ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆಯಲ್ಲಿ ಬಣ ರಾಜಕೀಯ ಸದ್ದು ಮಾಡಿದ್ದ ಬೆನ್ನಲ್ಲೇ ಮಾರ್ಚ್ ೩ರಂದು ರಚನೆಯಾಗಿದ್ದ ಹೊಸ ವ್ಯವಸ್ಥಾಪನಾ ಸಮಿತಿಗೆ ರಾಜ್ಯ ಹೈಕೋರ್ಟ್ ಮಾರ್ಚ್ ೫ರಂದು ಮಧ್ಯಂತರ ತಡೆ ನೀಡಿದೆ.
ಇದರಿಂದಾಗಿ ಮಾರ್ಚ್ 4ರಂದು ಪದಗ್ರಹಣ ಮಾಡಿ, ಅಧಿಕಾರ ಸ್ವೀಕಾರ ಮಾಡಿದ್ದ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಕೋರ್ಟ್ ಅನುಮತಿ ನೀಡುವ ತನಕ ಸಮಿತಿ ಮೂಲಕ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಬೆಳ್ತಂಗಡಿ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂರಿಂದಲೇ ತಮ್ಮ ಸದಸ್ಯತ್ವ ಹೋಗಿದೆ ಎಂದು ಸಿಟ್ಟಾಗಿದ್ದ ಪುತ್ತೂರಿನ ವಕೀಲ ಉದಯ ಶಂಕರ ಶೆಟ್ಟಿ ಅರಿಯಡ್ಕ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಹೊಸ ಸಮಿತಿಗೆ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ.
ಬಯಲು ಆಲಯ ಗಣಪ ಎಂದೇ ಪ್ರಸಿದ್ಧಿ ಪಡೆದಿರುವ ಸೌತಡ್ಕ ಮಹಾಗಣಪತಿ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಫೆ.14ರಂದು ಆಯ್ಕೆಯಾಗಿದ್ದ ಒಂಬತ್ತು ಸದಸ್ಯರ ಪೈಕಿ ಈರ್ವರನ್ನು ಕೈ ಬಿಟ್ಟು, ಹೊಸದಾಗಿ ಇಬ್ಬರನ್ನು ಮಾ.3ರಂದು ನೇಮಕ ಮಾಡಿದ ಪರಿಷ್ಕೃತ ಆದೇಶ ಹೊರಡಿಸಲಾಗಿತ್ತು. ಇದು ಹೊಸ ವಿವಾದಕ್ಕೆಡೆ ಮಾಡಿತ್ತು. ಕಾಂಗ್ರೆಸ್ ಪಕ್ಷದೊಳಗಿನ ಮುಸುಕಿನ ಗುದ್ದಾಟ ಪ್ರತಿಷ್ಠೆಯ ಕಣವಾಗಿ ಕಾಣಿಸಿಕೊಂಡಿದ್ದರಿಂದ ಧಾರ್ಮಿಕ ಕ್ಷೇತ್ರದ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದವರಾಗಿರುವ ಹಿರಿಯ ವಕೀಲ ಉದಯ ಶಂಕರ ಶೆಟ್ಟಿ ಮತ್ತು ಕಡಬ ತಾಲೂಕಿನ ಗೋಳಿತ್ತೊಟ್ಟು ನಿವಾಸಿ ಪ್ರಶಾಂತ್ ರೈ ಅವರನ್ನು ಸಮಿತಿಯಿಂದ ಕೈ ಬಿಡಲಾಗಿತ್ತು. ಬದಲಿಗೆ ಬೆಳ್ತಂಗಡಿ ತಾಲೂಕಿನ ಎಂತಿಮರ್ ಹೌಸ್‌ನ ಪ್ರಮೋದ್ ಕುಮಾರ್ ಶೆಟ್ಟಿ ಮತ್ತು ಕೊಕ್ರಾಡಿ ಗ್ರಾಮದ ಪ್ರಶಾಂತ್ ಕುಮಾರ್‌ರನ್ನು ಸೇರಿಸಿಕೊಳ್ಳಲಾಗಿತ್ತು. ಇದನ್ನು ವಕೀಲ ಉದಯ ಶಂಕರ ಶೆಟ್ಟಿ ಬುಧವಾರದಂದು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಅರ್ಜಿ ಸಲ್ಲಿಸಿದ್ದರು.
ಸುಬ್ರಹ್ಮಣ್ಯ ಶಬರಾಯ, ವಿಶ್ವನಾಥ ಪೂಜಾರಿ ಕೊಲ್ಲಾಜೆ, ಗಣೇಶ್ ಕಾಶಿ, ಲೋಕೇಶ್ವರಿ ವಿನಯಚಂದ್ರ, ಸಿನಿ ಟಿಕೆ ಗುರುದೇವನ್, ಹರಿಶ್ಚಂದ್ರ ಜಿ ಮತ್ತು ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಅವರು ಸಮಿತಿಯ ಇತರೆ ಸದಸ್ಯರಾಗಿದ್ದಾರೆ. ಮಾ.4ರಂದು ಸೌತಡ್ಕ ದೇಗುಲದಲ್ಲಿ ವ್ಯವಸ್ಥಾಪನಾ ಸಮಿತಿ ಪದಗ್ರಹಣ ಸಮಾರಂಭವೂ ಪೂರ್ಣಗೊಂಡು, ಸುಬ್ರಹ್ಮಣ್ಯ ಶಬರಾಯರು ಅಧ್ಯಕ್ಷರಾಗಿ ಅಧಿಕಾರವನ್ನೂ ಸ್ವೀಕರಿಸಿದ್ದರು.
ಸೋಮವಾರ ಮುಂದಿನ ವಿಚಾರಣೆ: ವಕೀಲ ಉದಯ ಶಂಕರ ಶೆಟ್ಟಿ ಪರ ಅರುಣ್ ಶ್ಯಾಮ್ ಅಸೋಸಿಯೇಟ್ಸ್ ಸಂಸ್ಥೆ ವಕೀಲರು ವಾದ ಮಂಡಿಸಿ, ತಮ್ಮ ಕಕ್ಷಿದಾರರನ್ನು ಸೌತಡ್ಕ ದೇಗುಲ ವ್ಯವಸ್ಥಾಪನಾ ಸಮಿತಿಯಿಂದ ಏಕಪಕ್ಷೀಯವಾಗಿ ತೆಗೆಯಲಾಗಿದೆ. ಧಾರ್ಮಿಕ ಪರಿಷತ್ ಈ ಬಗ್ಗೆ ಸರ್ವಸಮ್ಮತಿಯ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಮೇಲಾಗಿ, ಸದಸ್ಯತ್ವದಿಂದ ತೆಗೆಯುವ ಮುನ್ನ ನೊಟೀಸ್ ನೀಡಬೇಕಾಗುತ್ತದೆ. ನೊಟೀಸ್‌ಗೆ ಉತ್ತರ ನೀಡಲು 15 ದಿನಗಳ ಕಾಲವಕಾಶ ಕೊಡಬೇಕು. ಆದರೆ, ಇದ್ಯಾವುದನ್ನೂ ಮಾಡಲಾಗಿಲ್ಲ. ಪೂರ್ವ ಮಾಹಿತಿಯನ್ನೂ ನೀಡದೆ ಸಮಿತಿಯಿಂದ ತೆಗೆದು ಹಾಕಿರುವುದು ನೈಸರ್ಗಿಕ ನ್ಯಾಯತತ್ವದ ಉಲ್ಲಂಘನೆ. ಹೀಗೆ ಮಾಡಿ, ವಿನಾಕಾರಣ ಕಕ್ಷಿದಾರರಿಗೆ ಅವಮಾನ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾ. ನಾಗಪ್ರಸನ್ನವರಿದ್ದ ಏಕಸದಸ್ಯ ಪೀಠ, ವ್ಯವಸ್ಥಾಪನಾ ಸಮಿತಿಗೆ ಮಧ್ಯಂತರ ತಡೆ ನೀಡಿ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ (ಮಾ.11) ನಿಗದಿಪಡಿಸಿದೆ.
