
ಬೆಳ್ತಂಗಡಿ: ಬಜರಂಗದಳ ಮುಖಂಡರಾಗಿದ್ದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಸಮೀಪದ ಪುಳಿಮಜಲು ಎಂಬಲ್ಲಿಯ ಸುಹಾಸ್ ಶೆಟ್ಟಿ(೩೧ವ) ಅವರನ್ನು ಮೇ.೧ರಂದು ರಾತ್ರಿ ೮.೩೦ರ ವೇಳೆಗೆ ಮಂಗಳೂರು ಬಜಪೆ ಸಮೀಪದ ಕಿನ್ನಿಪದವಿನಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಎಂಟು ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಮತ್ತು ನಾಲೈದು ಕೇಸುಗಳ ಹಿನ್ನಲೆಯಲ್ಲಿ ರೌಡಿಶೀಟರ್‌ಆಗಿದ್ದ ಸುಹಾಸ್ ಶೆಟ್ಟಿ ಅವರನ್ನು ಹಿಂದಿನ ದ್ವೇಷ ಮತ್ತು ಫಾಝಿಲ್ ಹತ್ಯೆಯ ಆಕ್ರೋಶದಲ್ಲಿ ಹತ್ಯೆ ಮಾಡಿದ ಆರೋಪದಡಿ ಬಂಧಿತರಾಗಿದ್ದ ಮಂಗಳೂರು ಬಜಪೆ ಶಾಂತಿಗುಡ್ಡೆ ನಿವಾಸಿಗಳಾದ ಅಬ್ದುಲ್ ಸಫ್ಘಾನ್ (೨೯), ನಿಯಾಜ್ (೨೫), ಮೊಹಮ್ಮದ್ ಮುಸಮ್ಮೀರ್ (೩೨), ಬಾಳ ಕಳವಾರು ಕುರ್ಸುಗುಡ್ಡೆ ನಿವಾಸಿ ಕಲಂದರ್ ಶಾಫಿ (೨೯), ಬಾಳ ಗ್ರಾಮ ಮಂಗಳಪೇಟೆ ಆದಿಲ್ ಮೆಹರೂಫ್ (೨೭), ತೋಕೂರು ಗ್ರಾಮ ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (೨೮), ಚಿಕ್ಕಮಗಳೂರು ಜಿಲ್ಲೆ ಮಾವಿನಕೆರೆ ಗ್ರಾಮ ಕೋಟೆ ಹೊಳೆ ನಿವಾಸಿ ನಾಗರಾಜ್ ಎಂ. (೨೦) ಮತ್ತು ಕಳಸ ತಾಲೂಕು ರುದ್ರಪಾದೆ ನಿವಾಸಿ ರಂಜಿತ್ (೧೯)ರವರನ್ನು ಹೆಚ್ಚಿನ ತನಿಖೆಗಾಗಿ ಮೇ.೯ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿಯುತ್ತಿದೆ.
ತನಿಖೆ ಎನ್‌ಐಎಗೆ ವಹಿಸಲು ಬಿಜೆಪಿ ಸಂಸದ, ಶಾಸಕರಿಂದ ಪೊಲೀಸ್ ಕಮಿಷನರ್‌ಗೆ ಮನವಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‌ಐ ಕೈವಾಡ ಇದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಬೇಕು ಎಂದು ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ದ.ಕ.ಸಂಸದರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭಾಗಿರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು ಅವರನ್ನೊಳಗೊಂಡ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದೆ. ಮನವಿ ಸಲ್ಲಿಕೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಈ ಕೊಲೆಯ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಜಿಲ್ಲೆಯ ಶಾಸಕರು ಹಾಗೂ ಸಂಸದರು ಪೊಲೀಸ್ ಕಮೀಷನರನ್ನು ಭೇಟಿಯಾಗಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಸಾರ್ವಜನಿಕವಾಗಿ ಹಾಗೂ ನಮ್ಮಲ್ಲಿರುವ ಅನುಮಾನಗಳನ್ನು ಹೇಳಿಕೊಂಡಿದ್ದೇವೆ.
