ಗೇರುಕಟ್ಟೆ: ಬೈಹುಲ್ಲು ಟ್ರಕ್ ಗೆ ತಗುಲಿದ ಬೆಂಕಿ- ಸ್ಥಳೀಯ ಯುವಕರಿಂದ ಬೆಂಕಿ ನಂದಿಸಲು ಸಹಕಾರ

0

ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮದ ಬಟ್ಟೆಮಾರು ಸಮೀಪದ ಕೊಯ್ಯೂರು-ಪರಪ್ಪು ರಸ್ತೆಯ ರಕ್ತೇಶ್ವರಿಪದವು ಕೂಡು ರಸ್ತೆಯ ಪಕ್ಕದಲ್ಲಿ ಬೈಹುಲ್ಲು ಲಾರಿಗೆ ಬೆಂಕಿ ತಗುಲಿ ಬೈಹುಲ್ಲು ಹೊತ್ತಿ ಉರಿದ ಘಟನೆ ಎ.11ರಂದು ಮಧ್ಯಾಹ್ನ ನಡೆಯಿತು.

ಬೈಹುಲ್ಲು ಲಾರಿಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಾಗ ರಸ್ತೆ ಪಕ್ಕದ ಯಾಕೂಬು ಮನೆಯವರು ನೋಡಿ ತಕ್ಷಣ ಲಾರಿ ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ತಂದರು.

ನಂತರ ಸ್ಥಳೀಯ ಯುವಕರ ತಂಡ ಮನೆಗೆ-ಮನೆಗೆ ಧಾವಿಸಿ ನೀರು ತಂದು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಕಳಿಯ ಗ್ರಾ. ಪಂ.ಸದಸ್ಯ ಅಬ್ದುಲ್ ಕರೀಂ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.

ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಹಾಗೂ ಗೇರುಕಟ್ಟೆ ವಿನಯ ಪ್ರಸಾದ್ ರವರ ಜೆ.ಸಿ.ಬಿ.ಸಹಾಯದಿಂದ ಮತ್ತು ಪುರಂದರ ನಾಯ್ಕರವರು ಕೊಳವೆ ಬಾವಿ ನೀರನ್ನು ನೀಡುವ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಸಹಕರಿಸಿದರು.ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸ್ಥಳೀಯರೊಂದಿಗೆ ಕೈಜೋಡಿಸಿದರು.

ಲಾರಿಯಿಂದ ಬೈಹುಲ್ಲನ್ನು ಸಂಪೂರ್ಣ ಹೊರತೆಗೆಯಲಾಗಿದ್ದು ಬೆಂಕಿಯ ಜ್ವಾಲೆಗೆ ಲಾರಿಯ ಮೇಲೈ ಸುಟ್ಟು ಕರಕಲಾಗಿದೆ.

ಬಟ್ಟೆಮಾರು ಜನತಾ ಕಾಲೋನಿಯಲ್ಲಿ ರಂಜಾನ್‌ ಹಬ್ಬದ ಆಚರಣೆಗೆ ಬಂದು ಸೇರಿದ್ದ ಯುವಕರು, ಸ್ಥಳೀಯರು ಜಾತಿ ಮತ ಭೇಧ ಮರೆತು ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸುವ ಕೆಲಸಕ್ಕೆ ಕೈ ಜೋಡಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಜೀವ ಮತ್ತು ಲಾರಿಯನ್ನು ಉಳಿಸಿಕೊಳ್ಳಲು ಶ್ರಮಿಸಿದ ಜನರಿಗೆ ಸಕಲೇಶಪುರದ ಲಾರಿಚಾಲಕ ಮತ್ತು ನಿರ್ವಾಕ ಕಣ್ಣೀರು ಹಾಕಿ ಕೃತಜ್ಞತೆ ಸಲ್ಲಿಸಿದರು.

ಅವಘಡಕ್ಕೆ ಕಾರಣ: ಬೆಂಕಿ ಅವಘಡ ಸಂಭವಿಸಿದ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ತಂತಿ ನೇತು ಬಿದ್ದಿದ್ದು ತಂತಿ ಜೋತು ಬಿದ್ದಿರುವ ಪರಿಸ್ಥಿತಿಯಿಂದ ತಂತಿಯ ಮೂಲಕ ಬೈಹುಲ್ಲಿಗೆ ಬೆಂಕಿ ತಗುಲಿದೆ ಎಂದು ಸಳೀಯರು ಆರೋಪಿಸುತ್ತಿದ್ದಾರೆ.

p>

LEAVE A REPLY

Please enter your comment!
Please enter your name here