ರಕ್ಷಿತ್ ಶಿವರಾಂ ವಿರುದ್ಧ ಆಕ್ರೋಶ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮುನ್ನ ಸುದ್ದಿ ಬಿಡುಗಡೆ ಜತೆ ಮಾತನಾಡಿದ್ದ ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಉದಯ ಶಂಕರ ಶೆಟ್ಟಿ ಅರಿಯಡ್ಕ, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂರಿಂದಲೇ ನಾವು ಸದಸ್ಯತ್ವ ಕಳೆದುಕೊಂಡೆವು. ಯಾವುದೇ ತಪ್ಪು ಮಾಡದ, ಕ್ಲೀನ್ ಇಮೇಜ್ ಉಳ್ಳ ನನ್ನನ್ನು ತೆಗೆದರು. ರಕ್ಷಿತ್ ಶಿವರಾಂ ನಿರ್ಧಾರ ಅರ್ಥವಿಲ್ಲದ್ದು. ಈ ಪರಿಷ್ಕೃತ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು.
ಪ್ರಶಾಂತ್ ರೈ ಮತ್ತು ಉದಯ ಶಂಕರ್ ಶೆಟ್ಟಿಯವರನ್ನು ಸಮಿತಿಗೆ ಸೇರ್ಪಡೆಗೊಳಿಸಿದ್ದಕ್ಕೆ ರಕ್ಷಿತ್ ಶಿವರಾಂ ಒಪ್ಪಿಗೆ ಇರಲಿಲ್ಲ. ನಂತರ ಇದನ್ನು ರಾಜ್ಯ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಗಮನಕ್ಕೆ ತಂದು, ಹೊಸ 2 ಬದಲಿ ಹೆಸರನ್ನು ಇಲಾಖೆಗೆ ನೀಡಲಾಯ್ತು ಎಂದು ಮೂಲಗಳಿಂದ ಗೊತ್ತಾಗಿದೆ.
ಹಿಂದೆ ಸುಬ್ರಹ್ಮಣ್ಯ ಶಬರಾಯರು ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರಶಾಂತ್ ರೈ ಸದಸ್ಯರಾಗಿದ್ದರು. ಪ್ರಶಾಂತ್ ರೈ, ರಮಾನಾಥ ರೈ ಅವರಿಗೆ ಆಪ್ತರು ಎನ್ನುವುದು ಗುಟ್ಟಿನ ವಿಷಯವೇನಲ್ಲ. ಆದರೆ, ವ್ಯವಸ್ಥಾಪನಾ ಸಮಿತಿ ಕುರಿತ ಎರಡನೇ ಹೊಸ ಪರಿಷ್ಕೃತ ಆದೇಶದಲ್ಲಿ ರಮಾನಾಥ ರೈ ಆಪ್ತನ ಬದಲು ರಕ್ಷಿತ್ ಶಿವರಾಂ ಆಪ್ತ ಪ್ರಶಾಂತ್ ಕುಮಾರ್‌ಗೆ ಅವಕಾಶ ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷದೊಳಗಿನ ಬಣ ಸಂಘರ್ಷ ಬಹಿರಂಗಗೊಳಿಸಿದೆ. ಈಗ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ ಬಂದಿರುವುದರಿಂದ ಸೌತಡ್ಕ ದೇಗುಲ ಸಮಿತಿ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದಂತಾಗಿದೆ.
ತಪ್ಪು ಮಾಡದ ನನ್ನನ್ನು ಹೊರಗಿಟ್ಟದ್ದೇಕೆ?: ನಾನು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದಿಲ್ಲ. ವಿನಾಕಾರಣ ನನ್ನನ್ನು ಬಿಜೆಪಿ ವ್ಯಕ್ತಿ ಎಂದು ಬಿಂಬಿಸಿ ಸದಸ್ಯತ್ವದಿಂದ ತೆಗೆದುಹಾಕಿದ್ದಾರೆ. ಗೌರವಾನ್ವಿತ ಕುಟುಂಬದಿಂದ ಬಂದ ನನಗೆ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಉದಯ ಶಂಕರ ಶೆಟ್ಟಿ ಕಿಡಿಕಾರಿದ್ದಾರೆ.