ಈ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದು ಅಂತರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಿಂದ ಹಣಕಾಸು ಪೂರೈಕೆಯಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸ್ಥಳೀಯ ಪೊಲೀಸರು ಇದನ್ನು ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೇ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಕಮಿಷನರ್ ಅವರನ್ನು ಕೋರಿzವೆ ಎಂದರು. ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಕೃತ್ಯದಲ್ಲಿ ನೇರ ಕೈವಾಡವಿರುವ ಆರೋಪಿಗಳು, ಆ ಆರೋಪಿಗಳಿಗೆ ಮನೆಯಲ್ಲಿ ಆಶ್ರಯ ನೀಡಿದವರು, ಸುಹಾಸ್ ಶೆಟ್ಟಿ ಚಲನವಲನ ಗಮನಿಸಿ ಆರೋಪಿಗಳಿಗೆ ಮಾಹಿತಿ ನೀಡಿದವರು, ವಾಹನಗಳನ್ನು ಒದಗಿಸಿದವರು, ಹಣಕಾಸು ನೆರವು ನೀಡಿದವರು ಸೇರಿ ಈ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿದವರೆಲ್ಲರನ್ನು ಶೀಘ್ರವೇ ಬಂಧಿಸಬೇಕು ಎಂದು ಸುನಿಲ್ ಕುಮಾರ್ ಒತ್ತಾಯಿಸಿದರು.
ಬಜಪೆ ಪೊಲೀಸ್ ಸ್ಟೇಷನ್ ಕಾನ್‌ಸ್ಟೇಬಲ್ ಓರ್ವರು ಹತ್ಯೆಯ ಹಿಂದೆ ಇದ್ದಾರೆ ಎಂಬ ಆರೋಪದ ಬಗ್ಗೆಯೂ ಕಮಿಷನರ್ ಅವರ ಗಮನ ಸೆಳೆದಿದ್ದೇವೆ. ಒಂದೆರಡು ದಿನಗಳಲ್ಲಿ ನಡೆದ ಕೊಲೆ ಇದಲ್ಲ. ಇದು ಪೂರ್ವನಿರ್ಧರಿತ ಕೃತ್ಯ. ಮೇಲ್ನೋಟಕ್ಕೆ ಎಂಟು ಜನ ಕೃತ್ಯ ನಡೆಸಿದಂತೆ ಕಂಡುಬಂದರೂ ೩೫ರಿಂದ ೪೦ ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಪೊಲೀಸರು ಇದರ ತನಿಖೆಯನ್ನು ಚುರುಕುಗೊಳಿಸಿ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದವರಿಗೆ ಪೊಲೀಸರ ಬಗ್ಗೆ ಭಯ ನಿರ್ಮಾಣವಾಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿzವೆ ಎಂದೂ ಸುನಿಲ್ ಕುಮಾರ್ ತಿಳಿಸಿದರು.
ಜಿಲ್ಲೆಯ ಹಿಂದೂ ಸಮಾಜ ಸುಹಾಸ್ ಕುಟುಂಬದ ಹಿಂದೆ ಇದೆ, ತನಿಖೆಯನ್ನು ಹಗುರವಾಗಿ ಪರಿಗಣಿಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಪೊಲೀಸ್ ಕಮಿಷನರ್‌ಗೆ ಎಚ್ಚರಿಕೆ ನೀಡಿದ್ದೇವೆ. ಮೂರು ನಾಲ್ಕು ದಿನ ಕಾದು, ತನಿಖೆ ಯಾವ ರೀತಿ ಸಾಗುತ್ತಿದೆ ಎಂದು ನೋಡಿಕೊಂಡು ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸುನಿಲ್ ತಿಳಿಸಿದರು.
ತನಿಖೆ ಎನ್‌ಐಎಗೆ ವಹಿಸಲು ರಾಜ್ಯಪಾಲರಿಗೆ ಮನವಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನೀಲ್ ಕುಮಾರ್ ಕಾರ್ಕಳ, ಪಕ್ಷದ ಮುಖಂಡರು ಹಾಗೂ ಮೃತ ಸುಹಾಸ್ ಅವರ ತಂದೆ, ತಾಯಿ ಹಾಗೂ ಮಾವ ಈ ವೇಳೆ ಉಪಸ್ಥಿತರಿದ್ದರು. ಈ ಮಧ್ಯೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮೇ.೧೪ರಂದು ದಸ್ತಗಿರಿ ಮಾಡಿದ್ದಾರೆ.
