ಬೆಳ್ತಂಗಡಿ: ನನಗುದಿಗೆ ಬಿದ್ದಿದ್ದ ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ ಕಾಮಗಾರಿ ಬಹಳ ದಿನಗಳ ಬಳಿಕ ಮರು ಆರಂಭಗೊಂಡಿದೆ. ಏಳು ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಸೇತುವೆ ನಿಧಾನಗತಿಯ ಕಾಮಗಾರಿಯಿಂದಾಗಿ ಇನ್ನೂ ಪೂರ್ಣಗೊಂಡಿರದ ಕಾರಣ ಕಳೆದ ಮಾ.೨೭ರಂದು ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಸೇತುವೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ಶೀಘ್ರ ಪೂರ್ಣಕ್ಕೆ ಸೂಚನೆ ನೀಡಿದ್ದರು. ಆದರೆ ಆಗ ಸ್ಥಗಿತಗೊಂಡಿದ್ದ ಕಾಮಗಾರಿ ದಿನ ಕಳೆದರೂ ಆರಂಭಗೊಂಡಿರಲಿಲ್ಲ. ಈ ನಡುವೆ ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ ಹೋರಾಟ ಸಮಿತಿ ಹಾಗೂ ಸರಪಾಡಿ ರೈತ ಸಂಘದವರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಅಜಿಲಮೊಗರು ಮಸೀದಿಯ ಮುಂಭಾಗದಿಂದ ಮತ್ತು ಕಡೇಶ್ವಾಲ್ಯ ಶ್ರೀ ಲಕ್ಷ್ಮಿ ಪರಸಿಂಹ ದೇವಸ್ಥಾನ ಸಂಪರ್ಕಿಸುವ ನಿಟ್ಟಿನಲ್ಲಿ ಜೀವನದಿ ನೇತ್ರಾವತಿ ನದಿಗೆ ಸೇತುವೆ ಮತ್ತು ಸಂಪರ್ಕ ರಸ್ತೆಯ ಸೌಹಾರ್ದ ಸೇತುವೆ ಕಾಮಗಾರಿ ಕನಸು ನನಸಾಗದೆ ನಿರಾಸೆ ಮೂಡಿಸಿತ್ತು.
ಸೌಹಾರ್ದ ಸೇತುವೆ: ಸೌಹಾರ್ದ ಸೇತುವೆ ಮತ್ತು ಸಂಪರ್ಕ ರಸ್ತೆ ಯೋಜನೆಗೆ ನೀಲನಕಾಶೆ ಸಿದ್ಧಗೊಂಡು ೨೦೧೭ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯಾಗಿದ್ದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ ಡಿಸಿಎಲ್)ದಿಂದ ೧೯.೮೪ ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು. ಅಜಿಲಮೊಗರಿನಿಂದ ಕಡೇಶ್ವಾಲ್ಯಕ್ಕೆ ಒಟ್ಟು ೩೧೨ ಮೀ. ಉದ್ದ ಮತ್ತು ೧೦.೫೦ ಮೀ. ಅಗಲದ ಸೇತುವೆ ಜತೆಗೆ ಒಟ್ಟು ೩೭೮ ಮೀ. ಉದ್ದದ ಸಂಪರ್ಕ ರಸ್ತೆ ಕಾಮಗಾರಿಯನ್ನು ಚೆನ್ನೈಯ ಕಂಪೆನಿಗೆ ಗುತ್ತಿಗೆ ವಹಿಸಲಾಗಿತ್ತು. ೨೦೨೧ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಒಪ್ಪಂದ ಮಾಡಲಾಗಿತ್ತು. ಪ್ರಸ್ತುತ ಎರಡು ಪಿಆರ್(ಫೌಂಡೇಶನ್ ಸಹಿತ ಪಿಲ್ಲರ್) ಬಾಕಿ ಉಳಿದಿದ್ದು ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಹಲವರು ವಿವಿಧ ಜನಪ್ರ ತಿನಿಧಿಗಳನ್ನು ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು. ಬಳಿಕ ದ.ಕ.ಜಿಲ್ಲಾಧಿಕಾರಿ ಅವರು ಭೇಟಿ ನೀಡಿದಾಗ ಸೇತುವೆ ಪಿಲ್ಲರ್ ನಿರ್ಮಾಣ ಕಾಮಗಾರಿಗೆ ನದಿ ನೀರು ಅಡ್ಡಿಯಾಗುತ್ತಿರುವುದಾಗಿಯೂ, ಕೆಲವೊಂದು ಹೆಚ್ಚುವರಿ ಯಂತ್ರೋಪಕರಣಗಳ ಅಗತ್ಯ ಇರುವುದಾಗಿಯೂ ತಿಳಿಸಿದ್ದರು. ಹೆಚ್ಚುವರಿ ಮೊತ್ತ ಅನುದಾನ ಅವಶ್ಯಕವಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಡಿ.ಸಿ. ತಿಳಿಸಿದ್ದರು. ಇದೀಗ ಕೆಆರ್‌ಡಿಸಿಎಲ್‌ನಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಜತೆಗೆ ಬೇರೆ ಕಂಪೆನಿಯಿಂದ ಯಂತ್ರೋಪಕರಣಗಳನ್ನು ತರಿಸಿರುವುದಾಗಿ ಸಂಸ್ಥೆಯ ಅಭಿಯಂತರರು ತಿಳಿಸಿದ್ದಾರೆ. ಸ್ಥಳಕ್ಕೆ ಬೃಹತ್ ಕ್ರೇನ್‌ಗಳು ಆಗಮಿಸಿದ್ದು ಸೇತುವೆ ಮೇಲಿನ ಬೀಮ್‌ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ನದಿಯಲ್ಲಿ ನೀರಿದ್ದರೂ ಆಧುನಿಕ ತಂತ್ರಜ್ಞಾನದಿಂದ ಪಿಲ್ಲರ್ ನಿರ್ಮಾಣದ ಕಾರ್ಯ ಆರಂಭಿಸಲಾಗುವುದು, ಮಳೆಗಾಲದ ಮುಂಚೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.