ಬೆಳ್ತಂಗಡಿ: ಕೋಮು ದ್ವೇಷದ ಭಾಷಣ ಮಾಡಿದ್ದ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ಆನಂತರದ ಕಾನೂನು ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿರುವ ನ್ಯಾಯಪೀಠ ರಾಜ್ಯ ಸರಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಮೇ ೨೦ಕ್ಕೆ ಮುಂದೂಡಿದೆ.
ಹರೀಶ್ ಪೂಂಜರಿಂದ ಹೈಕೋರ್ಟ್ಗೆ ಅರ್ಜಿ: ಕೋಮು ದ್ವೇಷದ ಭಾಷಣ ಮಾಡಿದ್ದ ಆರೋಪದಲ್ಲಿ ತನ್ನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಆನಂತರದ ಕಾನೂನು ಪ್ರಕ್ರಿಯೆ ರದ್ದತಿ ಕೋರಿ ಶಾಸಕ ಹರೀಶ್ ಪೂಂಜ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿರುವ ನ್ಯಾಯಪೀಠ ರಾಜ್ಯ ಸರಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ತೆಕ್ಕಾರುವಿನ ಎಸ್.ಬಿ.ಇಬ್ರಾಹಿಂ ಎಂಬವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದರ ಬೆನ್ನಿಗೇ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಅ ಬಳಿಕದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಶಾಸಕ ಹರೀಶ್ ಪೂಂಜ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹರೀಶ್ ಪೂಂಜ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಅವರ ಪರ ವಕೀಲರು ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಏಕಸದಸ್ಯ ರಜಾಕಾಲೀನ ಪೀಠಕ್ಕೆ ಮನವಿ ಮಾಡಿದರು. ಆಗ ನ್ಯಾಯಮೂರ್ತಿಗಳು ಇದು ಜನಪ್ರತಿನಿಧಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಈ ನ್ಯಾಯಾಲಯಕ್ಕೆ ಆ ವ್ಯಾಪ್ತಿ ಇಲ್ಲ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳಿಂದ ನಿರ್ದೇಶನ ಪಡೆದು ಆದೇಶವಾದರೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಸಾಕಷ್ಟು ಸಮಾಲೋಚನೆ ಬಳಿಕ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ಅರ್ಜಿಯನ್ನು ಮೇ ೮ಕ್ಕೆ ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಅದರಂತೆ ಮೇ. ೮ರಂದು ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಪೀಠ ರಾಜ್ಯ ಸರಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮೇ ೨೦ಕ್ಕೆ ಮುಂದೂಡಿದೆ.
ಪೂಂಜ ವಿರುದ್ಧ ವಂದನಾ ಭಂಡಾರಿ ಮಹಿಳಾ ಆಯೋಗಕ್ಕೆ ದೂರು: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳ್ತಂಗಡಿಯ ಕಾಂಗ್ರೆಸ್ ನಾಯಕಿ ವಂದನಾ ಭಂಡಾರಿ ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ದಿನೇಶ್ ಗುಂಡೂರಾವ್ರವರು ಬುರ್ಖಾ ಹಾಕಿಕೊಂಡಿರುವಂತಹ ಉಸ್ತುವಾರಿ ಸಚಿವ. ಅವರು ಇಸ್ಲಾಂ ಧರ್ಮದ ಮಹಿಳೆಯನ್ನು ಮದುವೆಯಾಗಿದ್ದಾರೆ. ಹಿಂದು ಯುವತಿಯರನ್ನು ಮುಸಲ್ಮಾನರು ಲವ್ ಜಿಹಾದ್ ಮಾಡ್ತಾರೆ. ಇಲ್ಲಿ ಆಗಿರೋದು ಏನು ಅಂದ್ರೆ ಉಲ್ಟಾ. ದಿನೇಶ್ ಗುಂಡೂರಾವ್ ಅವರನ್ನು ಅವರ ಹೆಂಡತಿ ಲವ್ ಜಿಹಾದ್ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರನ್ನು ಧಾರ್ಮಿಕವಾಗಿ ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ನಿಂದಿಸಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುತ್ತಾರೆ. ಶಾಸಕ ಹರೀಶ್ ಪೂಂಜ ಅವರು ಧರ್ಮಗಳ ದ್ವೇಷ ಮೂಡಿಸುವ ಮತ್ತು ಮಹಿಳಾ ನಿಂದನೆಯನ್ನು ಮಾಡಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಡಿಂಜೆ ಗ್ರಾಮದ ನೆಲ್ಲಿಂಗೇರಿ ನಿವಾಸಿ ವಂದನಾ ಭಂಡಾರಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪೂಂಜ ನಡವಳಿಕೆ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿ: ಗುಂಡೂರಾವ್– ಶಾಸಕ ಹರೀಶ್ ಪೂಂಜ ಅವರ ಹೇಳಿಕೆ ಹಾಗೂ ವೈಯಕ್ತಿಕ ನಿಂದನೆಗೆ ಸಂಬಂಧಿಸಿ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗಿದೆ. ಅವರು ಉಪಯೋಗಿಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನನ್ನ ವಿರುದ್ಧದ ವೈಯಕ್ತಿಕ ಟೀಕೆಗೆ ಉತ್ತರಿಸುವುದಿಲ್ಲ. ಅವರ ಕೀಳು ಅಭಿರುಚಿ, ಮನಸ್ಥಿತಿಗೆ ಪ್ರತ್ಯುತ್ತರ ನೀಡುವ ಅಗತ್ಯ ಇಲ್ಲ, ಅವರ ನಡವಳಿಕೆ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿ. ಅದನ್ನು ಅವರೇ ತಿದ್ದಿಕೊಳ್ಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅಚ್ಚರಿ ಮೂಡಿಸಿದ ಹರೀಶ್ ಪೂಂಜ! ಹಿಂದೂ ಸಮಾಜ ಹಾಗೂ ಕಾರ್ಯಕರ್ತರಿಗಾಗಿ ಇನ್ನೂ ೧೦೦ ಕೇಸ್ ಹಾಕಿಸಿಕೊಳ್ಳಲು ಸಿದ್ಧ. ಇದಕ್ಕಾಗಿ ನನ್ನ ಶಾಸಕ ಸ್ಥಾನ ಹೋದರೂ ಚಿಂತೆ ಇಲ್ಲ ಎಂದು ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದ ಶಾಸಕ ಹರೀಶ್ ಪೂಂಜ ಅವರು ತನ್ನ ಮೇಲಿನ ಕೇಸ್ ರದ್ದು ಮಾಡುವಂತೆ ಆಗ್ರಹಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಿಂದೂ ಕಾರ್ಯಕರ್ತರ ಪರವಾಗಿ ಕೆಲಸ ಮಾಡಿದ ಕಾರಣದಿಂದ ಕಾಂಗ್ರೆಸ್ ಸರಕಾರ ನನ್ನ ಮೇಲೆ ಕೆಲವು ಕೇಸ್ ಹಾಕಿದೆ. ಹಿಂದೂ ಸಮಾಜ ಹಾಗೂ ಕಾರ್ಯಕರ್ತರಿಗಾಗಿ ಇನ್ನೂ ೧೦೦ ಕೇಸ್ ಹಾಕಿಸಿಕೊಳ್ಳಲು ನಾನು ಸಿದ್ಧ. ಇದಕ್ಕಾಗಿ ನನ್ನ ಶಾಸಕ ಸ್ಥಾನ ಹೋದರೂ ಚಿಂತೆ ಇಲ್ಲ. ಸಚಿವ ದಿನೇಶ್ ಗುಂಡೂರಾವ್ ಅವರು ಬುರ್ಖಾ ಹಾಕಿಕೊಂಡಿರುವ ಲವ್ ಜಿಹಾದ್ಗೆ ಒಳಪಟ್ಟಿರುವ ವ್ಯಕ್ತಿ. ದಿನೇಶ್ ಗುಂಡೂರಾವ್ ಅವರಿಗೆ ಹಿಂದೂಗಳಿಗಿಂತ ಮುಸಲ್ಮಾನರ ಮೇಲೆ ಪ್ರೀತಿ ಜಾಸ್ತಿ. ಹಿಂದೂಗಳ ಹತ್ಯೆಯಾದರೆ ದೊಡ್ಡ ಸುದ್ದಿಯಾಗುತ್ತದೆ. ಮುಸಲ್ಮಾನರ ಹತ್ಯೆಯಾದರೆ ಜಾಸ್ತಿ ಸುದ್ದಿಯಾಗಲ್ಲ ಅಂದಿದ್ದಾರೆ. ದಕ್ಷಿಣ ಕನ್ನಡದ ಬಗ್ಗೆ ಅವರು ಇನ್ನಷ್ಟು ತಿಳಿದುಕೊಳ್ಳಬೇಕು. ರಿವರ್ಸ್ ಲವ್ಜಿಹಾದ್ ಆಗಿರುವ ಸಚಿವರು ಉಸ್ತುವಾರಿ ಸಚಿವರಾಗಿರುವುದು ನಮ್ಮ ಜಿಲ್ಲೆಯ ದುರ್ದೈವ. ಹಾಗಾಗಿ ಅವರಿಗೆ ಹಿಂದೂಗಳ ಭಾವನೆ ಅರ್ಥ ಆಗುತ್ತಿಲ್ಲ. ಅವರು ಇಸ್ಲಾಂ ಧರ್ಮದ ಮಹಿಳೆಯನ್ನು ಮದುವೆಯಾಗಿರುವವರು. ಲವ್ ಜೆಹಾದ್ ಸಂದರ್ಭ ಹಿಂದೂ ಹುಡುಗಿಯರನ್ನು ಮುಸಲ್ಮಾನ ಹುಡುಗರು ಮತಾಂತರಿಸುತ್ತಾರೆ. ಆದರೆ ಇಲ್ಲಿ ಉಲ್ಟಾ ಆಗಿದೆ. ಹಾಗಾಗಿ ಹಿಂದೂಗಳ ಭಾವನೆ ಬಗ್ಗೆ ಅವರಿಗೆ ಶ್ರದ್ಧೆ ಇಲ್ಲ. ಥರ್ಡ್ ಗ್ರೇಡ್ ಪ್ರಜೆಗಳಂತೆ ಹಿಂದೂಗಳನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಶಾಸಕ ಹರೀಶ್ ಪೂಂಜ ಹೇಳಿಕೆ ನೀಡಿದ್ದರು. ಜತೆಗೆ ಹಿಂದೂ ಸಮಾಜ ಮತ್ತು ಕಾರ್ಯಕರ್ತರಿಗಾಗಿ ಇನ್ನು ೧೦೦ ಕೇಸ್ ಹಾಕಿಸಿಕೊಳ್ಳಲೂ ಸಿದ್ಧ ಎಂದು ಹೇಳಿಕೆ ನೀಡುವ ಮೂಲಕ ಹರೀಶ್ ಪೂಂಜ ಅವರು ಕಾರ್ಯಕರ್ತರ ಪಾಲಿಗೆ ಫೈರ್ಬ್ರಾಂಡ್ ಆಗಿದ್ದರು. ಆದರೆ ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಅವರು ಕೋಮು ದ್ವೇಷದ ಭಾಷಣ ಮಾಡಿದ್ದ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ಆನಂತರದ ಕಾನೂನು ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ.