
ಬೆಳ್ತಂಗಡಿ: ಎ. 18ರಂದು ಕಲ್ಲಬೆಟ್ಟುವಿನ ನ್ಯೂ ವೈಬ್ರೆಂಟ್ ಕಾಲೇಜಿನ ಆವರಣದಲ್ಲಿ ನೀಟ್ ಲಾಂಗ್ ಟರ್ಮ್ ಡೇ 2025 ನಡೆಯಿತು. ನ್ಯೂ ವೈಬ್ರೆಂಟ್ ಪಿ.ಯು ಕಾಲೇಜು ತನ್ನ ಶೈಕ್ಷಣಿಕ ಸಾಧನೆಯೊಂದಿಗೆ ಉತ್ತಮ ಫಲಿತಾಂಶದೊಂದಿಗೆ ಹೆಸರುವಾಸಿಯಾಗುದರ ಜೊತೆಗೆ ಇದೀಗ ವಿನೂತನ ಕಾರ್ಯಕ್ರಮದ ಮೂಲಕ ಮಾದರಿಯಾಗಿದೆ.
ಹಳೆಯ ಕಾಲಕ್ಕೆ ಹೋಲಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ಇಂದು ಅವಕಾಶಗಳು ಹೆಚ್ಚಿವೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ನಾವು ಸಾಧನೆಯ ಪಥದಲ್ಲಿ ಸಾಗಲು ಸಾಧ್ಯ ಇದನ್ನು ಮನಗಂಡು ಈ ಬಾರಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಸರ್ಜಿತ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿರ್ದೇಶಕ ಚಂದ್ರಶೇಖರ ರಾಜೇ ಅರಸ್ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಹಳೆಯ ತಪ್ಪುಗಳನ್ನು ತಿದ್ದುಕೊಂಡು ಏಕಾಗ್ರತೆಯಿಂದ ಅಭ್ಯಾಸದಲ್ಲಿ ತೊಡಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನಿರ್ದೇಶಕ ಡಾ. ಎಸ್ ಎನ್ ವೆಂಕಟೇಶ್ ನಾಯಕ್ ತಿಳಿಸಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಆರೋಗ್ಯವು ಅನಿವಾರ್ಯ ಮತ್ತು ಅವಶ್ಯಕ ಎಂದು ನಿರ್ದೇಶಕ ಯೋಗೀಶ್ ಬೆಡೇಕರ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಉತ್ತಮ ಕಾಲೇಜಿನಲ್ಲಿ ತರಬೇತಿ ಪಡೆಯುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮನ್ನು ತಯಾರು ಗೊಳಿಸುವ ಉತ್ತಮ ವೇದಿಕೆ ಎಂದು ನಿರ್ದೇಶಕ ಶರತ್ ಗೋರೆ ತಿಳಿಸಿದರು.
ತರಬೇತಿಯ ಜೊತೆ ಜೊತೆಗೆ ಹಲವಾರು ಪರೀಕ್ಷೆಗಳನ್ನು ಬರೆದಾಗ ನಮ್ಮಲ್ಲಿ ಆತ್ಮವಿಶ್ವಾಸ ದ್ವಿಗುಣಗೊಳ್ಳಲು ಸಾಧ್ಯವೆಂದು ನಿರ್ದೇಶಕ ಎಸ್.ಎಮ್ ಭಾಷಾ ನುಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಸುಭಾಷ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ನೀಟ್ ಲಾಂಗ್ ಟರ್ಮ್ ನ ಸಹಾಯಕ ಆಡಳಿತ ಅಧಿಕಾರಿ ವಿಜಯ್ ಕುಮಾರ್ ತೋನಶ್ಯಾಳ ಸ್ವಾಗತಿಸಿದರು. ನವೀನ ಕಾರ್ಯಕ್ರಮವನ್ನು ನಿರೂಪಿಸಿದರು.