ಬೆಳ್ತಂಗಡಿ: ಮಚ್ಚಿನ ಗ್ರಾಮ ವ್ಯಾಪ್ತಿಯ ಬಂಗೇರಕಟ್ಟೆ – ಅಂಡಾಲ್ ನೆತ್ತರವರೆಗಿನ ರಸ್ತೆ ದುರಸ್ಥಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಚ್ಚಿನ ಗ್ರಾಮ ಸಮಿತಿ ಅಧ್ಯಕ್ಷ ಹನಿಫ್ ಬಳ್ಳಮಂಜ ನೇತೃತ್ವದಲ್ಲಿ ಜ. 24 ರಂದು ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನಾಕರರನ್ನು ಉದ್ದೇಶಿಸಿ ಕ್ಷೇತ್ರ ಸಮಿತಿ ಸದಸ್ಯ ಅಬ್ದುಲ್ ರೌಫ್, ಸ್ಥಳೀಯರು ರಸ್ತೆ ದುರಸ್ಥಿಗೆ ಆಗ್ರಹಿಸಿ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಗಳು ಆಗಿಲ್ಲ. ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚರಗೊಂಡು 1 ತಿಂಗಳೊಳಗೆ ರಸ್ತೆಗೆ ಡಾಂಬರು ಹಾಕಬೇಕು. 1 ತಿಂಗಳೊಳಗೆ ಕೆಲಸ ಆರಂಭವಾಗದಿದ್ದರೆ ಗ್ರಾಮದ ಎಲ್ಲಾ ನಾಗರೀಕನ್ನು ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ಬಂಗೇರಕಟ್ಟೆಯಿಂದ ಅಂಡಾಲ್- ನೆತ್ತರವರೆಗಿನ ರಸ್ತೆಯು ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಜನರು ಓಡಾಡಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದು, ಅದನ್ನು ಆದಷ್ಟು ಬೇಗ ದುರಸ್ಥಿಗೊಳಿಸಬೇಕೆಂದು ಕಣಿಯೂರು ಬ್ಲಾಕ್ ಕಾರ್ಯದರ್ಶಿಗಳಾದ ಹನೀಫ್ ಟಿ. ಎಸ್ ಆಗ್ರಹಿಸಿದರು.
ಮಚ್ಚಿನ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗೆ ರಸ್ತೆ ದುರಸ್ಥಿಗೆ ಆಗ್ರಹಿಸಿ ಮನವಿ ನೀಡಲಾಯಿತು. ಎಸ್. ಡಿ. ಪಿ. ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ, ಕಣಿಯೂರು ಬ್ಲಾಕ್ ಅಧ್ಯಕ್ಷ ಮುಸ್ತಾಫ ಬಂಗೇರಕಟ್ಟೆ, ರಝಕ್ ಬಿ. ಎಂ., ಖಾಸಿಂ ಬಳ್ಳಮಂಜ, ಪಾರೆಂಕಿ ಬ್ರಾಂಚ್ ಅಧ್ಯಕ್ಷ ಶಾಫಿ ಸಾಲುಮರ, ವಝೀರ್ ಸಾಲುಮರ, ದಾವೂದ್ ಬಳ್ಳಮಂಜ, ಬ್ರಾಂಚ್ ಪದಾಧಿಕಾರಿಗಳು, ಕಾರ್ಯಕರ್ತರು, ನಾಗರೀಕರು ಪಾಲ್ಗೊಂಡಿದ್ದರು.