ಪಟ್ಟಣ ಪಂಚಾಯತ್ ಚರಂಡಿ ದಾಟುವ ವೇಳೆ ಕುಸಿದು ಬಿದ್ದ ಮಹಿಳೆ – ಆಸ್ಪತ್ರೆಗೆ ದಾಖಲು – ಚರಂಡಿ ಹಣೆಬರಹಕ್ಕೆ ಹೊಣೆ ಯಾರು ?

0

p>

ಬೆಳ್ತಂಗಡಿ: ತಾಲೂಕು ಮಿನಿ ವಿಧಾನಸೌಧದ ಬಳಿ ಇರುವ ಐ. ಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಮುಂದೆ ಪಟ್ಟಣ ಪಂಚಾಯತ್ ತೆರೆದಿಟ್ಟ ಚರಂಡಿ ದಾಟುವ ವೇಳೆ ಹಿರಿಯ ಮಹಿಳೆಯೊಬ್ಬರು ಕುಸಿದು ಬಿದ್ದು ಕಾಲು ನೋವಿನಿಂದ ಆಸ್ಪತ್ರೆ ಸೇರಿದ ಘಟನೆ ಡಿ. 27 ರಂದು ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಲಕ್ಷ್ಮಿ, ಚರಂಡಿ ದಾಟುವ ವೇಳೆ ಕಾಲ್ಜಾರಿ ಬಿದ್ದಿದ್ದಾರೆ. ನೋಟರಿ ವಕೀಲರೊಬ್ಬರ ಕಚೇರಿಗೆ ಮಗಳೊಂದಿಗೆ ಬಂದಿದ್ದ ಮಹಿಳೆ ಚರಂಡಿ ದಾಟಿ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸೊಂಟ ಮತ್ತು ಕಾಲಿಗೆ ಗಂಭೀರ ಏಟು ಬಿದ್ದಿದ್ದು ಸ್ಥಳದಲ್ಲಿದ್ದ ನಾಗರಿಕರ ಸಹಕಾರದಿಂದ ಅಟೋ ರಿಕ್ಷಾದಲ್ಲಿ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ವಾಣಿಜ್ಯ ಕಟ್ಟಡ ಮಾಲಕರು ಕಾನೂನು ಮೀರಿದ್ದು ಕಟ್ಟಡ ನಿಯಮ ಪಾಲಿಸಿಲ್ಲ, ಸಮರ್ಪಕ ಚರಂಡಿಯನ್ನೂ ಮಾಡಿಲ್ಲ ಎಂಬ ಏಕೈಕ ನೆಪದಲ್ಲಿ ಈ ಹಿಂದೆ ಮುಚ್ಚಲಾಗಿದ್ದ ಚರಂಡಿಯನ್ನು ತೆರೆದು
ಹಾಗೆ ಬಿಟ್ಟು 2 ತಿಂಗಳುಗಳಾಗುತ್ತಾ ಬಂದಿದೆ.

ಕಟ್ಟಡದ ಮುಂದೆ ಕಟ್ಟಡ ಮಾಲಕರೇ ಚರಂಡಿ ವ್ಯವಸ್ಥೆ ಮಾಡಬೇಕು. ಅದು ಪಟ್ಟಣ ಪಂಚಾಯತ್ ಆಡಳಿತದ ಜವಾಬ್ದಾರಿಯಲ್ಲ ಎಂದು ಕಟ್ಟಡ ಮಾಲಕರತ್ತ ಬೆರಳು ತೋರಿಸುತ್ತಾ ಚರಂಡಿ ತೆರೆದಿಟ್ಟು ಕೈಕಟ್ಟಿ ಕುಳಿತು ಚಂದ ನೋಡುತ್ತಿದೆ, ಇತ್ತ ಕಟ್ಟಡ ಮಾಲಕರು ಯಾವುದೇ ಗೊಡವೆಯೇ ಇಲ್ಲದೆ ಇತ್ತ ತಲೆಯೂ ಹಾಕದೆ, ಬಾಡಿಗೆದಾರರ ಸಂಕಷ್ಟ ಕೇಳದೆ ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಕಟ್ಟಡ ಮಾಲಕರು ಮತ್ತು ಪಟ್ಟಣ ಪಂಚಾಯತ್ ಆಡಳಿತದ ಬೇಜವಾಬ್ದಾರಿಯಿಂದ ನಾಗರಿಕರು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here