ಬೆಳ್ತಂಗಡಿ: ದೂರದ ಅಮೇರಿಕಾದಲ್ಲಿ ನೆಲೆಸಿದರೂ ತಮ್ಮ ಗೃಹಪ್ರವೇಶ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಬಿಡದೆ ಹೊರದೇಶದಲ್ಲಿಯೂ ಕಟ್ಟುಪಾಡು ಪಾಲಿಸುವ ಮೂಲಕ ಉಜಿರೆಯ ದೀಪ್ತಿ ಕಾಂಚೋಡು ಮತ್ತು ಡಾ.ಶುಭಮಯಿ ಚಟರ್ಜಿ ಅವರು ಸನಾತನ ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದ್ದಾರೆ.
ಡಿ.29 ರಂದು ಅಮೇರಿಕಾದ ಕೊಲೆರೋಡದಲ್ಲಿ ನಡೆದ ನೂತನ ಗೃಹಪ್ರವೇಶದ ಕಾರ್ಯಕ್ರಮ ಸಂಪೂರ್ಣವಾಗಿ ಭಾರತೀಯ ಪೂಜಾ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.ಇದು ಅಲ್ಲಿನ ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿಕೊಂಡದ್ದಲ್ಲದೆ ಅಭಿಮಾನ ಮೆರೆಯುವಂತೆ ಮಾಡಿತು.
ಗೃಹಪ್ರವೇಶದ ಸಂಪ್ರದಾಯದಂತೆ ಹಿಂದಿನ ದಿನ ವಾಸ್ತು ಹೋಮ, ಮರು ದಿನ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆದವು.ಉಡುಪಿ ಪುತ್ತಿಗೆ ಮಠದ ಅಮೇರಿಕದ ಶಾಖೆಯ ಪುರೋಹಿತ ವಾದಿರಾಜ ಭಟ್ಟರು ನೇತೃತ್ವ ನೀಡಿದರು.ಈ ವೇಳೆ ಆಹ್ವಾನಿತ ವಿದೇಶಿ ಪ್ರಜೆಗಳು ಮುಖ್ಯವಾಗಿ ನಮ್ಮ ದೇಶದ ಧಾರ್ಮಿಕ ವಿಧಿ ವಿಧಾನಗಳನ್ನು ಗೌರವ ಭಾವದಿಂದ ಕಣ್ತುಂಬಿಕೊಂಡರು. ಅತಿಥ್ಯ ಸ್ವೀಕರಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ದೀಪ್ತಿ ಕಾಂಚೋಡು ಅವರು ಉಜಿರೆಯ ಮಾಜಿ ಯೋಧ ಲ.ಡಾ.ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ಸುಲೋಚನಾ ಕಾಂಚೋಡು ದಂಪತಿಯ ಪುತ್ರಿ.ಎಂಎಸ್ಸಿ ಪದವೀಧರೆಯಾಗಿರುವ ದೀಪ್ತಿ ಅವರು ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದಾರೆ.ಅವರ ಪತಿ ಡಾ.ಶುಭಮಯಿ ಚಟರ್ಜಿ ಅವರು ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದಾರೆ.