ಬೆಳ್ತಂಗಡಿ: ವಾರದ ಸಂತೆಯನ್ನು ಏಲಂ ಮುಖಾಂತರ ಪಡೆದುಕೊಂಡವರು ಗ್ರಾಮ ಪಂಚಾಯತಿ ಕಚೇರಿ ವ್ಯಾಪ್ತಿಯ ಆನೆಮಹಲ್ ಎಂಬಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವ ಎಲ್ಲಾ ವ್ಯಾಪಾರಸ್ಥರಿಂದ ಶುಲ್ಕ ವಸೂಲಾತಿ ಮಾಡಲು ಅವಕಾಶ ನೀಡಿ ೨೦೨೪ರ ಜುಲೈ ೧೮ರಂದು ಅಳದಂಗಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ೧೧/೨೦೨೪-೨೫ರಂತೆ ಕೈಗೊಂಡ ನಿರ್ಣಯವನ್ನು ಅಮಾನತುಗೊಳಿಸಿ ಬೆಳ್ತಂಗಡಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಗ್ರಾ.ಪಂ. ಸದಸ್ಯ ಪ್ರಶಾಂತ್ ವೇಗಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿ ಈ ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ಪ್ರತಿವಾದಿಗಳಾಗಿದ್ದರು.
ಆಡಳಿತಾಧಿಕಾರಿಯವರ ಆದೇಶದ ಹಿನ್ನೆಲೆ: ಬೆಳ್ತಂಗಡಿ ತಾಲೂಕು ಅಳದಂಗಡಿ ಗ್ರಾಮ ಪಂಚಾಯತ್ ದಿನಾಂಕ ೧೮.೦೭.೨೦೨೪ರ ನಿರ್ಣಯ ನಂಬ್ರ ೧೧/೨೦೨೪-೨೫ರಂತೆ ವಾರದ ಸಂತೆಯನ್ನು ಏಲಂ ಮುಖಾಂತರ ಪಡೆದುಕೊಂಡವರು ಗ್ರಾಮ ಪಂಚಾಯತಿ ಕಚೇರಿ ವ್ಯಾಪ್ತಿಯ ಆನೆಮಹಲ್ ಎಂಬಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವ ಎಲ್ಲಾ ವ್ಯಾಪಾರಸ್ಥರಿಂದ ಶುಲ್ಕ ವಸೂಲಾತಿ ಮಾಡಲು ಅವಕಾಶ ನೀಡಿ ಕೈಗೊಂಡ ನಿರ್ಣಯದ ವಿರುದ್ಧ ಬಾಧಿತರಾಗಿ ಗ್ರಾ.ಪಂ. ಸದಸ್ಯ ಪ್ರಶಾಂತ್ ವೇಗಸ್ ಅವರು ತಾಲೂಕು ಪಂಚಾಯತ್ ಆಡಳಿತಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಿದ್ದರು. ದಿನಾಂಕ ೧೮.೦೭.೨೦೨೪ರಂದು ಕೈಗೊಂಡಿರುವ ಪ್ರಶ್ನಿತ ನಿರ್ಣಯವನ್ನು ರದ್ದುಪಡಿಸಿ ಸಂತೆ ಮಾರುಕಟ್ಟೆ ಹೊರತುಪಡಿಸಿ ಸಂತೆ ಮಾರುಕಟ್ಟೆಯ ಹೊರಗಡೆ ತಾತ್ಕಾಲಿಕ ವ್ಯಾಪಾರಿಗಳಿಂದ ಸುಂಕ ವಸೂಲಿಯನ್ನು ಈ ಹಿಂದೆ ಕೈಗೊಂಡಿದ್ದ ನಿರ್ಣಯದಂತೆ ಗ್ರಾಮ ಪಂಚಾಯತಿಗೆ ಅಧಿಕಾರ ನೀಡುವ ಬಗ್ಗೆ ಆದೇಶಿಸಲು ಅರ್ಜಿದಾರ ಪ್ರಶಾಂತ್ ವೇಗಸ್ ಮನವಿ ಮಾಡಿದ್ದರು. ಈ ಕುರಿತಂತೆ ದಿನಾಂಕ ೦೫.೧೧.೨೦೨೪, ೨೦.೧೧.೨೦೨೪ ಮತ್ತು ೧೫,೦೨.೨೦೨೫ರಂದು ವಿಚಾರಣೆ ನಡೆದಿತ್ತು. ಈ ಪ್ರಕರಣ ಒಬ್ಬ ವ್ಯಕ್ತಿಯ ಹಿತಕ್ಕಾಗಿ ನಿರ್ಣಯ ಕೈಗೊಳ್ಳಲಾಗಿರುವುದು ಕಂಡು ಬರುತ್ತದೆಯೇ? ರಮೇಶ ಸುವರ್ಣರವರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಮಹಲ್ ಎಂಬಲ್ಲಿ ಎಲ್ಲಾ ತಾತ್ಕಾಲಿಕ ವ್ಯಾಪಾರ ಮಾಡುವವರಿಂದ ಸುಂಕ ವಸೂಲಿ ಮಾಡುವುದರಿಂದ ಗ್ರಾಮ ಪಂಚಾಯತಿಗೆ ಆರ್ಥಿಕ ನಷ್ಟವುಂಟಾಗುತ್ತಿದೆಯೇ? ದಿನಾಂಕ ೧೮.೦೭.೨೦೨೪ರಂದು ನಿರ್ಣಯ ನಂಬ್ರ ೧೧/೨೦೨೪-೨೫ರಂದು ಕೈಗೊಂಡ ನಿರ್ಣಯ ಕಾನೂನು ಬಾಹಿರವಾಗಿದೆಯೇ ಎಂದು ವಿಚಾರಣೆ ನಡೆಸಲಾಗಿತ್ತು. ಒಂದನೇ ಅಂಶಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಯು ಪಾರದರ್ಶಕವಾಗಿ ಬಹಿರಂಗ ಏಲಂ ಮೂಲಕ ಪ್ರಕ್ರಿಯೆ ಕೈಗೊಳ್ಳದೆ ಏಕ ಮಾತ್ರ ಅರ್ಜಿಯನ್ನು ಪರಿಗಣಿಸಿ ಸುಂಕ ವಸೂಲಿಗೆ ಕ್ರಮ ವಹಿಸಿರುವುದನ್ನು ನೋಡಿದಾಗ ಒಬ್ಬ ವ್ಯಕ್ತಿಯ ಹಿತಕ್ಕಾಗಿ ಕೈಗೊಂಡ ನಿರ್ಣಯವಾಗಿರುತ್ತದೆ ಮತ್ತು ಪಾರದರ್ಶಕತೆ ಅನುಸರಿಸದೇ ಇರುವುದು ಕಂಡು ಬರುತ್ತದೆ.
ಎರಡನೇ ಅಂಶಕ್ಕೆ ಸಂಬಂಧಿಸಿದಂತೆ ರಮೇಶ ಸುವರ್ಣ ಇವರಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ತಾತ್ಕಾಲಿಕ ವ್ಯಾಪಾರಿಗರಿಂದ ಯಾವುದೇ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ನಡೆಸದೇ ಸುಂಕ ವಸೂಲಿ ಮಾಡುವ ಬಗ್ಗೆ ಆದೇಶಿಸಿರುವುದರಿಂದ ಗ್ರಾಮ ಪಂಚಾಯತಿಗೆ ಆರ್ಥಿಕ ನಷ್ಟವುಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮೂರನೇ ಅಂಶಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಏಲಂ/ಬಹಿರಂಗ ಹರಾಜು ಪ್ರಕ್ರಿಯೆಯ ಕಾರ್ಯವಿಧಾನದ ನಿಯಮಗಳನ್ನು ಅನುಸರಿಸದೇ/ಕೈಗೊಳ್ಳದೇ ಕೈಗೊಂಡ ನಿರ್ಣಯ ಕಾನೂನು ಬಾಹಿರವಾಗಿರುತ್ತದೆ ಎಂದು ಆಡಳಿತಾಧಿಕಾರಿಯವರು ವಿಚಾರಣೆಯಲ್ಲಿ ತಿಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ವಾದ ಪ್ರತಿವಾದ ಅಲಿಸಿದ ತಾ.ಪಂ. ಆಡಳಿತಾಧಿಕಾರಿಯವರು ಮೇಲ್ಮನವಿದಾರರ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಉಭಯತ್ರಯರ ವಾದ ಪ್ರತಿವಾದಗಳನ್ನು ಆಲಿಸಲಾಗಿದೆ. ಬೆಳ್ತಂಗಡಿ ತಾಲೂಕು ಅಳದಂಗಡಿ ಗ್ರಾಮ ಪಂಚಾಯತಿಯು ದಿನಾಂಕ ೧೮.೦೭.೨೦೨೪ರಂದು ನಿರ್ಣಯ ನಂಬ್ರ ೧೧/೨೦೨೪-೨೫ರಂತೆ ಕೈಗೊಂಡ ನಿರ್ಣಯದ ಅಮಲ್ದಾರಿಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ ಪ್ರಕರಣ ೨೩೭(೧)ರ ಪ್ರಕಾರ ಅಮಾನತುಗೊಳಿಸಿ ಆದೇಶಿಸಿದೆ ಮತ್ತು ಪ್ರಕರಣ ೨೩೭(೨)ರ ಪ್ರಕಾರ ಸದರಿ ಆದೇಶವನ್ನು ಸ್ಥಿರೀಕರಿಸುವ ಬಗ್ಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ಕಳುಹಿಸಲಾಗಿದೆ ಎಂದು ಆದೇಶ ನೀಡಿದ್ದಾರೆ.