ಮಾನಸಿಕ ಅಸ್ವಸ್ಥರಾಗಿರುವವರಷ್ಟೇ ಹೀಗೆ ಮಾಡುತ್ತಾರೆ. ನಾನು ವಿವಿಧ ಬ್ಯಾಂಕ್‌ಗಳ ಪ್ಯಾನೆಲ್ ಸದಸ್ಯನಾಗಿಯೂ ಕೆಲಸ ಮಾಡುತ್ತಿದ್ದೇನೆ. ಪುತ್ತೂರಿನಲ್ಲಿ ನನಗೆ ನನ್ನದೇ ಆದ ವರ್ಚಸ್ಸಿದೆ. ತಪ್ಪು ಮಾಡದ ನನ್ನನ್ನು ಹೊರಗಿಟ್ಟಿದ್ದಾರೆಂದರೆ ಏನು ಹೇಳುವುದು? ಸಮಿತಿಗೆ ತಡೆಯಾಜ್ಞೆ ತಂದಿದ್ದೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಶೆಟ್ಟಿ ತಿಳಿಸಿದ್ದಾರೆ.
ಬೆಳ್ತಂಗಡಿ ಹೊರತುಪಡಿಸಿ ಉಳಿದ ಭಾಗದ ವ್ಯಕ್ತಿಗಳು ಸಮಿತಿಯಲ್ಲಿ ಬೇಡ ಎಂಬ ಅಭಿಪ್ರಾಯವಿದ್ದ ಕಾರಣ ತೆಗೆಯಲಾಯಿತು ಎಂದು ನನಗೆ ಸಬೂಬು ನೀಡಿದರು. ಇದರಲ್ಲಿ ತರ್ಕವಿದೆಯೇ? ಸಮಿತಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಬೆಳ್ತಂಗಡಿಯವರಿಗೆ ಮಾತ್ರ ಅವಕಾಶ ಎಂಬ ನಿಯಮ ಮಾಡಿದ್ದರೇ? ಹಾಗಿದ್ದರೆ, ಸೌತಡ್ಕ ದೇವಸ್ಥಾನಕ್ಕೆ ಬೆಳ್ತಂಗಡಿ ತಾಲೂಕಿನ ಭಕ್ತರಿಗೆ ಬರಲು ಮಾತ್ರ ಅವಕಾಶ ಎಂಬ ಬೋರ್ಡ್ ಹಾಕುತ್ತಾರಾ ಎಂದು ವಕೀಲ ಶೆಟ್ಟಿ ಪ್ರಶ್ನಿಸಿದ್ದಾರೆ.
ತಡೆಯಾಜ್ಞೆಗೆ ಜಿಲ್ಲಾಧಿಕಾರಿಗೆ ಪತ್ರ: ಸೌತಡ್ಕ ಶ್ರೀ ಮಹಾಗಣಪತಿ ದೇಗುಲದಲ್ಲಿ ನಡೆದಿದೆ ಎನ್ನಲಾದ ಗಂಟೆ ಹಗರಣದ ತನಿಖೆಗೆ ಜಿಲ್ಲಾಧಿಕಾರಿ ಮರು ತನಿಖೆಗೆ ಆದೇಶ ಮಾಡಿರುವುದರಿಂದ ಹೊಸ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ತಡೆಯಾಜ್ಞೆ ನೀಡಬೇಕು ದೇಗುಲದ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ಪೂವಾಜೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿಯಲ್ಲಿರುವ ಸುಬ್ರಹ್ಮಣ್ಯ ಶಬರಾಯ ಅವರ ಅಧಿಕಾರವಧಿಯಲ್ಲಿ ಹಗರಣ ನಡೆದಿದೆ ಮತ್ತು ಅಂದಿನ ಕಡತಗಳಿಗೆ ಅವರು ಸಹಿ ಹಾಕಿದ್ದರು. ಅದೇ ರೀತಿ, ಹುಂಡಿ ಹಣವನ್ನು ತಮ್ಮ ಸಾಲ ಕಟ್ಟಲು ಬಳಸಿಕೊಂಡ ಆರೋಪ ಮತ್ತೋರ್ವ ಸದಸ್ಯ ವಿಶ್ವನಾಥ ಪೂಜಾರಿ ಕೊಲ್ಲಾಜೆ ಅವರ ಮೇಲಿದೆ. ಈ ಬಗ್ಗೆ ತನಿಖೆಗೆ ಆದೇಶ ಮಾಡಿರುವುದರಿಂದ ಅಧಿಕಾರ ಹಸ್ತಾಂತರ ಮಾಡಬಾರದು ಮತ್ತು ಹೊಸ ವ್ಯವಸ್ಥಾಪನಾ ಸಮಿತಿಯ ಕಾರ್ಯಾಚರಣೆಗೆ ತಡೆ ನೀಡಬೇಕು. ಇಲ್ಲವಾದಲ್ಲಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ ಎಂದು ಪೂವಾಜೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೆ ಸಲ್ಲಿಸಿದ ಈ ಆಕ್ಷೇಪಣೆಯನ್ನು ಬೆಳ್ತಂಗಡಿ ತಹಶೀಲ್ದಾರ್, ದತ್ತಿ ಇಲಾಖೆ ಆಯುಕ್ತರು, ಪುತ್ತೂರಿನ ಸಹಾಯಕ ಆಯುಕ್ತರು ಸೇರಿ ಹಲವರಿಗೂ ತಲುಪಿಸಿದ್ದಾರೆ.
