ಗುರುವಾಯನಕೆರೆ: ಹಿಂದೂ ಧರ್ಮಕ್ಕಾಗಿ ಹೋರಾಡಿದ ಬಂಟ ಸಮಾಜದ ಯುವಕ ಸುಹಾಸ್ ಶೆಟ್ಟಿಯ ಕೊಲೆಯಾಗಿದೆ. ಇದೀಗ ನಾವು ಒಟ್ಟಾಗಿ ಆತನ ಮನೆಯವರ ಜೊತೆ ನಿಲ್ಲಬೇಕು. ಅವರ ಕಷ್ಟಕ್ಕೆ ಸಹಾಯ ಮಾಡಿ ಅವರ ಕುಟುಂಬದಲ್ಲಿ ಒಂದಾಗಬೇಕು ಎಂದು ಬಂಟರ ಯಾನೆ ನಾಡವರ ಸಂಘದ ಮಾರ್ಗದರ್ಶಕರಾಗಿರುವ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಹೇಳಿದ್ದಾರೆ.
ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಬಂಟರ ಮಹಿಳಾ ಹಾಗೂ ಯುವ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಏ.27ರಂದು ನಡೆದ ಬಂಟ ಕ್ರೀಡೋತ್ಸವ ದೇವು ಪೂಂಜ ಟ್ರೋಫಿ 2025ರ ಯಶಸ್ಸಿನ ಹಿನ್ನೆಲೆಯಲ್ಲಿ ಗುರುವಾಯನಕರೆಯ ಬಂಟರಭನವದಲ್ಲಿ ಮೇ.4ರಂದು ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಂಟ ಕ್ರೀಡೋತ್ಸ ಬಹಳ ಉತ್ತಮವಾಗಿ ಈಡೇರಿದೆ. ಕಾರ್ಯಕ್ರಮವನ್ನು ನೋಡಿ ಬಹಳ ಖುಷಿಯಾಗಿದೆ. ಈ ಮೂಲಕ ತಾಲೂಕಿನ ಎಲ್ಲಾ ವಲಯದ ಬಂಟ ಸಮಾಜದವರು ಒಗ್ಗಟ್ಡಾಗಿದ್ದಾರೆ ಎಂದು ಹೇಳಿದರು.
ಪಥಸಂಚಲನದಲ್ಲಿ ಬಂಟರ ಸಂಸ್ಕೃತಿಯನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಂಟ ಸಮಾಜದ ಶಕ್ತಿ ಇನ್ನೂ ಹೆಚ್ಚಾಗಿದೆ. ಈ ರೀತಿಯಲ್ಲಿ ಕ್ರೀಡೋತ್ಸವ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಬೇಕು. ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಪ್ರತಿ ವರ್ಷ ಒಂದೊಂದು ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಬೇಕು ಎಂದು ಸಲಹೆ ಕೊಟ್ಟರು.
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಮಾತನಾಡಿ ಮಹಾಭಾರತ ಯುದ್ಧದ ಗೆಲುವಲ್ಲಿ ಸುದರ್ಶನ ಚಕ್ರದ ಪಾತ್ರದಂತೆ ಬಂಟ ಕ್ರೀಡೋತ್ಸವದ ಸಂಪೂರ್ಣ ಯಶಸ್ಸಿಗೆ ಮಾರ್ಗದರ್ಶಕರಾಗಿರುವ ಶಶಿಧರ್ ಶೆಟ್ಟಿ ಬರೋಡ ಕಾರಣ ಎಂದರು. ಬಂಟ ಕ್ರೀಡೋತ್ಸವಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ತಾಲೂಕಿನ 9 ವಲಯದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು ಹಾಗೂ ಕ್ರೀಡೋತ್ಸವಕ್ಕೆ ಶ್ರಮಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕ್ರೀಡಾ ಸಂಚಾಲಕ ವೆಂಕಟ್ರಮಣ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಉಪಾಧ್ಯಕ್ಷರಾದ ನವೀನ್ ಸಾಮಾನಿ ಕರಂಬಾರುಬೀಡು, ಉಮೇಶ್ ಶೆಟ್ಟಿ ದುರ್ಗಾ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ ಕರಂಬಾರುಬೀಡು, ಯುವ ವಿಭಾಗ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು. ಸಭೆಯಲ್ಲಿ ಬಂಟರ ಸಂಘದ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಭಾಗವಹಿಸಿದ್ದರು. ಬಂಟರ ಯಾನೆ ನಾಡವರ ಸಂಘದ ನಿರ್ದೇಶಕ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. ಉಪಾಧ್ಯಕ್ಷ ಉಮೇಶ್ ಶೆಟ್ಟಿ ದುರ್ಗಾ ಸ್ವಾಗತಿಸಿ ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ ಬಂಟ ಕ್ರೀಡೋತ್ಸವದ ಲೆಕ್ಕ ಮಂಡನೆ ಮಾಡಿದರು.