ಅಜರುದ್ದೀನ್ ಅಜರ್ ಅಜ್ಜು(೨೯), ಕಳವಾರು ಗ್ರಾಮ, ಮಂಗಳೂರು, ಅಬ್ದುಲ್ ಖಾದರ್ ನೌಫಲ್(೨೪), ಕಾಪು, ಉಡುಪಿ ಜಿಲ್ಲೆ ಮತ್ತು ನೌಷಾದ್ ವಾಮಂಜೂರು ನೌಷದ್ ಚೊಟ್ಟೆ ನೌಷದ್(೩೯), ಫರಂಗಿಪೇಟೆ, ಬಂಟ್ವಾಳ ತಾಲೂಕು ಇವರು ಬಂಧಿತರು. ಆರೋಪಿಗಳ ಪೈಕಿ ಅಜರುದ್ದೀನ್ ಅಜರ್ ಅಜ್ಜು ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ ೩ ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿರುತ್ತಾನೆ.
ಆರೋಪಿ ಅಬ್ದುಲ್ ಖಾದರ್ ನೌಫಲ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದನು. ಇನ್ನೋರ್ವ ಆರೋಪಿ ನೌಷದ್ ವಾಮಂಜೂರು ನೌಷದ್ ಚೊಟ್ಟೆ ನೌಷದ್ ಎಂಬಾತನು ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದಾಗಿದೆ. ಈತನು ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು ೬ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅಜರುದ್ದೀನ್ ಅಜರ್ ಅಜ್ಜು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಆರೋಪಿಗಳಾದ ಅಬ್ದುಲ್ ಖಾದರ್ ನೌಫಲ್ ಮತ್ತು ನೌಷದ್ ವಾಮಂಜೂರು ನೌಷದ್ ಚೊಟ್ಟೆ ನೌಷದ್ ಎಂಬವರನ್ನು ಹೆಚ್ಚಿನ ತನಿಖೆ ಕುರಿತು ೭ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ.
ನಳಿನ್ ಕುಮಾರ್ ಭೇಟಿ: ೧ ಲಕ್ಷ ರೂ ನೆರವು: ಸುಹಾಸ್ ಶೆಟ್ಟಿ ಅವರ ಮನೆಗೆ ಕರ್ನಾಟಕ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಮೇ. ೬ರಂದು ಭೇಟಿ ನೀಡಿ ವೈಯಕ್ತಿಕ ನೆಲೆಯಲ್ಲಿ ರೂ.ಒಂದು ಲಕ್ಷ ಆರ್ಥಿಕ ನೆರವು ನೀಡಿದರು. ಸುಹಾಸ್ ಶೆಟ್ಟಿ ಅವರ ತಂದೆ ಹಾಗೂ ತಾಯಿಯ ಜೊತೆ ಮಾತನಾಡಿ ಸಾಂತ್ವನ ಹೇಳಿದ ಕಟೀಲ್ ಅವರು ಕುಟುಂಬದ ಜೊತೆ ಸದಾಕಾಲ ಇರುವುದಾಗಿ ಭರವಸೆ ನೀಡಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸುಳ್ಯ ಮಂಡಲದ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಕಾರ್ಪೊರೇಟ್‌ರ್ ವಿಜಯಕುಮಾರ್ ಶೆಟ್ಟಿ, ಪ್ರಮುಖರಾದ ರವೀಶ್ ಶೆಟ್ಟಿ ಕಾರ್ಕಳ, ಸುದರ್ಶನ ಬಜ, ಮಾಧವ ಮಾವೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ದಿನೇಶ್ ಶೆಟ್ಟಿ ದಂಬೆದಾರ್, ಅಜಿತ್ ಶೆಟ್ಟಿ ಕಾರಿಂಜ, ಹರೀಶ್ ಕುತ್ತಾರ್, ರವಿರಾಮ ರೈ, ನಾಗೇಶ್ ಶೆಟ್ಟಿ ಕೊಡಂಗಾಯಿ, ಸತೀಶ್ ಶೆಟ್ಟಿ ಮದ್ದ, ಅಜಿತ್ ಪುತ್ತೂರು, ರಂಜಿತ್, ಸುಕೇಶ್ ಚೌಟ, ಕಾರ್ತಿಕ್ ಬಲ್ಲಾಳ್, ಶ್ಯಾಮಣ್ಣ ಶೆಟ್ಟಿ, ಹರೀಶ್ ರಾಯಿ, ಅರುಣ್ ಕುವೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.