“ಯಾರ ಮೇಲೆಯೂ ನನಗೆ ದ್ವೇಷವಿಲ್ಲ. ಅವಮಾನ ಮಾಡುವ ಪ್ರಶ್ನೆಯೇ ಇಲ್ಲ. ಸೌತಡ್ಕ ದೇಗುಲದಲ್ಲಿ ಅಭಿವೃದ್ಧಿಗೆ ವ್ಯಾಪಕ ಅವಕಾಶಗಳಿದ್ದು, ಅವುಗಳನ್ನು ಕಾರ್ಯಗತಗೊಳಿಸಲು ಮುಂದಾಗಲಿದ್ದೇವೆ. ಹೀಗಾಗಿ, ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿರುವವರನ್ನೊಳಗೊಂಡ ಹೊಸ ಉತ್ಸಾಹಿ ತಂಡ ಕಟ್ಟುವುದಷ್ಟೇ ನಮ್ಮ ಉzಶವಾಗಿತ್ತು”
-ರಕ್ಷಿತ್ ಶಿವರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ: ಪ್ರಶಾಂತ್
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ, ಸಹಕಾರಿ ಸಂಘದ ಮಾಜಿ ನಿರ್ದೇಶಕನೂ ಆಗಿದ್ದ ನನ್ನನ್ನು ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಈ ಮೊದಲು ಸರಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶದಂತೆ ಪತ್ರಿಕೆಗಳಲ್ಲಿ ಸಮಿತಿಗೆ ನೇಮಕಗೊಂಡ ಎಲ್ಲಾ ಸದಸ್ಯರ ಪೊಟೋ ಸಹಿತ ವರದಿ ಪ್ರಕಟವಾಗಿತ್ತು. ಇದನ್ನು ಸ್ವಾಗತಿಸಿ ಹಲವು ಜನರ ಅಭಿಪ್ರಾಯಗಳೂ ಪತ್ರಿಕೆಗಳಲ್ಲಿ ಬಂದಿತ್ತು. ಇದೀಗ ಬೆಳ್ತಂಗಡಿಯಲ್ಲಿ ನಾನು ಹೇಳಿದಂತೆ ಆಗಬೇಕೆಂದು ರಕ್ಷಿತ್ ಶಿವರಾಂ ಅವರು ನನ್ನನ್ನು ಬದಲಾಯಿಸಿ ಅವರ ಪಿ.ಎ.ಪ್ರಶಾಂತ್ ಪೂಜಾರಿಯವರನ್ನು ಸಮಿತಿಗೆ ಸೇರಿಸಿದ್ದಾರೆ. ನನ್ನ ಆಯ್ಕೆಗೆ ರಮಾನಾಥ ರೈ ಅವರು ಕಾರಣ ಎಂಬ ಮತ್ಸರದಿಂದ ಮೊದಲ ಆದೇಶದಲ್ಲಿದ್ದ ನನ್ನ ಹೆಸರನ್ನು ತೆಗೆಸಿ ಪ್ರಶಾಂತ ಪೂಜಾರಿ ಅವರನ್ನು ಸೇರಿಸಿ ಹೊಸ ಆದೇಶ ಮಾಡಿಸಿರುವುದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್‌ನವರನ್ನೇ ಅವಮಾನಿಸಿದ ರಕ್ಷಿತ್ ಶಿವರಾಂ ಅವರ ನಡೆಯಿಂದ ಹಲವು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ. ಪಕ್ಷದ ಕಾರ್ಯಕರ್ತರನ್ನು ಅವಮಾನಿಸದಂತೆ ರಕ್ಷಿತ್ ಶಿವರಾಂರವರಿಗೆ ಸೂಚನೆ ನೀಡಲು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. -ಪ್ರಶಾಂತ್ ರೈ ಅರಂತಬೈಲು, ಗೋಳಿತ್ತೊಟ್ಟು
ತಾಲೂಕಿನ ಭಕ್ತರಿಗೆ ಅವಕಾಶ – ರಕ್ಷಿತ್ ಶಿವರಾಂ: ಸೌತಡ್ಕದಲ್ಲಿ ಹಿಂದೇನಾಗಿತ್ತು ಎಂಬುದು ನಮಗೆ ಬೇಕಾಗಿಲ್ಲ. ಇಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶಗಳಿರುವುದರಿಂದ ಹೊಸ ಉತ್ಸಾಹಿ ತಂಡ ಕಟ್ಟುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ, ತಾಲೂಕಿಗೆ ಸೇರಿದವರನ್ನೇ ಆಯ್ಕೆ ಮಾಡಲಾಯಿತು ಎಂದು ಸೌತಡ್ಕ ದೇಗುಲದ ವ್ಯವಸ್ಥಾಪನಾ ಸಮಿತಿ ಕುರಿತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಮರ್ಥನೆ ನೀಡಿದ್ದಾರೆ.
ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದವರು ದೇಗುಲದ ದೈನಂದಿನ ಚಟುವಟಿಕೆಗಳಲ್ಲಿ ಹಾಜರಿರಬೇಕಾಗುತ್ತದೆ. ಪರ ಊರಿನವರಿಗೆ ನಾವು ಪದೇಪದೇ ಕರೆಯಲು ಸಾಧ್ಯವಾಗುವುದಿಲ್ಲ. ಅವರು ಜಾತ್ರೆ ಸಂದರ್ಭದಲ್ಲಿ ಬಂದು ಹೋಗಲಷ್ಟೇ ಸೀಮಿತರಾಗುತ್ತಾರೆ. ಬೇರೆ ಊರಿನವರು ಅವರ ಊರಿಗೆ ಸಂಬಂಧಿಸಿದ ದೇಗುಲಗಳಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಲು ಅವಕಾಶಗಳಿವೆ. ನಮ್ಮ ತಾಲೂಕಿನ ಭಕ್ತರಿಗೆ ಇಲ್ಲಿ ಅವಕಾಶ ನೀಡಬೇಕು ಎನ್ನುವುದು ನಮ್ಮ ಆಶಯ ಆಗಿತ್ತು ಸುದ್ದಿ ಬಿಡುಗಡೆ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.
ತಾಲೂಕಿನಲ್ಲಿ 4 ’ಎ’ ಗ್ರೇಡ್ ದೇಗುಲಗಳಿವೆ. ೨ರಲ್ಲಿ ಆನುವಂಶಿಕ ಆಡಳಿತ ವ್ಯವಸ್ಥೆ ಇರುವುದರಿಂದ ನಮಗೆ ಅಲ್ಲಿ ಅವಕಾಶಗಳು ಕಡಿಮೆ. ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಕೆಲ ಕಾಮಗಾರಿ ನಡೆಯುತ್ತಿದೆ. ರಾಜ್ಯದೆಲ್ಲೆಡೆಯಿಂದ ಯಾತ್ರಿಗಳು ಸೌತಡ್ಕಕ್ಕೆ ಬರುವುದರಿಂದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಇಲ್ಲಿ ಉತ್ಸಾಹಿ ತಂಡವೊಂದರ ಅಗತ್ಯವಿತ್ತು. ಯಾರನ್ನೂ ಅವಮಾನ ಮಾಡುವ ಪ್ರಶ್ನೆ ಉದ್ಭವಿಸದು ಎಂದು ಸಮರ್ಥಿಸಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ತಾಲೂಕಿನ ದೇಗುಲಗಳಲ್ಲಿ ಹಸಿರು ಚೈತನ್ಯೋತ್ಸವ ಎಂಬ ಕಾರ್ಯಕ್ರಮ ಜಾರಿ ಮಾಡಲಿzವೆ. ಅದೇ ರೀತಿ ದೇವಸ್ಥಾನಗಳ ಆಸ್ತಿ ಉಳಿಸಲು ಹಾಗೂ ರಕ್ಷಣೆ ಮಾಡುವಲ್ಲಿಯೂ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.