ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ದಿನಾಚರಣೆ ಮತ್ತು ವಾರ್ಷಿಕ ಜಾತ್ರೋತ್ಸವ ಜ. 26 ಮತ್ತು 27 ರಂದು ನೀಲೇಶ್ವರ ಆಲಂಬಾಡಿ ಪದ್ಮನಾಭಾ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಜ. 26 ರಂದು ಬೆಳಿಗ್ಗೆ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ ಕಲಶ, ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಮದ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ, ರಾತ್ರಿ ದೇವರ ಬಲಿ ಹೊರಟು ಭೂತ ಬಲಿ, ಉತ್ಸವ, ಕಟ್ಟೆ ಪೂಜೆ, ವಸಂತ ಕಟ್ಟೆ ಪೂಜೆ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಮೂಲ್ಕಿ ನವ ವೈಭವ ಕಲಾ ತಂಡದವರಿಂದ “ಸತ್ಯೋದ ತುಡರ್ ” ತುಳು ಪೌರಾಣಿಕ ನೃತ್ಯ ನಾಟಕ ಪ್ರದರ್ಶನಗೊಂಡಿತು.
ಜ. 27 ರಂದು ಬೆಳಿಗ್ಗೆ ಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆ, ರುದ್ರಾಭಿಷೇಕ, ಮಹಾ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಿಂದ ಮೆರವಣಿಗೆಯೊಂದಿಗೆ ಭಂಡಾರ ಆಗಮನ, ಬೆಂಗಳೂರು ವಿದುಷಿ ಚಂದ್ರಿಕಾ ರಾಜರಾಮ್ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಕಲ್ಮಂಜ ಹಂಸಿನಿ ಭಿಡೆ, ಧೃತಿ ಭಿಡೆ ಮತ್ತು ಸಹ ಕಲಾವಿದರಿಂದ ಗಮಕ ಗಾನ ವೈಭವ, ರಾತ್ರಿ ರಂಗ ಪೂಜೆ, ಪ್ರಸಾದ ವಿತರಣೆ, ನಂತರ ಉಳ್ಳಾಲ್ತಿ ಅಮ್ಮನವರ ಬೂಳ್ಯ, ಪಿಲಿ ಚಾಮುಂಡಿ ಧರ್ಮ ದೈವಗಳ ನೇಮೋತ್ಸವ ನಡೆಯಿತು.