ್ಗುತ್ತಿದ್ದು ಜಗತ್ತಿಗೆ ದೊಡ್ಡಣ್ಣನಾಗಲು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಭಾರತ ದೇಶದ ಏಳಿಗೆಗೆ ಶಕ್ತಿ ತುಂಬಬೇಕು ಎಂದು ಹೇಳಿ ಶುಭ ಹಾರೈಸಿದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಆರಕ್ಷಕ ಹಾಗೂ ಗೃಹ ರಕ್ಷಕ ದಳ, ಎನ್ ಸಿಸಿ, ಸೌಟ್ಸ್ ಆ್ಯಡ್ ಗೈಡ್ಸ್, ಬುಲ್ ಬುಲ್, ಬ್ಯಾಂಡ್ ಸೆಟ್ ಮೂಲಕ ಆಕರ್ಷಕ ಪಥ ಸಂಚಲನ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಎನ್. ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ರಾಜೇಶ್ ನಿರೂಪಿಸಿದರು.